Advertisement

ಅಕಾಲಿಕ ಮಳೆಗೆ ಶೇ.80 ತೊಗರಿ ಹಾನಿ

03:49 PM Dec 03, 2021 | Team Udayavani |

ಕಲಬುರಗಿ: ರಾಜ್ಯದಲ್ಲೇ ಎರಡನೇ ಅತ್ಯಧಿಕ ಮಳೆ ಕಲಬುರಗಿಯಲ್ಲಾಗಿರುವುದರಿಂದ ಕಲ್ಯಾಣ ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆ ಸಂಪೂರ್ಣ ಹಾಳಾಗಿದ್ದು, ರೈತ ನಲುಗಿ ಹೋಗಿದ್ದಾನೆ.

Advertisement

ಹೀಗಾಗಿ ಮೂರಾಬಟ್ಟೆಯಾದ ರೈತನ ಬದುಕು ಉಳಿಯಲು ಹಾಗೂ ಸೂಕ್ತ ಪರಿಹಾರ ದೊರಕುವ ವಿಷಯ ಮುನ್ನೆಲೆಗೆ ಬರಬೇಕಿತ್ತು. ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌- ಬಿಜೆಪಿ ಕೆಸರಾಟದಲ್ಲಿ ಮುಳುಗಿವೆ. ಆದರೆ ಯಾರೊಬ್ಬರು ತೊಗರಿ ಕುರಿತು ಚಕಾರವೆತ್ತುತ್ತಿಲ್ಲ.

ತೊಗರಿ ಕಲಬುರಗಿಯಲ್ಲದೇ ಬೀದರ್‌, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯಪುರ, ಬಾಗಲಕೋಟೆಯಲ್ಲದೇ ಇತರ ಜಿಲ್ಲೆಗಳಲ್ಲೂ ತೊಗರಿ ಬೆಳೆಯಲಾಗುತ್ತಿದೆ. ಆದರೆ ಎಲ್ಲ ಕಡೆಯೂ ತೊಗರಿ ನೆಟೆರೋಗಕ್ಕೆ ಒಳಗಾಗಿ ಹಾಳಾಗಿದೆ. ಹೀಗಾಗಿ ದೇಶದ ವಿವಿಧ ರಾಜ್ಯಗಳಿಗೆ ಪೂರೈಕೆಯಾಗುವ ರಾಜ್ಯದ ತೊಗರಿ ರೈತನ ದುಸ್ಥಿತಿಗೆ ಸ್ಪಂದಿಸಲು, ಹಾನಿಗೆ ತಕ್ಕ ಪರಿಹಾರ ದೊರಕಿಸಿ ಕೊಡುವಂತಾಗಲು ಜತೆಗೆ ತೊಗರಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ತೊಗರಿ ಹಾನಿಯನ್ನು ರಾಷ್ಟ್ರೀಯ ವಿಪತ್ತು ಎಂಬುದಾಗಿ ಘೋಷಿಸಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ:ಸೋಂಕಿತರ ಮಾದರಿ ಪುಣೆಗೆ: ಗೋವಾದಲ್ಲಿಯೂ ಒಮಿಕ್ರಾನ್ ಆತಂಕ

ವರ್ಷಂಪ್ರತಿ ಕಲಬುರಗಿ ಜಿಲ್ಲೆಯೊಂದರಲ್ಲಿ ಕನಿಷ್ಠ 40 ಲಕ್ಷ ಕ್ವಿಂಟಲ್‌ ಇಳುವರಿ ತೊಗರಿ ಬರುತ್ತಿತ್ತು. ಆದರೆ ಈ ವರ್ಷ 10 ಲಕ್ಷ ಕ್ವಿಂಟಲ್‌ ಇಳುವರಿ ಬರುವುದು ಸಹ ಅನುಮಾನವಾಗಿದೆ. ಅಂದರೆ ಶೇ.80ರಷ್ಟು ಬೆಳೆ ಹಾನಿಯಾಗಿದೆ. ತೊಗರಿಗೆ ಬೀಜ, ಗೊಬ್ಬರ ಹಾಗೂ ಸಿಂಪಡಿಸಿದ ಕೀಟನಾಶಕ ಖರ್ಚು ಬಾರದಂತಾಗಿದೆ. ಅತಿವೃಷ್ಟಿಯಿಂದ ಅದರಲ್ಲೂ ನವೆಂಬರ್‌ದಲ್ಲಿ ಸುರಿದ ಅಕಾಲಿಕ ಮಳೆಯಿಂದ ತೊಗರಿ ಸಂಪೂರ್ಣ ನೆಟೆ ರೋಗಕ್ಕೆ ಒಳಲಾಗಿದೆ. ಬರಗಾಲ ಬಿದ್ದ ಸಂದರ್ಭದಲ್ಲೂ ಇಷ್ಟೊಂದು ಪ್ರಮಾಣದಲ್ಲಿ ಬೆಳೆ ಹಾನಿಯಾಗಿರುವುದಿಲ್ಲ. ಕೊರೊನಾ ಸಂದರ್ಭದಲ್ಲೂ ತೀವ್ರ ತೊಂದರೆಗೆ ಒಳಗಾದ ತೊಗರಿ ರೈತ ಈಗ ಬೆಳೆ ಹಾನಿಯಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

