ಬೆಂಗಳೂರು: ಮಣಿಂದರ್ ಸಿಂಗ್ ಮತ್ತು ಪವನ್ ಸೆಹ್ರಾವತ್ ನಡುವಿನ ಪಂದ್ಯಾಟದಲ್ಲಿ ಮಣಿಂದರ್ ಪಡೆಗೆ ಜಯವಾಗಿದೆ. ಪಂದ್ಯದಲ್ಲಿ ಹಿಡಿತ ಸಾಧಿಸಿದ್ದ ಬೆಂಗಳೂರು ಬುಲ್ಸ್ ತಂಡ ನಬಿ ಬಕ್ಷ್ ಮಾಡಿದ ಒಂದೇ ಒಂದು ರೈಡ್ ನಿಂದ ಪಂದ್ಯ ಕಳೆದುಕೊಂಡಿತು.
ಸೆಕೆಂಡ್ ಹಾಫ್ ನಲ್ಲಿ ಬೆಂಗಳೂರು ಬುಲ್ಸ್ ತಂಡ 27-20 ಅಂಕಗಳೊಂದಿಗೆ ಮುನ್ನಡೆಯಲ್ಲಿತ್ತು. ಬೆಂಗಾಳ್ ಪಾಳಯದಲ್ಲಿ ಇದ್ದಿದ್ದು, ನಬಿ ಬಕ್ಷ್ ಒಬ್ಬರೇ. ಬುಲ್ಸ್ ನಲ್ಲಿ ಎಲ್ಲಾ ಆಟಗಾರರು ಮ್ಯಾಟ್ ನಲ್ಲಿದ್ದರು. ರೈಡ್ ಗೆ ಬಂದ ಆತ ಬೆಂಗಳೂರು ತಂಡದ ಎಲ್ಲಾ ಆಟಗಾರರನ್ನು ಔಟ್ ಮಾಡಿ ಎಂಟು ಅಂಕ ಪಡೆದರು.
ರೈಡ್ ಗೆ ಬಂದ ನಬಿಬಕ್ಷ್ ಲೆಫ್ಟ್ ಕಾರ್ನರ್ ಗೆ ಓಡಿದಾಗ ಬುಲ್ಸ್ ನ ಎಲ್ಲಾ ಆಟಗಾರರು ಹಿಡಿಯಲು ಬಂದರು. ನಬಿ ಬಕ್ಷ್ ಮಧ್ಯ ಗೆರೆ ಮುಟ್ಟುವ ಮೊದಲೇ ಅವರನ್ನು ಔಟ್ ಮಾಡಿದರು. ಅಂಪೈರ್ ಕೂಡಾ ಬುಲ್ಸ್ ಗೆ ಬೋನಸ್ ಪಾಯಿಂಟ್ ಮತ್ತು ಬೆಂಗಳೂರಿಗೆ ಒಂದು ಟ್ಯಾಕಲ್ ಅಂಕ ಮತ್ತು ಆಲೌಟ್ ನ ಎರಡು ಅಂಕ ಕೊಟ್ಟಿದ್ದರು.
ಆದರೆ ಬೆಂಗಾಲ್ ಕೋಚ್ ಕೂಡಲೇ ರಿವೀವ್ ಪಡೆದರು. ರಿವೀವ್ ನಲ್ಲಿ ನೋಡಿದಾಗ ರೈಡರ್ ನಬಿ ಯಾವುದೇ ಆಟಗಾರರನ್ನು ಮುಟ್ಟುವ ಮೊದಲೇ ಲಾಬಿ ಟಚ್ ಮಾಡಿದ್ದು ಗೊತ್ತಾಗಿತ್ತು. ಯಾವುದೇ ಡಿಫೆಂಡರನ್ನು ಮುಟ್ಟದೆ ರೈಡರ್ ಲಾಬಿ ಮುಟ್ಟಿದರೆ ರೈಡರ್ ಔಟಾಗುತ್ತಾನೆ, ಅಲ್ಲದೆ ಈ ವೇಳೆ ಆತನೊಂದಿಗೆ ಯಾರೇ ಡಿಫೆಂಡರ್ ಲಾಬಿ ಪ್ರವೇಶಿಸಿದರೆ ಆ ಡಿಫೆಂಡರ್ ಕೂಡಾ ