ವಿಜಯಪುರ: ರಾಜ್ಯದ ಮಹಿಳೆಯರಿಗೆ ಸರ್ಕಾರಿ ಸಾರಿಗೆ ಬಸ್ ಗಳಲ್ಲಿ ಉಚಿತ ಬಸ್ ಪ್ರಯಾಣ ಯೋಜನೆಯಿಂದ ಅನುಕೂಲವಾಗಿದೆ. ಆದರೂ ಬಿಜೆಪಿ ನಾಯಕರು ಅನಗತ್ಯವಾಗಿ ಟೀಕೆ ಮಾಡುತ್ತಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಮಂಗಳವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಒಂದೂ ಹೊಸ ಬಸ್ ಖರೀದಿ ಮಾಡಲಿಲ್ಲ. ಅಧಿಕಾರದ ಕೊನೆಯಲ್ಲಿ ಹೊಸ ಬಸ್ ಖರೀದಿಗೆ ತೀರ್ಮಾನಿಸಿದರೂ, ಅನುಷ್ಠಾನಕ್ಕೆ ತರಲಿಲ್ಲ. ನಮ್ಮ ಸರ್ಕಾರದಲ್ಲಿ ಹೊಸ ಬಸ್ ಬರುತ್ತಿವೆ ಎಂದರು.
13,888 ಸಾರಿಗೆ ಇಲಾಖೆಯ ನೌಕರರು ನಿವೃತ್ತಿ ಹೊಂದಿದ್ದರು. ನಾನು 2013ರಲ್ಲಿ ಮಂತ್ರಿ ಇದ್ದಾಗ ನೇಮಕಾತಿ ಮಾಡಿರುವುದು ಬಿಟ್ಟರೆ ಮತ್ತೆ ನೇಮಕಾತಿಯಾಗಿಲ್ಲ. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ನಾಲ್ಕು ವರ್ಷಗಳಲ್ಲಿ ಯಾವ ನೇಮಕಾತಿಯನ್ನೂ ಮಾಡಿರಲಿಲ್ಲ ಎಂದು ಹರಿಹಾಯ್ದರು.
ಕೋವಿಡ್ ಸಂಕಷ್ಟದ ಸಮಯದಲ್ಲಿ 3800 ಶೆಡ್ಯೂಲ್ ರದ್ದು ಮಾಡಲಾಗಿತ್ತು. ಹೀಗಾಗಿ ಚಾಲಕರ ಕೊರತೆಯಾಗುತ್ತದೆ. ಹಳೆ ಬಸ್ ಗುಜರಿಗೆ ಹಾಕುತ್ತೇವೆ, ಹೊಸ ಬಸ್ ಬಂದಿಲ್ಲ. 5500 ಹೊಸ ಬಸ್ ಖರೀದಿ ಮಾಡುತ್ತಿದ್ದೇವೆ. ಈಗಾಗಲೇ 13,800 ಹೊಸ ಬಸ್ ಖರೀದಿಗೆ ಅನುಮತಿ ಕೇಳಿದ್ದು, ಎಂಟು ಸಾವಿರ ಬಸ್ ಖರೀದಿಗೆ ಅನುಮತಿ ದೊರಕಿದೆ. ಖರೀದಿ ಪ್ರಕ್ರಿಯೆ ಆರಂಭವಾಗಿದೆ ಎಂದು ವಿವರಿಸಿದರು.
ಬರುವ 4-5 ತಿಂಗಳಲ್ಲಿ ರಾಜ್ಯದಲ್ಲಿ ಹೊಸ ಬಸ್ ಓಡಾಟ ನಡೆಸಲಿವೆ. ಎಂಟು ಸಾವಿರ ಸಿಬ್ಬಂದಿ ನೇಮಕಾತಿ ಆಗಲಿದೆ. ರದ್ದಾಗಿರುವ ಸಾರಿಗೆ ಸಂಚಾರ ಶೆಡ್ಯೂಲ್ ಪುನರಾರಂಭ ಆಗಲಿವೆ ಎಂದು ವಿವರಿಸಿದರು.
ಮಹಿಳೆಯರ ಉಚಿತ ಪ್ರಯಾಣ ಸೇವೆ ನೀಡಿದರೂ ಸಾರಿಗೆ ಸಂಸ್ಥೆ ಸಿಬ್ಬಂದಿಗೆ ನಾವು ಸರಿಯಾಗಿ ವೇತನ ನೀಡುತ್ತಿದ್ದೇವೆ ಎಂದರು.
ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಸಾರಿಗೆ ಸಂಸ್ಥೆಯ ಸಿಬ್ಬಂದಿಗೆ ಸರಿಯಾಗಿ ವೇತನ ಕೊಡುತ್ತಿರಲಿಲ್ಲ. ಮಹಿಳೆಯರ ಉಚಿತ ಪ್ರಯಾಣ ಯೋಜನೆ ಅನುಷ್ಠಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ನಲ್ಲಿ 2800 ಕೋಟಿ ರೂ. ಘೋಷಿಸಿದ್ದಾರೆ. ಪ್ರತಿ ತಿಂಗಳು ಅಗತ್ಯ ಅನುದಾನ ನೀಡುತ್ತಿದ್ದಾರೆ. ಹೀಗಾಗಿ ಬಿಜೆಪಿ ನಾಯಕರು ಅನಗತ್ಯ ಆರೋಪ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.