Advertisement

ನೈರ್ಮಲ್ಯ ಕೊರತೆಯಿಂದ ಶೇ.80 ಕಾಯಿಲೆ

12:45 PM Nov 20, 2018 | |

ಮೈಸೂರು: ದೇಶದಲ್ಲಿ ನೈರ್ಮಲ್ಯ ಕೊರತೆಯಿಂದಾಗಿ ಶೇ.80 ಕಾಯಿಲೆಗಳಿಗೆ ಕಾರಣವಾಗಿದೆ. ನೈರ್ಮಲ್ಯಕ್ಕಾಗಿ ಶೌಚಾಲಯ ಉಪಯೋಗಿಸುವ ನಾವು, ಕುಡಿಯುವ ನೀರನ್ನೇ ಶೌಚಾಲಯಕ್ಕೆ ಬಳಸುತ್ತಿದ್ದೇವೆ. ಇದರಿಂದ ಅಂತರ್ಜಲ, ಕೆರೆ, ನದಿಯಲ್ಲಿನ ನೀರು ಕಲುಷಿತಗೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಅಭಾವ ಉಂಟಾಗಲಿದೆ ಎಂದು ಪರಿಸರತಜ್ಞ ಯು.ಎನ್‌. ರವಿಕುಮಾರ್‌ ಆತಂಕ ವ್ಯಕ್ತಪಡಿಸಿದರು.

Advertisement

ಜಿಲ್ಲಾ ಪಂಚಾಯತ್‌, ಸ್ವತ್ಛ ಭಾರತ ಮಿಷನ್‌ ವತಿಯಿಂದ ಕಲಾಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಶೌಚಾಲಯ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಮಲ, ಮೂತ್ರವನ್ನು ಕೇವಲ ತ್ಯಾಜ್ಯವೆಂದು ಭಾವಿಸದೆ ಸಂಪನ್ಮೂಲವನ್ನಾಗಿ ಬಳಸಬಹುದು. ಚೀನಾದಲ್ಲಿ ಮಲಮೂತ್ರ ಸಂಗ್ರಹಿಸಿ ಅದನ್ನು ಗೊಬ್ಬರವನ್ನಾಗಿ ಬಳಸುತ್ತಾರೆ.

ಅದೇ ರೀತಿಯಲ್ಲಿ ತಮಿಳುನಾಡಿನ ತಾಂಜಾನಿಯದಲ್ಲಿ ಸ್ಕೋಪ್‌ ಸಂಸ್ಥೆ ಗಂಗಾನದಿ ತೀರದಲ್ಲಿ ಆರು ಸಾವಿರಕ್ಕೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಿ, ಈ ವಿಧಾನ ಅನುಸರಿಸುತ್ತಿದೆ. ಅಲ್ಲದೇ ಶೌಚಾಲಯವನ್ನು ಬಳಸುವ ಸಾರ್ವಜನಿಕರಿಗೆ ಸಂಸ್ಥೆಯೇ 1 ರೂ. ನೀಡುತ್ತಿದೆ. ಪ್ರಜ್ಞಾವಂತಿಕೆಯಿಂದ ಶೌಚಾಲಯವನ್ನು ಬಳಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು. 

ಮೈಸೂರು ಜಿಪಂ ಸಿಇಒ ಜ್ಯೋತಿ ಮಾತನಾಡಿ, ವಿಶ್ವಸಂಸ್ಥೆ 2001ರಲ್ಲಿ ನೈರ್ಮಲ್ಯ ಯೋಜನೆ ಅಭಿಯಾನ ಆರಂಭಿಸಿ, 2012ರಲ್ಲಿ ವಿಶ್ವ ಶೌಚಾಲಯ ದಿನವನ್ನು ಅಧಿಕೃತವಾಗಿ ಘೋಷಿಸಿತು. ಇದನ್ನು ಎಲ್ಲಾ ರಾಷ್ಟ್ರ, ರಾಜ್ಯ ಹಾಗೂ ಜಿಲ್ಲೆಗಳು ಅನುಷ್ಠಾನಗೊಳಿಸಿದ್ದು, ಆರೋಗ್ಯವಂತ ಸಮಾಜ ದೇಶಕ್ಕೆ ಮುಖ್ಯ ಎಂಬುದು ಇದರ ಉದ್ದೇಶವಾಗಿದೆ.

ಜಿಪಂನಿಂದ ಶೌಚಾಲಯದ ಅರಿವು ಮೂಡಿಸುವ ನಿಟ್ಟಿನಲ್ಲಿ ಬೀದಿನಾಟಕ, ಜಾಥಾ ನಡೆಸಲಾಗುತ್ತಿದೆ. ಈ ಕಾರ್ಯಕ್ಕೆ ಅಧಿಕಾರಿಗಳ ಜತೆಗೆ ಸಾರ್ವಜನಿಕರ ಸಹಕಾರವೂ ಅಗತ್ಯವಿದ್ದು, ಹೀಗಾಗಿ “ಸ್ವತ್ಛ ಮೇವಾ ಜಯತೇ’ ಎಂಬ ಘೋಷವಾಕ್ಯವನ್ನು ಸರ್ಕಾರ ಹೊರಡಿಸಿದೆ. ಶೌಚಾಲಯ ನಿರಂತರ ಬಳಕೆ ಅಗತ್ಯವಿದ್ದು ಇದರಿಂದ ಆರೋಗ್ಯವಂತ ಸಮಾಜ ಕಟ್ಟಲು ಸಾಧ್ಯ ಎಂದರು. 

Advertisement

ಕಾರ್ಯಕ್ರಮದ ಅಂಗವಾಗಿ ಸ್ಪಂದನ ಕಲಾತಂಡ ಹಾಗೂ ಅನಿಕೇತನ ಕಲಾ ಬಳಗದ ಸದಸ್ಯರು “ಸ್ವತ್ಛತೆ, ನೀರಿನ ಸಂರಕ್ಷಣೆ, ನೈರ್ಮಲ್ಯ’ದ ಬಗ್ಗೆ ಅರಿವು ಮೂಡಿಸುವ ನಾಟಕ ಪ್ರದರ್ಶಿಸಿದರು. ಇದೇ ವೇಳೆ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ನೂರಾರು ಶೌಚಾಲಯ ನಿರ್ಮಾಣಕ್ಕೆ ಕಾರಣರಾದ ಅಧಿಕಾರಿಗಳು, ಗ್ರಾಪಂ ಸದಸ್ಯರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನ, ಸದಸ್ಯರಾದ ಕೃಷ್ಣ, ಮಂಗಳಾ ಸೋಮಶೇಖರ್‌, ಮಣಿ ಇನ್ನಿತರರು ಹಾಜರಿದ್ದರು.

ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ: ಜಿಲ್ಲಾ ಪಂಚಾಯತ್‌ ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ಶೌಚಾಲಯ ಬಳಕೆ ಕುರಿತು ಅರಿವು ಮೂಡಿಸಲು ಜಾಥಾ ನಡೆಸಲಾಯಿತು. ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಿಂದ ಜಾಥಾ ನಡೆಸಿದ ವಿವಿಧ ಶಾಲೆಯ ವಿದ್ಯಾರ್ಥಿಗಳು, “ಬಯಲು ಶೌಚಾಲಯಬಳಕೆ ಬೇಡ’, ಬಯಲಿನಲ್ಲಿ ಮಲಮೂತ್ರ ವಿಸರ್ಜನೆ ಮಾಡಿದರೆ ಅನೇಕ ರೋಗಗಳಿಗೆ ಅವಕಾಶ ಉಂಟಾಗುತ್ತದೆ’.

“ಮನೆಗಳಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಿ’ ಎಂಬ ಹಲವು ಭಿತ್ತಿ ಪತ್ರ, ಬ್ಯಾನರ್‌ಗಳನ್ನು ಹೊತ್ತ ವಿದ್ಯಾರ್ಥಿಗಳು ಜಾಥಾದಲ್ಲಿ ಹೆಜ್ಜೆ ಹಾಕಿದರು. ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಹೊರಟ ಜಾಥಾ ಕೆ.ಆರ್‌.ವೃತ್ತ, ಡಿ.ದೇವರಾಜ ಅರಸು ರಸ್ತೆ, ಜೆಎಲ್‌ಬಿ ರಸ್ತೆ, ಮೆಟ್ರೋಪೋಲ್‌ ವೃತ್ತ, ವಿನೋಬ ರಸ್ತೆ ಮಾರ್ಗವಾಗಿ ಸಂಚರಿಸಿ ಕಲಾಮಂದಿರದ ಆವರಣದಲ್ಲಿ ಅಂತ್ಯಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next