Advertisement

ರಾಜಧಾನಿಯಲ್ಲಿವೆ 80.45 ಲಕ್ಷ ವಾಹನ!

12:18 AM Apr 02, 2019 | Lakshmi GovindaRaju |

ಬೆಂಗಳೂರು: ಪ್ರಸಕ್ತ ಸಾಲಿನ ಮಾರ್ಚ್‌ ಅಂತ್ಯಕ್ಕೆ ರಾಜ್ಯದಲ್ಲಿರುವ ವಾಹನಗಳ ಸಂಖ್ಯೆ ಎರಡು ಕೋಟಿ ಮೀರಿದ್ದು, ಈ ಪೈಕಿ ಶೇ. 40ರಷ್ಟು ವಾಹನಗಳು ಬರೀ ಬೆಂಗಳೂರಿನಲ್ಲೇ ನೋಂದಣಿ ಆಗಿವೆ.

Advertisement

ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ 16,90,860 ವಾಹನಗಳು ನೋಂದಣಿ ಆಗಿದ್ದು, ಇದರಲ್ಲಿ 6,39,77 ವಾಹನಗಳು ಬೆಂಗಳೂರಿನಲ್ಲಿವೆ. ಅಂದರೆ ನಗರದಲ್ಲಿ ಸರಾಸರಿ ನಿತ್ಯ 1,777 ವಾಹನಗಳು ನೋಂದಾಯಿಸಲ್ಪಟ್ಟಿವೆ. ಇದರಲ್ಲಿ ದ್ವಿಚಕ್ರ ವಾಹನಗಳು ಮತ್ತು ಕಾರುಗಳ ಸಂಖ್ಯೆ ಹೆಚ್ಚಿದೆ.

ಎಲೆಕ್ಟ್ರಿಕ್‌ ವಾಹನಗಳ ಸಂಖ್ಯೆಯ ಬಗ್ಗೆ ಇನ್ನೂ ನಿಖರವಾದ ಲೆಕ್ಕ ಸಿಕ್ಕಿಲ್ಲ. ವಾಹನಗಳ ತಯಾರಿಕಾ ಕಂಪನಿಗಳಿಂದ ಮಾಹಿತಿ ಪಡೆದ ನಂತರ ತಿಳಿಯಲಿದೆ ಎಂದು ಸಾರಿಗೆ ಇಲಾಖೆ ಆಯುಕ್ತ ವಿ.ಪಿ. ಇಕ್ಕೇರಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

2018ರ ಮಾರ್ಚ್‌ ಅಂತ್ಯಕ್ಕೆ ರಾಜ್ಯದಲ್ಲಿದ್ದ ವಾಹನಗಳ ಸಂಖ್ಯೆ 1.93 ಕೋಟಿ. ಅದೇ ರೀತಿ, ನಗರದಲ್ಲಿ 74.92 ಲಕ್ಷ ವಾಹನಗಳಿದ್ದವು. ಈ ಸಲ ಕ್ರಮವಾಗಿ ಅವುಗಳ ಸಂಖ್ಯೆ 2.10 ಕೋಟಿ ಹಾಗೂ 80.45 ಲಕ್ಷ ತಲುಪಿದೆ. ಶೇ. 80ರಷ್ಟು ರಾಜಸ್ವ ಆದಾಯ ಈ ವಾಹನಗಳ ನೋಂದಣಿಯಿಂದಲೇ ಬಂದಿದೆ.

