ಉತ್ತರ ಪ್ರದೇಶ: 82 ವರ್ಷ ವಯಸ್ಸಿನ ವೃದ್ಧೆಯೋರ್ವಳು ಕೋವಿಡ್ ವಿರುದ್ಧದ ಹೋರಾಟದಲ್ಲಿ ಗೆಲುವು ಪಡೆದಿದ್ದಾರೆ. ಮಹಾಮಾರಿ ಸೋಂಕಿಗೆ ಸೆಡ್ಡು ಹೊಡೆದ ಇಳಿ ವಯಸ್ಸಿನ ಅಜ್ಜಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ಉತ್ತರ ಪ್ರದೇಶದ ಗೋರಖಪುರ್ ಜಿಲ್ಲೆಯ ಅಲಿನಗರ ನಿವಾಸಿ ವಿದ್ಯಾದೇವಿ ಕೋವಿಡ್ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ವಿದ್ಯಾದೇವಿಗೆ ಕೋವಿಡ್ ಪಾಸಿಟಿವ್ ಸೋಂಕು ಕಾಣಿಸಿಕೊಂಡಿತ್ತು. ತೀವ್ರ ಉಸಿರಾಟದ ಸಮಸ್ಯೆಯೂ ಇತ್ತು. ಆದರೆ, ವೈದ್ಯರ ಸಲಹೆ ಹಾಗೂ ಮನೆಯವರ ಸಹಕಾರದಿಂದ ಕೇವಲ 12 ದಿನಗಳಲ್ಲಿ ವಿದ್ಯಾದೇವಿ ಕೋವಿಡ್ ಗೆದ್ದು ಬಂದಿದ್ದಾರೆ.
ಈ ಬಗ್ಗೆ ಮಾತನಾಡಿರುವ ವಿದ್ಯಾದೇವಿ ಅವರ ಹಿರಿಯ ಪುತ್ರ ಹರಿ ಮೋಹನ್, ಅಮ್ಮನಿಗೆ ಕೋವಿಡ್ ಪಾಸಿಟಿವ್ ಬಂದಾಗ ನಮಗೆ ಗಾಬರಿಯಾಗಿತ್ತು. ಆದರೆ, ವೈದ್ಯರ ಧೈರ್ಯದ ಮಾತುಗಳು ಹಾಗೂ ಸಲಹೆಗಳು ಕೋವಿಡ್ ಸೋಂಕು ದೂರ ಓಡಿ ಹೋಗುವಂತೆ ಮಾಡಿತು ಎಂದಿದ್ದಾರೆ.
ವಿದ್ಯಾ ದೇವಿ ಅವರ ಇಡೀ ಕುಟುಂಬಕ್ಕೂ ಕೋವಿಡ್ ಸೋಂಕು ವಕ್ಕರಿಸಿಕೊಂಡಿತ್ತು.ಈ ಬಗ್ಗೆ ಹೇಳಿರುವ ಹರಿ, ಸಕಾರಾತ್ಮಕ ಮನೋಭಾವನೆ ಹಾಗೂ ವೈದ್ಯರು ಸೂಚಿಸಿದ ಮೆಡಿಸಿನ್ ಸರಿಯಾಗಿ ತೆಗೆದುಕೊಂಡಿದ್ದರಿಂದ ನಾವು ಅಪಾಯದಿಂದ ಪಾರಾದೆವು. ದೇಶದಲ್ಲಿ ಕೋವಿಡ್ ಸೃಷ್ಠಿಸುತ್ತಿರುವ ಭೀಕರತೆ ನೋಡಿ ನಮಗೆ ಭಯವಾಗಿತ್ತು. ಆದರೆ, ವೈದ್ಯರು ನಮಗೆ ಧೈರ್ಯ ತುಂಬಿದರು. ಹಾಗೂ ಪಾಸಿಟಿವ್ ಥಿಂಕಿಂಗ್ ಹಾಗೂ ಒಳ್ಳೆಯ ಆಹಾರ ಸೇವನೆಯಿಂದ ಬೇಗನೆ ಗುಣಮುಖರಾದೆವು ಎಂದಿದ್ದಾರೆ.
ಇನ್ನು ಇತ್ತೀಚಿಗಷ್ಟೆ 105 ವಯಸ್ಸಿನ ವೃದ್ಧ ಹಾಗೂ 95 ವರ್ಷ ವಯಸ್ಸಿನ ಆತನ ಪತ್ನಿ ಕೋವಿಡ್ ವಿರುದ್ಧ ಹೋರಾಡಿ ಗೆದ್ದು ಬಂದಿರುವ ಕುರಿತು ವರದಿಯಾಗಿತ್ತು.