ಚೆನ್ನೈ: ಶ್ರೀಲಂಕಾದ ದಿಗ್ಗಜ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅವರ ಜೀವನದ ಕಥೆಯನ್ನು ಆಧಾರಿಸಿರುವ ʼ800ʼ ಸಿನಿಮಾದ ಟ್ರೇಲರ್ ಮಂಗಳವಾರ (ಸೆ.5 ರಂದು) ರಿಲೀಸ್ ಆಗಿದೆ.
ಮುಂಬಯಿಯಲ್ಲಿ ನಡೆದ ಸಮಾರಂಭದಲ್ಲಿ ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಸಿನಿಮಾದ ಟ್ರೇಲರ್ ನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಮುರಳೀಧರನ್ ಹುಟ್ಟಿನಿಂದ ತಮಿಳಿನವರಾಗಿದ್ದು, ಚೆನ್ನೈ ನಿವಾಸಿಯನ್ನು ವಿವಾಹವಾಗಿದ್ದಾರೆ. ಸಿನಿಮಾದಲ್ಲಿ ಮುರುಳೀಧರನ್ ಅವರ ಬಾಲ್ಯದ ದಿನಗಳು ಹಾಗೂ ಕ್ರಿಕೆಟ್ ಜೀವನದಲ್ಲಿನ ಸಾಧನೆಯ ದಿನಗಳು ಹಾಗೂ ವೃತ್ತಿ ಬದುಕಿನಲ್ಲಾದ ಪ್ರಮುಖ ಘಟನಾವಳಿಗಳ ಅಂಶಗಳನ್ನು ತೋರಿಸಲಾಗಿದೆ. ಸಂಕಷ್ಟ ಹಾಗೂ ಸವಾಲನ್ನು ಮೀರಿ ಕ್ರಿಕೆಟ್ ಲೋಕದಲ್ಲಿ ದಿಗ್ಗಜರಾಗಿ ಬೆಳೆದ ಮುರುಳೀಧರನ್ ಅವರ ಪಾತ್ರದ ಝಲಕ್ ನ್ನು ಸಿನಿಮಾದ ಟ್ರೇಲರ್ ನಲ್ಲಿ ತೋರಿಸಲಾಗಿದೆ.
ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರ ‘ಸ್ಲಮ್‌ಡಾಗ್ ಮಿಲಿಯನೇರ್’ನಲ್ಲಿನ ಪಾತ್ರಕ್ಕೆ ಹೆಸರುವಾಸಿಯಾದ ನಟ ಮಧುರ್ ಮಿತ್ತಲ್ ಅವರು ಮುರುಳೀಧರನ್ ಅವರ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಮಹಿಮಾ ನಂಬಿಯಾರ್ ,ನರೇನ್, ನಾಸರ್, ವೇಲಾ ರಾಮಮೂರ್ತಿ, ಋತ್ವಿಕಾ, ವಡಿವುಕ್ಕರಸಿ, ಅರುಲ್ ದಾಸ್ ಮತ್ತು ಇತರರು ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಎಂ ಎಸ್ ಶ್ರೀಪತಿ ಬರೆದು ನಿರ್ದೇಶಿಸಿರುವ ಈ ಚಿತ್ರ ತಮಿಳು, ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಮುರಳೀಧರನ್ 133 ಟೆಸ್ಟ್, 350 ಏಕದಿನ ಮತ್ತು 12 T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಶ್ರೀಲಂಕಾವನ್ನು ಪ್ರತಿನಿಧಿಸಿದ್ದಾರೆ. ಅವರು ಒಟ್ಟು ಟೆಸ್ಟ್ ಕ್ರಿಕೆಟ್ ನಲ್ಲಿ 800 ವಿಕೆಟ್‌ಗಳನ್ನು ಪಡೆದಿದ್ದಾರೆ. ಏಕದಿನದಲ್ಲಿ 534 ಮತ್ತು T20 ಗಳಲ್ಲಿ 13 ವಿಕೆಟ್‌ಗಳನ್ನು ಪಡೆದಿದ್ದಾರೆ. 1996 ರಲ್ಲಿ ಶ್ರೀಲಂಕಾದ ಏಕದಿನ ವಿಶ್ವಕಪ್ ವಿಜಯದ ಭಾಗವಾಗಿದ್ದರು.