Advertisement
ಪ್ರವಾಹದಿಂದ ಬಾಧಿತವಾದ ಗ್ರಾಮಗಳ ಸಂತ್ರಸ್ತರ ಬಟ್ಟೆ-ಬರೆ ಹಾಗೂ ದಿನಬಳಕೆ ವಸ್ತುಗಳಿಗಾಗಿ ಕೇಂದ್ರ ಸರಕಾರವು ಎಸ್‌ಡಿಆರ್‌ಎಫ್/ಎನ್‌ಡಿಆರ್‌ಎಫ್ ಮಾರ್ಗಸೂಚಿಯಲ್ಲಿ ಪ್ರತಿ ಕುಟುಂಬಕ್ಕೆ ನಿಗದಿಪಡಿಸಿರುವ 3,800 ರೂ.ಗಳೊಂದಿಗೆ ಹೆಚ್ಚುವರಿಯಾಗಿ ರಾಜ್ಯ ಸರಕಾರದ ವತಿಯಿಂದ 6,200 ರೂ. ಸೇರಿ ಒಟ್ಟು 10,000 ರೂ. ಪರಿಹಾರವನ್ನು ಪ್ರತೀ ಕುಟುಂಬಕ್ಕೆ ನೀಡಲು ಸರಕಾರ ಮಂಜೂರಾತಿ ನೀಡಿದೆ.ಶೇ.75ಕ್ಕಿಂತ ಹೆಚ್ಚು ಸಂಪೂರ್ಣ ಮನೆ ಹಾನಿಗೆ ಪರಿಷ್ಕೃತ ಪರಿಹಾರ ಮೊತ್ತ 5 ಲಕ್ಷ ರೂ., ಶೇ.25ರಿಂದ 75ರಷ್ಟು ಭಾಗಶಃ ಮನೆಹಾನಿಗೆ (ಕೆಡವಿ ಹೊಸದಾಗಿ ನಿರ್ಮಾಣ) 5 ಲಕ್ಷ ರೂ., ಶೇ.25-75ರಷ್ಟು ಭಾಗಶಃ ಮನೆಹಾನಿ (ದುರಸ್ತಿ)ಗೆ 3 ಲಕ್ಷ ರೂ., ಶೇ.15-25ರಷ್ಟು ಅಲ್ಪಸ್ವಲ್ಪ ಮನೆ ಹಾನಿಗೆ 50,000 ರೂ. ನೆರೆ ಸಂತ್ರಸ್ತರ ಬಟ್ಟೆ ಬರೆ ಹಾಗೂ ದಿನಬಳಕೆ ವಸ್ತುಗಳಿಗಾಗಿ 10,000 ರೂ. ಪರಿಹಾರವನ್ನು ಎಸ್‌ಡಿಆರ್‌ಎಫ್ ನಿಧಿಯಿಂದ ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ಜಿಲ್ಲಾಧಿಕಾರಿಗಳು ವೆಚ್ಚದ ಬಗ್ಗೆ ಕುಟುಂಬವಾರು ಲೆಕ್ಕವನ್ನು ಕಡ್ಡಾಯವಾಗಿ ನಿರ್ವಹಿಸಬೇಕು. ವೆಚ್ಚದ ಬಳಕೆ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಪ್ರವಾಹದಿಂದ ಮನೆ ಕಳೆದುಕೊಂಡಿರುವ ಸಂತ್ರಸ್ತರಿಗೆ ರಾಜೀವ್ ಗಾಂಧಿ ವಸತಿ ನಿಗಮ ನಿ. ವತಿಯಿಂದ ಅಭಿವೃದ್ಧಿಪಡಿಸಲಾದ ತಂತ್ರಾಂಶದ ಮೂಲಕ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತದೆ. ಮಳೆಯಿಂದಾಗಿ ದ.ಕ. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 4 (ಮಂಗಳೂರು-3, ಪುತ್ತೂರು-1) ಜೀವಹಾನಿ ಸಂಭವಿಸಿದೆ. ತಲಾ 5 ಲಕ್ಷ ರೂ.ಗಳಂತೆ ಅವರಿಗೆ 20 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಇಬ್ಬರು ಗಾಯಗೊಂಡಿದ್ದಾರೆ. ಒಂದು ಜಾನುವಾರಿಗೆ ಜೀವಹಾನಿ ಸಂಭವಿಸಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.
ಸರ್ವ ಸಿದ್ಧತೆ
ದ.ಕ. ಜಿಲ್ಲೆಯಲ್ಲಿ ಆ. 8ರ ವರೆಗೆ 824 ಮನೆ ಹಾನಿ ಆಗಿದೆ. ಎ. 1ರಿಂದ ಆ. 4ರ ವರೆಗೆ ತಹಶೀಲ್ದಾರರ ಹಂತದಲ್ಲಿ 90.64 ಲಕ್ಷ ರೂ. ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಡಿ ಎಸ್‌ಡಿಆರ್‌ಎಫ್ ನಿಯಮಗಳನ್ವಯ ಪಾವತಿ ಮಾಡಲಾಗಿದೆ. ಮಳೆ ಅನಾಹುತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಸರ್ವ ಸಿದ್ಧತೆಗಳನ್ನು ಮಾಡಲಾಗಿದೆ.
– ಡಾ| ಕೆ.ವಿ. ರಾಜೇಂದ್ರ, ಜಿಲ್ಲಾಧಿಕಾರಿ, ದ.ಕ.