ನವದೆಹಲಿ: ಛತ್ತೀಸ್ ಗಢದಲ್ಲಿ ಈ ವರ್ಷದಲ್ಲಿ ಈವರೆಗೆ ಕನಿಷ್ಠ 80 ನಕ್ಸಲೀಯರು ಹತ್ಯೆಗೀಡಾಗಿದ್ದು, 125ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ. ಅಲ್ಲದೇ 150 ನಕ್ಸಲೀಯರು ಶರಣಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?
ಎರಡು ದಿನಗಳ ಹಿಂದಷ್ಟೇ 29 ನಕ್ಸಲೀಯರು ಭದ್ರತಾ ಪಡೆಯ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಎಡಪಂಥೀಯ ಭಯೋತ್ಪಾದನೆಗೆ ಸಂಬಂಧಿಸಿದ ಹಿಂಸಾಚಾರ ದೇಶದಲ್ಲಿ ಶೇ.52ರಷ್ಟು ಇಳಿಕೆಯಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಅಂಕಿಅಂಶ ವಿವರಿಸಿದೆ.
ಕಳೆದ ವರ್ಷ ನಕ್ಸಲ್ ಹಾವಳಿ ಇರುವ ರಾಜ್ಯಗಳ ಭದ್ರತಾ ಪರಿಶೀಲನಾ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿದ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾವೋವಾದಿಗಳ ವಿರುದ್ಧ ತೀವ್ರ ಕಾರ್ಯಾಚರಣೆ ನಡೆಸುವಂತೆ ಸೂಚನೆ ನೀಡಿದ್ದರು.
ಶಾ ಅವರ ನಿರ್ದೇಶನದಂತೆ ಡೈರೆಕ್ಟರ್ ಜನರಲ್ ಪೊಲೀಸ್, ಡೈರೆಕ್ಟರ್ ಜನರಲ್ ಆಫ್ ಸೆಂಟ್ರಲ್ ರಿಸರ್ವ್ ಪೊಲೀಸ್ ಪೋರ್ಸ್, ಗಡಿ ಭದ್ರತಾ ಪಡೆ, ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್, ಇಂಟೆಲಿಜೆನ್ಸ್ ಬ್ಯುರೂ ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳ ಸಮಿತಿ ರಚಿಸಲಾಗಿತ್ತು ಎಂದು ವರದಿ ವಿವರಿಸಿದೆ.
2004ರಿಂದ 2014ವರೆಗೆ ಮಾವೋವಾದಿಗಳ ದಾಳಿಯಲ್ಲಿ 1,750 ಭದ್ರತಾ ಸಿಬಂದಿಗಳು ಸಾವನ್ನಪ್ಪಿದ್ದರು. 2014ರಿಂದ 2023ರವರೆಗೆ ಈ ಸಂಖ್ಯೆ 4,285ರಿಂದ 1,383ಕ್ಕೆ ಇಳಿಕೆಯಾಗಿರುವುದಾಗಿ ವರದಿ ತಿಳಿಸಿದೆ.