ಬಾಗಲಕೋಟೆ: ಮುಂಗಾರು ಮಳೆಯ ಕಣ್ಣಾಮುಚ್ಚಾಲೆಯಿಂದ ಜಿಲ್ಲೆಯ ರೈತರು ಆತಂಕಗೊಂಡಿದ್ದಾರೆ. ನಿತ್ಯವೂ ಮೋಡ ಕವಿದ ವಾತಾವರಣ ಇದ್ದರೂ, ಮಳೆಯ ಹನಿ ಭೂಮಿಗೆ ಬೀಳದೇ ಮಳೆರಾಯ ಆಟವಾಡುತ್ತಿದ್ದಾನೆ. ಹೀಗಾಗಿ ಬಿತ್ತಿನ ಬೆಳೆ ಕೈಗೆ ಬರುತ್ತೋ- ಇಲ್ವೋ ಎಂಬ ಆತಂಕ ರೈತರಲ್ಲಿದೆ.
ಜಿಲ್ಲೆಯಲ್ಲಿ ಶೇ.85.72ರಷ್ಟು ಮುಂಗಾರು ಬಿತ್ತನೆಯಾಗಿದೆ. ಮುಧೋಳ, ಬೀಳಗಿ ಮತ್ತು ಜಮಖಂಡಿ ಬಹು ಭಾಗದಲ್ಲಿ ಕಬ್ಬು ನಾಟಿ ಮಾಡಿದ್ದರೆ, ಉಳಿದೆಡೆ ಮುಂಗಾರು ಹಂಗಾಮಿನ ಸಾಮಾನ್ಯ ಬೆಳೆ ಬಿತ್ತನೆ ಮಾಡಲಾಗಿದೆ. ಸಜ್ಜೆ, ಗೋವಿನ ಜೋಳ, ತೊಗರಿ, ಸೂರ್ಯಕಾಂತಿ, ಹೆಸರು ಮುಂತಾದ ಬೆಳೆ ಬಿತ್ತನೆ ಮಾಡಿದ ರೈತ, ಸರಿಯಾದ ಸಮಯಕ್ಕೆ ಮಳೆ ಬಾರದೇ ಮುಗಿಲಿನತ್ತ ಮುಖ ಮಾಡಿದ್ದಾನೆ.
ಶೇ.85.72 ಬಿತ್ತನೆ : ಕಳೆದ ಜೂನ್ ಮತ್ತು ಜುಲೈ ಮೊದಲ ವಾರದಲ್ಲಿ ಮುಂಗಾರು ಬಿತ್ತನೆ ಕಾರ್ಯ ಕೈಗೊಳ್ಳುವುದು ರೈತರ ವಾಡಿಕೆ. ಬಿತ್ತನೆ ಸಂದರ್ಭದಲ್ಲಿ ಆಗಿದ್ದ ಮಳೆ, ಬಿತ್ತನೆ ಬಳಿಕ ಬೆಳೆ ಚಿಗುರೊಡೆಯಲು ಸರಿಯಾಗಿ ಬಂದಿಲ್ಲ. ಹೀಗಾಗಿ ರೈತರು, ಕಾಲುವೆ, ಕೊಳವೆ ಬಾವಿ ಇಲ್ಲವೇ ತೆರೆಯ ಬಾವಿ ಮೂಲಕ ಬೆಳೆಗಳಿಗೆ ನೀರು ಹಾಯಿಸಿ, ಬಿತ್ತಿದ ಬೆಳೆ ಕಾಯ್ದುಕೊಂಡಿದ್ದಾರೆ.
ಜಿಲ್ಲೆಯಲ್ಲಿ ಮುಂಗಾರು ಬಿತ್ತನೆ 2.40 ಲಕ್ಷ ಹೆಕ್ಟೇರ್ ಗುರಿ ಇದ್ದು, ಅದರಲ್ಲಿ 2,05,866 ಹೆಕ್ಟೇರ್ (ಶೇ.85.72) ಬಿತ್ತನೆಯಾಗಿದೆ. ಆದರೆ, ಹುನಗುಂದ ತಾಲೂಕಿನ ಕಂದಗಲ್ಲ ಹಾಗೂ ಬೀಳಗಿ ತಾಲೂಕಿನ ಬಾಡಗಿ ವ್ಯಾಪ್ತಿಯಲ್ಲಿ ಮಳೆ ಪ್ರಮಾಣ ಅತ್ಯಂತ ಕಡಿಮೆಯಾಗಿದೆ. ಹೀಗಾಗಿ ಬಿತ್ತಿದ ಬೆಳೆ ಒಣಗುತ್ತಿವೆ.
