Advertisement

NIA ಮಾನವ ಕಳ್ಳಸಾಗಣೆ ವಿರುದ್ಧ ಪ್ರಹಾರ; ಕರ್ನಾಟಕ ಸೇರಿ 8 ರಾಜ್ಯಗಳಲ್ಲಿ ಎನ್‌ಐಎ ದಾಳಿ

09:43 PM Nov 08, 2023 | Team Udayavani |

ನವದೆಹಲಿ: ದೇಶಾದ್ಯಂತ ಬುಧವಾರ ಮಾನವ ಕಳ್ಳಸಾಗಣೆ ವಿರುದ್ಧ ಬೃಹತ್‌ ಕಾರ್ಯಾಚರಣೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನಡೆಸಿದೆ. ಅದಕ್ಕೆ ಸಂಬಂಧಿಸಿದ ಐದು ಜಾಲಗಳನ್ನು ಛೇದಿಸಿದೆ.

Advertisement

ಡಿಜಿಟಲ್‌ ಉಪಕರಣಗಳು, ನಕಲಿ ಆಧಾರ್‌ ಮತ್ತು ಪಾನ್‌ ಕಾರ್ಡ್‌ಗಳು, 20 ಲಕ್ಷ ರೂ. ನಗದು ಹಾಗೂ 4,550 ಅಮೆರಿಕನ್‌ ಡಾಲರ್‌(ವಿದೇಶಿ ಕರೆನ್ಸಿ) ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕರ್ನಾಟಕ, ಜಮ್ಮು ಮತ್ತು ಕಾಶ್ಮೀರ, ಪುದುಚ್ಚೇರಿ ಸೇರಿದಂತೆ ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 55 ಸ್ಥಳಗಳಲ್ಲಿ ದಾಳಿ ನಡೆಸಿ ಶೋಧ ಕಾರ್ಯ ನಡೆಸಲಾಗಿದೆ. ಕರ್ನಾಟಕದಲ್ಲಿ ಹತ್ತು ಮಂದಿ ಸೇರಿದಂತೆ ಒಟ್ಟು 44 ಮಂದಿಯನ್ನು ಬಂಧಿಸಿದೆ. ಕಾರ್ಯಾಚರಣೆಗೆ ಗಡಿ ಭದ್ರತಾ ಪಡೆ ಹಾಗೂ ರಾಜ್ಯಗಳ ಪೊಲೀಸರು ಸಾಥ್‌ ನೀಡಿದರು.

ಕರ್ನಾಟಕ, ತ್ರಿಪುರಾ, ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ತೆಲಂಗಾಣ, ಹರ್ಯಾಣ, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ ಹಾಗೂ ಪುದುಚೆರಿಯಲ್ಲಿ ಎನ್‌ಐಎ ಅಧಿಕಾರಿಗಳು ಶೋಧ ಕಾರ್ಯ ನಡೆಸಿದರು. ಈ ವೇಳೆ ಕರ್ನಾಟಕದಲ್ಲಿ 10 ಮಂದಿ, ತ್ರಿಪುರಾದಲ್ಲಿ 21, ಅಸ್ಸಾಂನಲ್ಲಿ 5, ಪಶ್ಚಿಮ ಬಂಗಾಳದಲ್ಲಿ 3, ತಮಿಳುನಾಡಿನಲ್ಲಿ 2 ಹಾಗೂ ಪುದುಚೆರಿ, ತೆಲಂಗಾಣ ಮತ್ತು ಹರ್ಯಾಣದಲ್ಲಿ ತಲಾ ಒಬ್ಬರನ್ನು ಬಂಧಿಸಲಾಗಿದೆ. ಮಾನವ ಕಳ್ಳಸಾಗಣೆ ಜಾಲಗಳ ವಿರುದ್ಧ ಇದೊಂದು ಬೃಹತ್‌ ಕಾರ್ಯಾಚರಣೆಯಾಗಿದೆ ಎಂದು ಎನ್‌ಐಎ ತಿಳಿಸಿದೆ.

