ಸುರಪುರ: ಕೋವಿಡ್ ಸೋಂಕು ತಗುಲಿ ಇಲ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ 80 ವಯಸ್ಸಿನ ವೃದ್ಧೆಯೊಬ್ಬಳು ಸೋಂಕಿನಿಂದ ಗುಣಮುಖಳಾಗಿ ಕೋವಿಡ್ ವಿರುದ್ಧ ಗೆದ್ದು ಶುಕ್ರವಾರ ಮನೆ ಸೇರಿದ್ದಾಳೆ.
ಸುರಪುರ ಕ್ಷೇತ್ರ ವ್ಯಾಪ್ತಿಯ ಕೊಡೇಕಲ್ ಗ್ರಾಮದ ಲಕ್ಷ್ಮೀಬಾಯಿ ಯಲ್ಲಪ್ಪ ಜಿರಾಳ ವೃದ್ಧೆಗೆ ಮೇ 30ರಂದು ಕೋವಿಡ್ ಸೋಂಕು ದೃಢಪಟ್ಟಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆರೋಗ್ಯ ಇಲಾಖೆ ಸಿಬ್ಬಂದಿ ನೀಡಿದ 9 ದಿನಗಳ ನಿರಂತರ ಚಿಕಿತ್ಸೆ ಪ್ರಯತ್ನದ ಫಲವಾಗಿ ವೃದ್ಧೆ ಇದೀಗ ಗುಣಮುಖಳಾಗಿದ್ದಾಳೆ.
ವೃದ್ಧೆಯ ಆರೋಗ್ಯದಲ್ಲಿ ದಿನೇ ದಿನೆ ಚೇತರಿಕೆ ಕಂಡು ಬರುತ್ತಿರುವುದು ಕಂಡು ಆಸ್ಪತ್ರೆ ವೈದ್ಯರಲ್ಲಿ ಉತ್ಸಾಹ ಮೂಡಿಸಿತ್ತು. ಕಳೆದೆರಡು ದಿನಗಳಿಂದ ಆಕೆ ಸಂಪೂರ್ಣ ಗುಣಮುಖಳಾಗಿದ್ದು, ವೈದ್ಯ ಮತ್ತು ಸಿಬ್ಬಂದಿಯಲ್ಲಿ ಸಾರ್ಥಕ ಭಾವ ಮೂಡಿದೆ.
ಕೋವಿಡ್ 2ನೇ ಅಲೆ ಇಡೀ ದೇಶವನ್ನೇ ನಡುಗಿಸಿತು. ಪ್ರತಿದಿನ ಪಾಸಿಟಿವ್ ಕೇಸ್‌ಗಳು ಹೆಚ್ಚಾಗಿದ್ದವು. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಅನೇಕ ರೋಗಿಗಳು ಗುಣಮಮುಖರಾಗಿ ಮನೆ ಸೇರಿದ್ದಾರೆ. ಈಗ 80ರ ವಯಸ್ಸಿನ ವೃದ್ಧೆ ಹೆಮ್ಮಾರಿ ಜಯಿಸಿರುವುದು ಎಲ್ಲರಿಗೂ ಖುಷಿ ತಂದಿದೆ.
ಅಜ್ಜಿ ಆರೈಕೆ ಹಾಗೂ ಚಿಕಿತ್ಸೆಯಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ| ಶಫಿ ಉಜ್ಜಮಾ, ಡಾ| ಓಂಪ್ರಕಾಶ ಅಂಬೂರೆ, ಡಾ| ಹರ್ಷವರ್ಧನ ರಫಗಾರ್, ಆಯುಷ್ ವೈದ್ಯಾಧಿಕಾರಿಗಳು, ಸ್ಟಾಫ್ ನರ್ಸ್, ಗ್ರೂಪ್ ಡಿ ಇತರೆ ಆರೋಗ್ಯ ಸಿಬ್ಬಂದಿಗಳ ಸಹಕಾರ ಸ್ಮರಣೀಯ ಎಂದು ತಾಲೂಕು ಆರೋಗ್ಯಾ ಧಿಕಾರಿ ಡಾ| ಆರ್.ವಿ. ನಾಯಕ ಸಂತಸ ವ್ಯಕ್ತಪಡಿಸಿದ್ದಾರೆ. ಜತೆಗೆ ವೈದ್ಯರ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.
ಎರಡು ತಿಂಗಳಲ್ಲಿ 264 ಪಾಸಿಟಿವ್ ಕೇಸ್ ಬಂದಿದ್ದು, ಈ ಪೈಕಿ 153 ಜನರು ಗುಣಮುಖರಾಗಿದ್ದಾರೆ. 69 ಜನರನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಕೋವಿಡ್ ಸೆಂಟರ್‌ನಲ್ಲಿ 131 ಪಾಸಿಟಿವ್ ಕೇಸ್‌ಗಳ ಪೈಕಿ 120 ಗುಣಮುಖರಾಗಿದ್ದು 11 ಜನರನ್ನು ಬೇರೆಡೆ ರೆಫರ್ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಆಕ್ಸಿಜನ್ ಮತ್ತು ಲಸಿಕೆಗೆ ಕೊರತೆ ಬಾರದಂತೆ 24 ಗಂಟೆಗಳ ಕಾಲ ಆರೋಗ್ಯ ಸಿಬ್ಬಂದಿ ಹೆಚ್ಚಿನ ಕಾಳಜಿಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
-ಡಾ| ಆರ್.ವಿ. ನಾಯಕ,-ತಾಲೂಕು ಆರೋಗ್ಯಾಧಿಕಾರಿ, ಸುರಪುರ