Advertisement
ಕೇರಳ ಗಡಿ ಭಾಗಕ್ಕೆ ಹೊಂದಿಕೊಂಡ ಎಂಟು ಶತಮಾನಗಳ ಹಳೆಯ ಈ ಮನೆಯಲ್ಲಿ ಕೇರಳದ ಕೊಚ್ಚುನ್ನಿಯ ಪುರಾತನ ಕಥೆಯಾಧಾರಿತ ಮಲಯಾಳಂ ಸಿನೆಮಾ ಚಿತ್ರೀಕರಣವಾಗಲಿದೆ.
Related Articles
Advertisement
ಶ್ರೀಮಂತರಿಂದ ದರೋಡೆ ಮಾಡಿ ಬಡವರಿಗೆ ಹಂಚುವುದೇ ಕೊಚ್ಚುನ್ನಿ ಕಾಯಕ. ಹೀಗಾಗಿ ಬಡವರ ಕಂಗಳಲ್ಲಿ ಕೊಚ್ಚುನ್ನಿ ಹೀರೋ ಪಟ್ಟವನ್ನು ಸುಮಾರು ವರ್ಷಗಳ ಹಿಂದೆ ಪಡೆದಿದ್ದರು. ಇದೇ ಕಥೆಯಾಧಾರಿತವಾಗಿ ಸಿನೆಮಾ ರೂಪುಗೊಳ್ಳಲಿದೆ.
ಹನ್ನೆರಡು ಕೋಣೆಗಳ ಪುರಾತನ ಮನೆ “ನಾರ್ಯಗುತ್ತು’ವಿನ ಮನೆಯ ಬಗ್ಗೆ ಅಷ್ಟಮಂಗಲ ಪ್ರಶ್ನೆಯಲ್ಲಿ ಕೇಳಿದಾಗ 800 ವರ್ಷಗಳ ಹಿಂದಿನ ಮನೆ ಎಂಬುದು ಗೊತ್ತಾ ಗಿದೆ. ಮಂಜು ಭಂಡಾರಿ ಎಂಬವರು ಇದನ್ನು ನಿರ್ಮಿಸಿರಬಹುದು ಎನ್ನಲಾಗಿದೆ. ಬಳಿಕ ಈ ಮನೆತನದ ಹಿರಿಯರಿಗೆ ತಮ್ಮ ಮೂಲ ಹೆಸರಿನ ಅನಂತರ “ಮಂಜು ಭಂಡಾರಿ’ ಎಂಬ ಹೆಸರನ್ನು ಸೇರಿಸಲಾಗುತ್ತಿದೆ. ಈ ಮನೆಯಲ್ಲಿ 12 ಕೋಣೆಗಳಿದ್ದು, ಮನೆಯ ಬಲಭಾಗದಲ್ಲಿ ಶ್ರೀ ತೋಡಕುಕ್ಕಿನಾರ್, ಜತೆಗೆ ದುರ್ಗಲಾಯಿ ದೈವ ಸಾನ್ನಿಧ್ಯವಿದೆ. ಮನೆಯ ಮಾಳಿಗೆಯಲ್ಲಿ ಶ್ರೀ ಉಳ್ಳಾಲ್ತಿ ಉಜ್ಜಾಲ್ ಇದೆ. ಶ್ರೀ ನಾಗದೇವರ ಸಾನ್ನಿಧ್ಯ, ಕೊರತಿ ದೈವದ ಆರಾಧನೆಯೂ ಇಲ್ಲಿ ನಡೆಯುತ್ತಿದೆ. ಪ್ರಸ್ತುತ ತಿಮ್ಮಪ್ಪ ಕೊಂಡೆ ಯಾನೆ ಮಂಜು ಭಂಡಾರಿ ನಾರ್ಯಗುತ್ತು ಅವರು ಇಲ್ಲಿನ ಪ್ರಧಾನ ಗಡಿಕಾರರಾಗಿದ್ದಾರೆ. ಮುಳಿಹುಲ್ಲಿನ ಮನೆಯಾಗಿತ್ತು
ಮುಳಿಹುಲ್ಲಿನದ್ದಾಗಿದ್ದ ಈ ಮನೆಗೆ ಸುಮಾರು 75 ವರ್ಷದ ಹಿಂದೆ ಹಂಚು ಹಾಸಲಾಗಿತ್ತು. ಮನೆಯ ಮಧ್ಯ ಭಾಗದಲ್ಲಿ ನಡುಮುಂದಿಲ್ (ಮಳೆ ನೀರು ಬೀಳಲು ಅವಕಾಶ) ಇದೆ. ಶ್ರೀ ವೆಂಕಟರಮಣ ದೇವರ ಕೋಣೆಯೂ ಇದೆ. ದೈವ ದೇವರ ಉಜ್ಜಾಲ್ ಈ ಮನೆಯಲ್ಲಿರುವುದರಿಂದ ಕುಟುಂಬಿಕರ ಆರಾಧ್ಯ ಮನೆಯೂ ಹೌದು. ಮನೆಯ ಒಳಭಾಗದ ಕೆಲವು ಗೋಡೆಗಳು ಮಣ್ಣಿನದ್ದೇ ಆಗಿವೆ. ಪ್ರತೀ ವರ್ಷ ಮಾರ್ಚ್ 8ರಂದು ಇಲ್ಲಿ ವಾರ್ಷಿಕ ಪರ್ವ ಆಚರಣೆ, ನಾಗರ ಪಂಚಮಿ, ಬಿಷು, ಅಷ್ಟಮಿ, ಚೌತಿ ಸಹಿತ ಎಲ್ಲ ಹಬ್ಬಗಳನ್ನು ಆಚರಿಸಲಾಗುತ್ತದೆ. ಮನೆ ಮಂದಿ ಎಲ್ಲರೂ ಈ ಸಂದರ್ಭ ಸೇರುವುದು ವಿಶೇಷ. ಚಿತ್ರಕ್ಕೆ ಇದೇ ಮನೆ ಏಕೆ?