ಸಾರಿಗೆ ಇಲಾಖೆಯಿಂದ ಈ ಬಾರಿ ದಾಖಲೆ ಪ್ರಮಾಣದ ರಾಜಸ್ವ ಸಂಗ್ರಹವಾಗಿದ್ದು, 6,528.42 ಕೋಟಿ ರೂ. ಹರಿದುಬಂದಿದೆ. ಗುರಿ ಇದ್ದದ್ದು 6,167ಕೋಟಿ ರೂ. ಒಟ್ಟಾರೆ ಸಂಗ್ರಹವಾದ ರಾಜಸ್ವದಲ್ಲಿ 165 ಕೋಟಿ ರೂ. ಸಾರಿಗೆ ನಿಯಮಗಳ ಉಲ್ಲಂಘನೆ ವಿರುದ್ಧದ ಕಾರ್ಯಾಚರಣೆ ವೇಳೆ ವಸೂಲು ಮಾಡಲಾದ ದಂಡದ ರೂಪದಲ್ಲಿ ಬಂದಿದೆ.

Advertisement

ಇಡೀ ವರ್ಷದಲ್ಲಿ 1.87 ಕೋಟಿ ವಾಹನಗಳ ತಪಾಸಣೆ ನಡೆಸಲಾಗಿದೆ. 2018ರ ಮಾರ್ಚ್‌ ಅಂತ್ಯಕ್ಕೆ 6,156 ಕೋಟಿ ರೂ. ಗುರಿ ಇತ್ತು ಎಂದು ಮಾಹಿತಿ ನೀಡಿದರು.

ಸಿಬ್ಬಂದಿ ಕೊರತೆ ನಡುವೆಯೂ ಸಾರಿಗೆ ನಿಯಮಗಳ ಉಲ್ಲಂಘನೆ ವಿರುದ್ಧ ಸಾಕಷ್ಟು ಕಾರ್ಯಾಚರಣೆ ಮಾಡುವಲ್ಲಿ ಇಲಾಖೆ ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಚುರುಕುಗೊಳಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಏಪ್ರಿಲ್‌ನಿಂದ ಎಚ್‌ಎಸ್‌ಆರ್‌ಪಿ ಕಡ್ಡಾಯ: ಅತಿ ಸುರಕ್ಷೆಯ ನೋಂದಣಿ ಸಂಖ್ಯಾ ಫ‌ಲಕ (ಹೈ ಸೆಕ್ಯುರಿಟಿ ರೆಜಿಸ್ಟ್ರೇಷನ್‌ ಪ್ಲೇಟ್‌-ಎಚ್‌ಎಸ್‌ಆರ್‌ಪಿ) ಕಡ್ಡಾಯಗೊಳಿಸುವ ಬಗ್ಗೆ 2018ರ ಡಿಸೆಂಬರ್‌ನಲ್ಲೇ ಕೇಂದ್ರದಿಂದ ಸೂಚನೆ ಬಂದಿದೆ. ಈ ನಿಯಮವು 2019ರ ಏಪ್ರಿಲ್‌ 1ರಿಂದ ತಯಾರಾಗುವ ವಾಹನಗಳಿಗೆ ಅನ್ವಯ ಆಗಲಿದೆ.

ಅದಕ್ಕಿಂತ ಹಿಂದಿನ ವಾಹನಗಳಿಗೆ ಇದನ್ನು ಕಡ್ಡಾಯಗೊಳಿಸಬೇಕೇ ಅಥವಾ ಬೇಡವೇ? ಹಾಗೊಂದು ವೇಳೆ ಕಡ್ಡಾಯಗೊಳಿಸುವುದಾದರೂ ಎಷ್ಟು ವರ್ಷಗಳಿಗೆ ಸೀಮಿತಗೊಳಿಸಬೇಕು ಎನ್ನುವುದನ್ನು ಆಯಾ ರಾಜ್ಯ ಸರ್ಕಾರಗಳಿಗೆ ಬಿಟ್ಟಿದ್ದು, ರಾಜ್ಯ ಸರ್ಕಾರ ಕೈಗೊಳ್ಳುವ ತೀರ್ಮಾನವನ್ನು ಸಾರಿಗೆ ಇಲಾಖೆ ಪಾಲನೆ ಮಾಡಿ, ಅದರಂತೆ ಕ್ರಮ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next