ಹನೂರು: ತಾಲೂಕು ವ್ಯಾಪ್ತಿಯಲ್ಲಿನ ಶೇ.80ರಷ್ಟು ರೈತರು ಹೈನುಗಾರಿಕೆಯನ್ನೇ ಅವಲಂಬಿಸಿದ್ದು, ರಾಸುಗಳ ಆರೋಗ್ಯದ ದೃಷ್ಟಿಯಿಂದ ತಾಲೂಕಿನಲ್ಲಿ 8 ಕಡೆ ಹೊಸದಾಗಿ ಪಶು ಚಿಕಿತ್ಸಾ ಕೇಂದ್ರ ತೆರೆಯಲಾಗುತ್ತಿದೆ ಎಂದು ಶಾಸಕ ಆರ್ .ನರೇಂದ್ರ ತಿಳಿಸಿದರು.
ಪಟ್ಟಣದ ಪಶುಚಿಕಿತ್ಸಾ ಕೇಂದ್ರದಲ್ಲಿ 21 ಲಕ್ಷ ರೂ. ವೆಚ್ಚದಲ್ಲಿ ಪಶು ಚಿಕಿತ್ಸಾಲಯದ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಹಿಂದಿನ ಸಮ್ಮಿಶ್ರ ಸರ್ಕಾರವು 8 ಪಶು ಚಿಕಿತ್ಸಾಕೇಂದ್ರಗಳನ್ನು ಮಂಜೂರು ಮಾಡಿದ್ದು, ಈ ಪೈಕಿ ಹನೂರಿನ ಪಶು ಚಿಕಿತ್ಸಾಕೇಂದ್ರವನ್ನುಮೇಲ್ದರ್ಜೆಗೇರಿಸಲು 21 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದೆ. ಈ ಅನುದಾನದಲ್ಲಿ ಸುಸಜ್ಜಿತ ಪ್ರಯೋಗಾಲಯ, ಸಭಾಂಗಣಮತ್ತಿತರ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.
ತಾಲೂಕಿನ ಪಶುಚಿಕಿತ್ಸಾ ಕೇಂದ್ರದಲ್ಲಿ ವೈದ್ಯರ ಕೊರತೆಯಿರುವುದನ್ನು ಸರ್ಕಾರದ ಗಮನಕ್ಕೆ ತರಲಾಗಿದ್ದು, ನೇಮಕಕ್ಕೆಕ್ರಮವಹಿಸಲಾಗಿದೆ ಎಂದರು.
ಶೀಘ್ರ ಮೇಲ್ದರ್ಜೆಗೆ: ಹನೂರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 100 ಹಾಸಿಗೆಗಳುಳ್ಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವ ಸಂಬಂಧ ಆರೋಗ್ಯ ಸಚಿವ ಡಾ|ಸುಧಾಕರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಪಪಂ ಅಧ್ಯಕ್ಷೆ ಚಂದ್ರಮ್ಮ, ಪಶು ಇಲಾಖೆ ಸಹಾಯಕ ನಿರ್ದೇಶಕ ವೆಂಕಟರಾಮು, ಎಇಇ ರಮೇಶ್,ಮುಖಂಡರಾದ ಸುದರ್ಶನ್, ಗೋವಿಂದ ಇತರರು ಹಾಜರಿದ್ದರು.