Advertisement

ರಸ್ತೆ-ಕಟ್ಟಡ ನಿರ್ಮಾಣಕ್ಕೆ 82 ಕೋಟಿ ರೂ. ಬಿಡುಗಡೆ

12:34 PM Nov 26, 2019 | Team Udayavani |

ಹೊಸದುರ್ಗ: ಲೋಕೋಪಯೋಗಿ ಇಲಾಖೆಗೆ 2018 ರಿಂದ 20ರವರೆಗೆ ರಸ್ತೆ ಮತ್ತು ಕಟ್ಟಡ ನಿರ್ಮಾಣಕ್ಕಾಗಿ 82 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಗೂಳಿಹಟ್ಟಿ ಶೇಖರ್‌ ತಿಳಿಸಿದರು.

Advertisement

ಪಟ್ಟಣದ ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ಸೋಮವಾರ ನಡೆದ ತ್ತೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಾಲೂಕಿನಲ್ಲಿ ಶಾಶ್ವತ ಹೆಲಿಪ್ಯಾಡ್‌ ನಿರ್ಮಿಸುವ ಸಲುವಾಗಿ 5 ಎಕರೆ ಜಾಗ ನೀಡಲಾಗುವುದು ಎಂದರು. ವಿವಿಧ ಇಲಾಖೆ ಅಧಿಕಾರಿಗಳು

ರೈತರನ್ನು ಅಲೆದಾಡಿಸದೆ ಕಾಲಮಿತಿಯೊಳಗೆ ಕೆಲಸ ಮಾಡಿಕೊಡಬೇಕು. ಪೌತಿ ಖಾತೆ ಆಂದೋಲನದಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು. ಕೆರೆ ಮಾರ್ಗದ ಹಳ್ಳ ಒತ್ತುವರಿ ಮಾಡಿ ಅಕ್ರಮವಾಗಿ ನಿವೇಶನ ನಿರ್ಮಿಸಿರುವವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಪಟ್ಟಣದ ನಂಜಯ್ಯನಕೆರೆ ಅಭಿವೃದ್ಧಿ ಕುರಿತು ಶಾಸಕರು ಅಧಿ ಕಾರಿಗಳನ್ನು ಪ್ರಶ್ನಿಸಿದಾಗ, ನಂಜಯ್ಯನಕೆರೆ ಸಂಪರ್ಕಿಸುವ ಹಳ್ಳವನ್ನು ಅತಿಕ್ರಮಣ ಮಾಡಿ ನಿವೇಶನ ನಿರ್ಮಿಸಲಾಗಿದೆ.

ಇದರಿಂದಾಗಿ ಕೆರೆ ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ಉತ್ತರಿಸಿದರು. ಒತ್ತುವರಿ ಮಾಡಿರುವವರಿಗೆ ತೆರವುಗೊಳಿಸುವಂತೆ ನೋಟಿಸ್‌ ನೀಡಿ ಇಲ್ಲವೇ ದೂರು ದಾಖಲಿಸಿ. ತಾಲೂಕಿನಲ್ಲಿ ಸರ್ವೆ ನಡೆಸಿ ಅತಿಕ್ರಮಣಗೊಂಡಿರುವ ಕೆರೆಗಳ ಮಾಹಿತಿನೀಡುವಂತೆ ಶಾಸಕರು ಸೂಚಿಸಿದರು. ತಾಲೂಕಿನಲ್ಲಿ ಶಿಕ್ಷಕರ ವರ್ಗಾವಣೆಯಲ್ಲಿ ಆಗಿರುವ ಸಮಸ್ಯೆಗಳನ್ನು ಸರಿಪಡಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ತಿಳಿಸಿದರು.