Advertisement

ಪರಿಷತ್‌ ಚುನಾವಣೆ ಸ್ಥಳೀಯ ಸಂಸ್ಥೆಗಳ ಸದಸ್ಯರೇ ಮತದಾರರಾಗಿದ್ದರೂ ಸಂಬಂಧವಿಲ್ಲದ ವಿಷಯಗಳು ಚರ್ಚೆಗೆ ಬರುತ್ತಿವೆ. ಆದರೆ ಈ ಭಾಗದ ವಾಣಿಜ್ಯ ಬೆಳೆ ಬಗ್ಗೆ ಪ್ರಸ್ತಾಪವಾಗದಿರುವುದನ್ನು ನೋಡಿದರೆ ಯಾವ ವಿಷಯಗಳು ಚರ್ಚೆಗೆ ಬಂದು ಪರಿಹಾರ ಕಂಡುಕೊಳ್ಳಬೇಕೋ ಅದಾಗುತ್ತಿಲ್ಲ. ಜನರ ಭಾವನೆ ಬೇರೆಡೆ ತಿರುಗಿಸುವ ವಿಷಯಗಳೇ ಚರ್ಚೆಯಾಗುತ್ತಿರುವುದು ಒಂದು ದುರಂತವೇ ಎನ್ನಬಹುದಾಗಿದೆ.

ತೊಗರಿ ಸಮಸ್ಯೆ ಈಡೇರಿಕೆಗೆ ಬಲಗೊಳ್ಳಲಿ ಒಗ್ಗಟ್ಟು

ಶೇ.50ಷ್ಟು ತೊಗರಿ ಬೆಳೆ ಹಾನಿಯಾಗಿದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದ್ದರಿಂದ ಎಲ್ಲ ರೈತರಿಗೆ ಹಾನಿಗೆ ತಕ್ಕ ಬೆಳೆವಿಮೆ ದೊರಕುವಂತಾಗಬೇಕು. ಅದರ ಜತೆಗೆ ಬೆಂಬಲ ಬೆಲೆ ಹೆಚ್ಚಳವಾಗಬೇಕು. ಬಹು ಮುಖ್ಯವಾಗಿ ಸೂಕ್ತ ಪರಿಹಾರ ದೊರಕಬೇಕು. ಇವೆಲ್ಲ ಸಾಕಾರಗೊಳ್ಳಲು ನಮ್ಮ ಭಾಗದ ಜನಪ್ರತಿನಿಧಿಗಳೆಲ್ಲರೂ ಒಗ್ಗಟ್ಟಾಗಿ ಸರ್ಕಾರದ ಮೇಲೆ ಒತ್ತಡ ಹೇರಬೇಕು. ತಮ್ಮ ಲಾಭದ ಕೆಲಸಗಳನ್ನು ಬದಿಗೊತ್ತಿ ರೈತರ ಪರವಾಗಿ ಸ್ವಲ್ಪ ತ್ಯಾಗಕ್ಕೆ ಮುಂದಾದಲ್ಲಿ ತೊಗರಿ ರೈತನ ಬವಣೆ ತಕ್ಕ ಮಟ್ಟಿಗಾದರೂ ತಗ್ಗಿಸಬಹುದಾಗಿದೆ ಎನ್ನುತ್ತಾರೆ ತೊಗರಿ ಬೆಳೆಗಾರರ ಸಂಘದ ಅಧ್ಯಕ್ಷ ಬಸವರಾಜ ಇಂಗಿನ್‌. ತೊಗರಿ ಅಭಿವೃದ್ಧಿ ಮಂಡಳಿ ಸಶಕ್ತಗೊಳಿಸುವ ಬಗ್ಗೆ ಯಾರೊಬ್ಬರು ಪ್ರಯತ್ನಿಸದಿರುವುದು ನಮ್ಮ ಭಾಗದ ರೈತರ ದೌರ್ಭಾಗ್ಯ ಎನ್ನಬಹುದಾಗಿದೆ. ರೈತರು ಸಹ ಜನಪ್ರತಿನಿಧಿಗಳಿಗೆ ತೊಗರಿ ಸಮಸ್ಯೆ ಬಗ್ಗೆಯೇ ಸಾಂಘಿಕವಾಗಿ ಪ್ರಶ್ನೆ ಕೇಳುವಂತಾಗಬೇಕೆಂದಿದ್ದಾರೆ.