ಈ ಸಿನೆಮಾ ಬ್ರಿಟಿಷರ ಕಾಲದ ಕಥೆ. ಹೀಗಾಗಿ ಆಧುನಿಕ ಸ್ಪರ್ಶ ಇರಬಾರದು. ಅದಕ್ಕಾಗಿ ಹಳೆ ಕಾಲದ ಮನೆಯನ್ನು ಕೇರಳದಲ್ಲಿ ಚಿತ್ರತಂಡ ಹುಡುಕುತ್ತಿತ್ತು. ಗೆಳೆಯರ ಮೂಲಕ ಮಂಗಳೂರಿನ ಬಗ್ಗೆ ಮಾಹಿತಿ ಸಿಕ್ಕಿತು. ಅದರಂತೆ ಮಂಗಳೂರು ವ್ಯಾಪ್ತಿಯಲ್ಲಿ ಸುತ್ತಾಡಿದಾಗ, ಈ ಮನೆಯನ್ನು ಉದ್ಯಮಿ ಸುಖೇಶ್ ಭಂಡಾರಿ ಕಿನ್ನಿ ಮಜಲು ಬೀಡು ಅವರು ತಿಳಿಸಿದರು. ಚಿತ್ರದ ನಿರ್ದೇಶಕ ರೋಷನ್, ಸಹ ನಿರ್ದೇಶಕ ಹಾಗೂ “ಭಾಗ್ ಮಿಲ್ಕಾ ಭಾಗ್’ ಚಿತ್ರದ ಕೆಮರಾ ಮ್ಯಾನ್ ನಾರ್ಯಗುತ್ತುವಿನ ಮನೆಗೆ ಭೇಟಿ ನೀಡಿ, ತಮ್ಮ ಚಿತ್ರಕ್ಕೆ ಪೂರಕವಾಗಿರುವ ಹಿನ್ನೆಲೆಯಲ್ಲಿ ಚಿತ್ರೀಕರಣ ಕೈಗೊಳ್ಳಲು ನಿರ್ಧರಿಸಿದ್ದಾರೆ. ಪಾವೂರು ಉಳಿಯದ ನದಿ ತೀರದಲ್ಲಿ
ಚಿತ್ರತಂಡವು ಕೊಣಾಜೆ ಸಮೀಪದ ಪಾವೂರು ಉಳಿಯ, ಫರಂಗಿಪೇಟೆ ನದಿ ತೀರ ಹಾಗೂ ಇಲ್ಲಿನ ದ್ವೀಪಕ್ಕೂ ಭೇಟಿ ನೀಡಿದ್ದು, ಇಲ್ಲೂ ಚಿತ್ರೀಕರಣ ನಡೆಸಲು ತೀರ್ಮಾನಿಸಿದೆ. ಹೆಚ್ಚಾ ಕಡಿಮೆ 20 ಕೋಟಿ ರೂ. ವೆಚ್ಚದಲ್ಲಿ ಸಿದ್ಧವಾಗುವ ಚಿತ್ರಕ್ಕೆ ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ಪಾವೂರು ಉಳಿಯದಲ್ಲಿ ಹಳೆಯ ಶೈಲಿಯ ಅಂಗಡಿ ಸಹಿತ “ಸೆಟ್’ ರೂಪಿಸುವರು. ಜತೆಗೆ ಉಡುಪಿಯಲ್ಲಿರುವ ಪ್ರತಿಷ್ಠಿತ ಜೈನ ಕುಟುಂಬದ ಹಳೆಯ ಮನೆಯೊಂದನ್ನೂ ಪರಿಶೀಲಿಸಲಾಗಿದೆ. ಜತೆಗೆ ಹಳೆಯ ಮನೆ ಬೇರೆ ಎಲ್ಲಾದರೂ ಇದೆಯೇ ಎಂಬ ಹುಡುಕಾಟವೂ ನಡೆದಿದೆ. ಚಿತ್ರದ ಉಳಿದ ಚಿತ್ರೀಕರಣ ಕೇರಳದ ಕಾಯಂಕುಳಂನಲ್ಲಿ ಹಾಗೂ ಶ್ರೀಲಂಕಾದಲ್ಲಿ ನಡೆಯಲಿದೆ. – ದಿನೇಶ್ ಇರಾ