ಕಂದಗಲ್ಲ ಗ್ರಾಮದಲ್ಲಿ ಮಳೆಗಾಲದಲ್ಲೂ ಭರದ ಛಾಯೆ ಆವರಿಸಿದೆ. ಹೀಗಾಗಿ ಇಲ್ಲಿ ಕೆಲವೇ ಕೆಲವು ರೈತರು ಮಾತ್ರ ಬಿತ್ತನೆ ಮಾಡಿದ್ದು, ಆ ಬೆಳೆಯೂ ಒಣಗಿದೆ. ಗ್ರಾಮದ ಶೇಖರಯ್ಯ ಮಠ ಎಂಬ ರೈತ ನಾಲ್ಕು ಎಕರೆ ಭೂಮಿಯಲ್ಲಿ ಹಾಕಿದ್ದ ಕಬ್ಬು ಬೆಳೆ ಸಂಪೂರ್ಣ ಒಣಗಿದೆ. ಕೊಳವೆ ಬಾವಿಯಲ್ಲೂ ಸರಿಯಾಗಿ ನೀರು ಬಂದಿಲ್ಲ. ಹೀಗಾಗಿ ಕೈಯಾರ್ ಬಿತ್ತಿದ ಬೆಳೆ ಉಳಿಸಿಕೊಳ್ಳಲು ಆಗಿಲ್ಲ. ಜಿಲ್ಲೆಯ ಬಹುತೇಕ ಕಡೆ ಉತ್ತಮ ಬಿತ್ತನೆಯಾಗಿದ್ದು, ತೆನೆ ಕಟ್ಟುವ ಮೊದಲೇ ಮಳೆಯಾರ ಆಟವಾಡುತ್ತಿದ್ದಾನೆ. ಹೀಗಾಗಿ ಬಿತ್ತಿದ ಬೆಳೆ ಕೈಗೆ ಬರುತ್ತೋ ಇಲ್ವೋ ಎಂಬ ಆತಂಕದಲ್ಲಿ ಅನ್ನದಾತನಿದ್ದಾನೆ.
ಕಬ್ಬು ನಾಟಿ ಮಾಡುವ ವೇಳೆ ಮಳೆ ಬರುತ್ತಿತ್ತು. ಹೀಗಾಗಿ ಮುಂಗಾರು ಆರಂಭದಲ್ಲೇ ಉತ್ತಮ ಮಳೆ ಬರುತ್ತಿದ್ದು, ಮುಂದೆಯೂ ಸರಿಯಾಗಿ ಮಳೆ ಬರುತ್ತದೆ ಎಂಬ ಆಶೆಯಿಂದ ಬಿತ್ತನೆ ಮಾಡಿದ್ದೆ. ಮಳೆ ಇಲ್ಲದೇ ನಾಲ್ಕು ಎಕರೆ ಕಬ್ಬು ಒಣಗಿದೆ.
ಶೇಖರಯ್ಯ ಮಠ,
ಕಂದಗಲ್ಲ ರೈತ.
ಜಿಲ್ಲೆಯಲ್ಲಿ ಶೇ.85.72ರಷ್ಟು ಬಿತ್ತನೆಯಾಗಿದೆ. ಕಳೆದ ಬಾರಿಗೆ ಹೋಲಿಸಿದರೆ, ಈ ಬಾರಿ ಬಿತ್ತನೆ ಪ್ರಮಾಣ ಹೆಚ್ಚಿದೆ. ಸದ್ಯಕ್ಕೆ ಬೆಳೆ ಹಾನಿಯಾಗುವ ಭೀತಿ ಇಲ್ಲ. ಆದರೆ, ಜಿಲ್ಲೆಯ ಕೆಲವೆಡೆ ಮಾತ್ರ ಉತ್ತಮ ಮಳೆಯಾಗಿಲ್ಲ.
ಡಾ|ಪಿ.ರಮೇಶಕುಮಾರ,
ಜಂಟಿ ಕೃಷಿ ನಿರ್ದೇಶಕ.
ಶ್ರೀಶೈಲ ಕೆ. ಬಿರಾದಾರ