ಸಂಸದರು ತೊಗರಿಗೆ ನ್ಯಾಯ ಕಲ್ಪಿಸಲಿ

ಕಲಬುರಗಿ ಸಂಸದ ಡಾ| ಉಮೇಶ ಜಾಧವ್‌ ಎರಡ್ಮೂರು ರೈಲುಗಳನ್ನು ಶಹಾಬಾದ್‌ ರೈಲು ನಿಲ್ದಾಣದಲ್ಲಿ ನಿಲ್ಲಬೇಕೆಂದು ಸಂಸತ್ತಿನಲ್ಲಿ ಪ್ರಸ್ತಾಪಿಸುತ್ತಾರೆ. ಒಂದು ವೇಳೆ ಹೊಸ ರೈಲುಗಳು ಓಡಿಸುವಂತೆ ಒತ್ತಾಯಿಸುವ ವಿಷಯ ಪ್ರಸ್ತಾಪಿಸಿದರೆ ಸ್ವಾಗತಿಸಬಹುದಿತ್ತು. ಆದರೆ ಬಹು ಮುಖ್ಯವಾಗಿ ವಾಣಿಜ್ಯ ಬೆಳೆ ತೊಗರಿ ಬೆಳೆ ಅತಿವೃಷ್ಟಿ ಹಾಗೂ ಅಕಾಲಿಕ ಮಳೆಯಿಂದ ಸಂಪೂರ್ಣ ಹಾನಿಯಾಗಿರುವ ಕುರಿತಾಗಿ ವಿಷಯ ಪ್ರಸ್ತಾಪಿಸದಿರುವುದು ರೈತರ ಬಗೆಗೆ ಹೊಂದಿರುವ ಕಾಳಜಿ ನಿರೂಪಿಸುತ್ತದೆ ಎನ್ನುತ್ತಾರೆ ರೈತರು. ತೊಗರಿ ನೆಟೆರೋಗಕ್ಕೆ ಸಹ ಒಳಗಾಗಿ ಹಿಂದೆಂದು ಖಂಡರೀಯದ ರೀತಿಯಲ್ಲಿ ಹಾಳಾಗಿದ್ದರಿಂದ ಹಾನಿಗೆ ಸೂಕ್ತ ಪರಿಹಾರ, ಹಾನಿಗೆ ತಕ್ಕ ಬೆಳೆವಿಮೆ ದೊರಕಿಸುವ ಜತೆಗೆ ಹೆಸರು-ಉದ್ದು ಬೆಳೆಗಿಂತ ಕಡಿಮೆ ಇರುವ ತೊಗರಿ ಬೆಂಬಲ ಬೆಲೆ ಹೆಚ್ಚಿಸುವ ಕುರಿತಾಗಿ ಸಂಸತ್ತಿನಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆಯಬೇಕಿತ್ತು. ಒಟ್ಟಾರೆ ತೊಗರಿ ಸಮಸ್ಯೆ ಎಂದರೆ ನಮ್ಮ ಜನಪ್ರತಿನಿಧಿಗಳಿಗೆ ಅಲರ್ಜಿ ಎನ್ನುವಂತಾಗಿದೆ ಎನ್ನುತ್ತಾರೆ ರೈತರು. ಸಂಸದರು ಹಾಗೂ ಈ ಭಾಗದ ಸಚಿವರು, ಶಾಸಕರು ಇನ್ಮುಂದೆಯಾದರೂ ತೊಗರಿ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಮುಂದಾಗಲಿ ಎಂದು ಆಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next