ಕೆರೆ ಹೊಸಹಳ್ಳಿ ಶಾಲೆಯಲ್ಲಿ ಪರಸ್ಪರ ವರ್ಗಾವಣೆಗೊಂಡಿರುವ ಶಿಕ್ಷಕರು ಶಾಲೆಗೆ ಬಾರದ್ದರಿಂದ ಮಕ್ಕಳ ಶೈಕ್ಷಣಿಕ ಪ್ರಗತಿ ಕುಂಠಿತಗೊಂಡಿದೆ. ವಿಷಯವಾರು ಖಾಲಿ ಇರುವ ಹುದ್ದೆಗೆ ಅನುಗುಣವಾಗಿ ಅದೇ ವಿಷಯವಾರು ಶಿಕ್ಷಕರನ್ನು ನೇಮಕ ಮಾಡಬೇಕು ಎಂದರು.ಕೆರೆ ಹೊಸಹಳ್ಳಿ ಶಾಲೆಯಲ್ಲಿ ಶಿಕ್ಷಕರಿಂದ ಉಂಟಾಗಿರುವ ಸಮಸ್ಯೆಯನ್ನು ಶೀಘ್ರದಲ್ಲಿಯೇ ಬಗೆಹರಿಸಲಾಗುವುದು. ಈ ಬಗ್ಗೆ ಸಂಬಂಧಿಸಿದ ಶಿಕ್ಷಕರಿಗೆ ನೋಟಿಸ್‌ ನೀಡಿರುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್‌. ಜಯಪ್ಪ ತಿಳಿಸಿದರು.

Advertisement

ಲೋಕೋಪಯೋಗಿ ಇಲಾಖೆಯ ರಸ್ತೆ ಮತ್ತು ಕಟ್ಟಡ ನಿರ್ಮಾಣದ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ಗುತ್ತಿಗೆದಾರರನ್ನು ಕರೆಸಿ ಮಾರ್ಚ್‌ ಅಂತ್ಯದೊಳಗೆ ಕೆಲಸ ಪೂರ್ಣಗೊಳಿಸುವಂತೆ ಸೂಚಿಸಬೇಕು. ಇಲ್ಲದಿದ್ದರೆ ಅನುದಾನ ಕಡಿತಗೊಳ್ಳುತ್ತದೆ. ಕಳಪೆ ಗುಣಮಟ್ಟದ ಕಾಮಗಾರಿ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಇಇ ಈಶ್ವರಯ್ಯ ಅವರಿಗೆ ಶಾಸಕರು ಸೂಚನೆ ನೀಡಿದರು.

ರಸ್ತೆ ನಿರ್ವಹಣೆಗೆ ಅನುದಾನ ಬರುತ್ತದೆ. ಆದರೆ ನಿರ್ವಹಣೆ ಮಾತ್ರ ಕಳಪೆಯಾಗಿರುತ್ತದೆ. ನಿರ್ವಹಣೆ ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಿಕೊಳ್ಳಿ ಎಂದು ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಡಾ| ಕೆ. ಅನಂತ್‌, ಲೋಕೋಪೋಯೋಗಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಕುಡಿಯುವ ನೀರಿನ ಸಂಬಂಧಿಸಿದ ಇಂಜಿನಿಯರ್‌ ಕಚೇರಿಯಲ್ಲಿಯೇ ಇರುವುದಿಲ್ಲ ಎಂಬ ಆರೋಪ ಕೇಳಿ ಬಂದಿದೆ ಶಾಸಕರು ತಿಳಿಸಿದರು. ಜಿಲ್ಲಾ ಪಂಚಾಯತ್‌

ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್‌ ಇದಕ್ಕೆ ಧ್ವನಿಗೂಡಿಸಿದರು. ಸಭೆಯಲ್ಲಿ ಜಿಪಂ ಸದಸ್ಯ ಅಜ್ಜಪ್ಪ, ತಾಪಂ ಅಧ್ಯಕ್ಷೆ ಪ್ರೇಮಾ ರವೀಂದ್ರ, ತಾಪಂ ಕಾರ್ಯನಿರ್ವಹಣಾಧಿಕಾರಿ ಜಾನಕಿರಾಮ್‌, ತಹಶೀಲ್ದಾರ್‌ ತಿಪ್ಪೇಸ್ವಾಮಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next