ರೊಹಿಂಗ್ಯಾ ವ್ಯಕ್ತಿ ಬಂಧನ
ಜಮ್ಮು, ಸಾಂಬಾ ಜಿಲ್ಲೆಗಳಲ್ಲಿ ದಾಳಿ ನಡೆಸಿರುವ ಎನ್‌ಐಎ ಅಧಿಕಾರಿಗಳು, ಮಯೆನ್ಮಾರ್‌ನ ರೊಹಿಂಗ್ಯಾ ಮುಸ್ಲಿಂ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಬಂಧಿಸಲಾಗಿದೆ.

Advertisement

ಕಾಶ್ಮೀರದಲ್ಲಿ ದಾಳಿ:
ಉಗ್ರ ಚಟುವಟಿಕೆಗಳಿಗಾಗಿ ಹಣ ಸಂಗ್ರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸರ ವಿಶೇಷ ತನಿಖಾ ದಳ(ಎಸ್‌ಐಎ)ವು ಬುಧವಾರ ಕಣಿವೆ ರಾಜ್ಯದ 20 ಸ್ಥಳಗಳಲ್ಲಿ ಹಾಗೂ ದೆಹಲಿಯ ಎರಡು ಕಡೆಗಳಲ್ಲಿ ದಾಳಿ ನಡೆಸಿದೆ. ಈ ವೇಳೆ ಮೊಬೈಲ್‌ ಫೋನ್‌ಗಳು, ಸಿಮ್‌ ಕಾರ್ಡ್‌ಗಳು, ಪಾಸ್‌ಪೋರ್ಟ್‌ಗಳು, ಡೆಬಿಟ್‌/ಕ್ರೆಡಿಟ್‌ ಕಾರ್ಡ್‌ಗಳು, ಬ್ಯಾಂಕ್‌ ದಾಖಲೆಗಳು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಶಂಕಿತ ಐಸಿಸ್‌ ಉಗ್ರನ ಸೆರೆ
ಛತ್ತೀಸ್‌ಗಡದ ದುರ್ಗ್‌ ಜಿಲ್ಲೆಯಲ್ಲಿ ಉತ್ತರ ಪ್ರದೇಶ ಎಟಿಎಸ್‌ ಮತ್ತು ಛತ್ತೀಸ್‌ಗಡ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಶಂಕಿತ ಐಸಿಸ್‌ ಉಗ್ರನನ್ನು ಬಂಧಿಸಿದ್ದಾರೆ. ಬಂಧಿತನನ್ನು ಉತ್ತರ ಪ್ರದೇಶದ ಅಲಿಘಡ ನಿವಾಸಿ ವಾಜಿವುದ್ದೀನ್‌ ಎಂದು ಗುರುತಿಸಲಾಗಿದೆ. ಈತನ ಮೇಲೆ ಅನೇಕ ದಿನಗಳಿಂದ ಉತ್ತರ ಪ್ರದೇಶ ಎಟಿಎಸ್‌ ನಿಗಾ ಇಟ್ಟಿತ್ತು. 24 ಗಂಟೆಗಳ ಶೋಧ ಕಾರ್ಯಾಚರಣೆಯ ನಂತರ ದುರ್ಗ್‌ ಜಿಲ್ಲೆಯ ಸುಪೇಲಾ ಪೊಲೀಸ್‌ ಠಾಣೆ ವ್ಯಾಪ್ತಿಯ ಸ್ಮತಿ ನಗರದಲ್ಲಿ ಬಂಧಿಸಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಈತನಿಗೆ ಐಸಿಸ್‌ ಉಗ್ರ ಮೊಹಮ್ಮದ್‌ ರಿಜ್ವಾನ್‌ನೊಂದಿಗೆ ನಿಕಟ ಸಂಪರ್ಕವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next