ನವದೆಹಲಿ: ಕೃಷಿ ಕಾಯ್ದೆಯನ್ನು ವಿರೋಧಿಸಿ ಟ್ರ್ಯಾಕ್ಟರ್ ರ್ಯಾಲಿ ನಡೆಸಿದ ರೈತರ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದರಿಂದ ಇದೀಗ ದೆಹಲಿ ಪೊಲೀಸರು ವಿವಿಧ ಠಾಣೆಗಳಲ್ಲಿ 15 ಎಫ್ ಐಆರ್ ದಾಖಲಿಸಿದ್ದಾರೆ. ಇನ್ನೂ ಹೆಚ್ಚಿನ ಎಫ್ ಐಆರ್ ದಾಖಲಾಗುವ ಸಾಧ್ಯತೆಗಳಿವೆ ಎಂದು ವರದಿ ತಿಳಿಸಿದೆ.
ಗಣರಾಜ್ಯೋತ್ಸವದಂದು ನಡೆದ ಕೋಲಾಹಲದಲ್ಲಿ 7 ಬಸ್ ಗಳು ಸೇರಿದಂತೆ 17 ಖಾಸಗಿ ವಾಹನಗಳು ಧ್ವಂಸಗೊಂಡಿದ್ದವು. ಮಾತ್ರವಲ್ಲದೆ ಘಟನೆಯಲ್ಲಿ 86 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು. ದೆಹಲಿ ಮುಖರ್ಬಾ ಚೌಕ್, ಗಾಝಿಪುರ್, ಐಟಿಓ, ಸೀಮ್ ಪುರಿ, ನಾಂಗ್ಲೋಯಿ ಟಿ ಪಾಯಿಂಟ್, ಟಿಕ್ರಿ ಗಡಿ, ಕೆಂಪುಕೋಟೆ ಮುಂತಾದ ಕಡೆ ಗಲಭೆ ಏರ್ಪಟ್ಟಿದ್ದವು. ಗಾಝಿಪುರ್, ಟಿಕ್ರಿ ಮತ್ತು ಸಿಂಘು ಗಡಿಯಲ್ಲಿ ಬ್ಯಾರಿಕೇಡ್ ಗಳನ್ನು ಧ್ವಂಸ ಮಾಡಲಾಗಿತ್ತು.
ಶಾಂತಿಯುತ ರ್ಯಾಲಿ ನಡೆಸಲೆಂದು ಸಂಯುಕ್ತ್ ಕಿಸಾನ್ ಮೋರ್ಚಾ ದೆಹಲಿ ಪೊಲೀಸರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿತ್ತು. ಅದಾಗ್ಯೂ ರ್ಯಾಲಿ ಪ್ರಾರಂಭಿಸಿದ ಕೆಲವೇ ಕ್ಷಣಗಳಲ್ಲಿ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು. 7 ಸಾವಿರಕ್ಕಿಂತ ಹೆಚ್ಚಿನ ಟ್ರ್ಯಾಕ್ಟರ್ ಗಳು ಸಿಂಘು ಗಡಿಗೆ ಧಾವಿಸಿದ್ದವು. ಜೊತೆಗೆ ಖಡ್ಗ, ಗುರಾಣಿ ಸೇರಿದಂತೆ ಹಲವಾರು ಆಯುಧಗಳನ್ನು ಹೊತ್ತು ತಂದಿದ್ದರು. ಪೂರ್ವ ನಿಗದಿತ ಮಾರ್ಗದ ಬದಲಿಗೆ ಸೆಂಟ್ರಲ್ ದೆಹಲಿಯತ್ತ ಹೊರಟ ರೈತರು ಪೊಲೀಸರೊಂದಿಗೆ ಸಂಘರ್ಷ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ದೆಹಲಿ ಹಿಂಸಾಚಾರ:ಆಸ್ಟ್ರೇಲಿಯಾದಿಂದ ಹಿಂದಿರುಗಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮೃತ ವ್ಯಕ್ತಿ
Related Articles
ಮಂಗಳವಾರ (ಜ.16) ರೈತರು ಪೊಲೀಸರೊಂದಿಗೆ ಸಂಘರ್ಷ ಹಾಗೂ ವಾಹನಗಳನ್ನು ಧ್ವಂಸಗೊಳಿಸುವ ಮೂಲಕ ಐತಿಹಾಸಿಕ ಕೆಂಪುಕೋಟೆಯಲ್ಲಿ ಧ್ವಜವನ್ನು ಹಾರಿಸಿದ್ದರು. ಪ್ರತಿಭಟನೆಯ ವೇಳೆ ಟ್ರ್ಯಾಕ್ಟರ್ ವೊಂದು ಮಗುಚಿ ಬಿದ್ದ ಪರಿಣಾಮ ಪ್ರತಿಭಟನಾಕಾರರೊಬ್ಬ ಕೂಡ ಸಾವನ್ನಪ್ಪಿದ್ದನು.
ಇದನ್ನೂ ಓದಿ: ಫೇಸ್‌ಬುಕ್ ಬಳಕೆದಾರರೇ ಎಚ್ಚರ : ಖಾತೆ ಹ್ಯಾಕ್; ನಿಮ್ಮ ಹೆಸರಲ್ಲಿ ಸ್ನೇಹಿತರಿಂದ ಹಣ ಲೂಟಿ