ಪಿರಿಯಾಪಟ್ಟಣ: ತಾಲೂಕಿನ 150 ಕೆರೆಗಳಿಗೆ ನೀರು ತುಂಬಿಸುವ ಮಹತ್ವಾಕಾಂಕ್ಷಿ ಯೋಜನೆಗೆ ತಮ್ಮ ಅವಧಿಯಲ್ಲಿ ಒಂದೇ ಕಂತಿನಲ್ಲಿ 80 ಕೋಟಿ ರೂ. ಬಿಡುಗಡೆ ಮಾಡಿಸಿದ್ದೇನೆ ಎಂದು ಶಾಸಕ ಕೆ.ಮಹದೇವ್ ಹೇಳಿದರು. ಪಟ್ಟಣದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ತಾವು ಶಾಸಕರಾಗಿ ಆಯ್ಕೆಯಾದ ಬಳಿಕ ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ 80 ಕೋಟಿ ರೂ. ಬಿಡುಗಡೆಗೊಳಿಸಿದ್ದು, ಕಾಮಗಾರಿ ಭರದಿಂದ ಸಾಗುತ್ತಿದೆ.
ಮಾರ್ಚ್‌ನೊಳಗೆ ಅರ್ಧದಷ್ಟು (75) ಕೆರೆಗಳಿಗೆ ನೀರು ತುಂಬಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು. ಚುನಾವಣೆಯಲ್ಲಿ ತಾವು 2 ಬಾರಿ ಕಡಿಮೆ ಅಂತರದಲ್ಲಿ ಸೋತರೂ ಕಾರ್ಯಕರ್ತರು ಎದೆಗುಂದದೆ ಮೂರನೇ ಯತ್ನದಲ್ಲಿ ಶಾಸಕನನ್ನಾಗಿ ಮಾಡಿದ್ದಾರೆ. ಅವರ ಆಶಯದಂತೆ ಕಾರ್ಯನಿರ್ವಹಿಸುತ್ತೇನೆ ಎಂದರು.
ಅಪಪ್ರಚಾರದಿಂದ ಸೋಲು: 2008 ಮತ್ತು 2013ರ ಚುನಾವಣೆಯಲ್ಲಿ ವಿರೋಧಿಗಳು ನನ್ನನ್ನು ಎದುರಿಸಲು ಶಕ್ತಿ ಇಲ್ಲದೇ ನನ್ನ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿದರು. ನನ್ನಿಂದ ತಾಲೂಕಿನಲ್ಲಿ ಅಶಾಂತಿ, ರೌಡಿಯಿಸಂ ಉಂಟಾಗುತ್ತದೆ ಎಂದು ವದಂತಿ ಹಬ್ಬಿಸಿದರು. ಆದರೆ, ಇಂದು ನನ್ನ ಆಡಳಿತದಲ್ಲಿ ಕ್ಷೇತ್ರಾದ್ಯಂತ ಜನರು ಯಾವುದೇ ಜಾತಿ ವೈಷಮ್ಯ, ಜಗಳ, ಗಲಭೆಗಳಿಲ್ಲದೆ ಶಾಂತಿ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ ಎಂದರು.
ಇಂದು ನಾವು ವಿರೋಧ ಪಕ್ಷದಲ್ಲಿದ್ದೇವೆ. ತಾಲೂಕಿನ ಅಭಿವೃದ್ಧಿಗೆ ಅನುದಾನ ನೀಡುತ್ತಿಲ್ಲ, ಆದ್ದರಿಂದ ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದಿಸಲಾಗುತ್ತಿಲ್ಲ. ಇದರಿಂದ ಯಾವ ಕಾರ್ಯಕರ್ತರು ವಿಚಲಿತರಾಗದೆ ತಮ್ಮ ಗ್ರಾಮಗಳಿಗೆ ಮೂಲಸೌಲಭ್ಯ ಪಡೆಯಲು ಮಾಹಿತಿ ನೀಡಿ, ಅದನ್ನು ಬಿಟ್ಟು ವಿನಾಃಕಾರಣ ಆರೋಪ ಮಾಡಬೇಡಿ. ನೀವು ಒಪ್ಪಿದರೆ ಮುಖ್ಯಮಂತ್ರಿಗಳನ್ನು ತಾಲೂಕಿಗೆ ಕರೆ ತಂದು ಕಾರ್ಯಕ್ರಮ ರೂಪಿಸುತ್ತೇನೆ ಎಂದು ತಿಳಿಸಿದರು.
ಸಭೆಯಲ್ಲಿ ವಕೀಲ ಜಿ.ಗೋವಿಂದೇಗೌಡ, ಮುಖಂಡರಾದ ಮೈಲಾರಪ್ಪ, ಅಣ್ಣಯ್ಯಶೆಟ್ಟಿ, ತಾಪಂ ಸದಸ್ಯ ಎಸ್.ರಾಮು, ಮೈಮುಲ್ ನಿರ್ದೇಶಕ ಪಿ.ಎಂ.ಪ್ರಸನ್ನ, ಜಿಪಂ ಸದಸ್ಯರಾದ ಜಯಕುಮಾರ್, ಪಿ.ರಾಜೇಂದ್ರ, ಕೆ.ಎಸ್.ಮಂಜುನಾಥ್, ರುದ್ರಮ್ಮ, ತಾಪಂ ಮಾಜಿ ಅಧ್ಯಕ್ಷ ಮಾಕೋಡು ಜವರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಈರಯ್ಯ, ಸದಸ್ಯರಾದ ಮುತ್ತು, ಕೀರ್ತಿ ಕುಮಾರ್, ಮೋಹನರಾಜ್, ಆರ್.ಎಸ್.ಮಹದೇವ್, ಶೋಭಾ, ಸುಮಿತ್ರಾ, ಜಯಂತಿ, ಮುಖಂಡರಾದ ರಘುನಾಥ್, ಕೆ.ಕೆ.ಕುಮಾರ್, ಚಂದ್ರಶೇಖರಯ್ಯ, ಅತ್ತರ್ ಮತ್ತೀನ್, ಆರ್.ಎಲ್.ಮಣಿ, ಸಿ.ಎನ್.ರವಿ, ದೇವರಾಜ್, ಹೇಮಂತಕುಮಾರ್ ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಹಾಜರಿದ್ದರು.