ಗುಜರಾತ್(ಸೂರತ್):ಕೋವಿಡ್ 19 ತಡೆಗಟ್ಟಲು ಘೋಷಿಸಿರುವ ಲಾಕ್ ಡೌನ್ ನಿಂದ ರೋಸಿ ಹೋದ ವಲಸಿಗ ಕಾರ್ಮಿಕರು ತಮ್ಮ ಊರುಗಳಿಗೆ ಹೋಗಲು ಅನುಮತಿ ನೀಡಬೇಕೆಂದು ಆಕ್ರೋಶವ್ಯಕ್ತಪಡಿಸಿ ಕೈಗಾಡಿಗಳಿಗೆ, ಟಯರ್ ಗಳಿಗೆ ಬೆಂಕಿ ಹಚ್ಚಿರುವ ಘಟನೆ ಸೂರತ್ ನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ 80 ಮಂದಿ ವಲಸಿಗ ಕಾರ್ಮಿಕರನ್ನು ಬಂಧಿಸಲಾಗಿದೆ ಎಂದು ಸೂರತ್ ಪೊಲೀಸರು ತಿಳಿಸಿದ್ದಾರೆ.
ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ವರದಿ ಮಾಡಿರುವ ಪಿಟಿಐ, ಲಾಕ್ ಡೌನ್ ನಿಂದಾಗಿ ನೂರಾರು ವಲಸೆ ಕಾರ್ಮಿಕರು ಸೂರತ್ ನಲ್ಲಿ ಸಿಲುಕಿ ಹಾಕಿಕೊಂಡಿದ್ದು, ಇದರಿಂದ ರೊಚ್ಚಿಗೆದ್ದ ಅವರು ಕೈಗಾಡಿ ಹಾಗೂ ಟಯರ್ ಗಳಿಗೆ ಶುಕ್ರವಾರ ತಡರಾತ್ರಿ ಬೆಂಕಿಹಚ್ಚಿರುವ ಘಟನೆ ಲಕ್ ಸಾನಾ ಪ್ರದೇಶದಲ್ಲಿ ನಡೆದಿದೆ ಎಂದು ತಿಳಿಸಿದೆ.
ಘಟನಾ ಸ್ಥಳಕ್ಕೆ ಭಾರೀ ಪ್ರಮಾಣದಲ್ಲಿ ಪೊಲೀಸರನ್ನು ರವಾನಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಡಿಶಾ ಮೂಲದ ನೂರಾರು ಕಾರ್ಮಿಕರು ರಸ್ತೆಗೆ ಬಂದು ತಮ್ಮನ್ನು ಊರಿಗೆ ಹೋಗಲು ಬಿಡಿ ಎಂದು ಘೋಷಣೆ ಕೂಗಿರುವುದಾಗಿ ವರದಿ ತಿಳಿಸಿದೆ.
ಎನ್ ಜಿಒಗಳಲ್ಲಿ ನೀಡುತ್ತಿರುವ ಊಟ ರುಚಿರಹಿತವಾಗಿದೆ. ಅಲ್ಲದೇ ಊಟಕ್ಕಾಗಿ ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಲ್ಲಬೇಕಾಗಿದೆ ಎಂದು ವಲಸೆ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿರುವುದಾಗಿ ವರದಿ ಹೇಳಿದೆ.
ಘಟನೆಗೆ ಸಂಬಂಧಿಸಿದಂತೆ ನಾವು 80 ಮಂದಿ ವಲಸೆ ಕಾರ್ಮಿಕರನ್ನು ಬಂಧಿಸಿದ್ದೇವೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಲಾಕ್ ಡೌನ್ ವೇಳೆ ಜನರ ಚಲನವಲನದ ಮೇಲೆ ಕಣ್ಗಾವಲು ಇಡಲು ಸೂರತ್ ಪೊಲೀಸರು ಡ್ರೋಣ್ ಮೊರೆ ಹೋಗಿರುವುದಾಗಿ ವರದಿ ವಿವರಿಸಿದೆ.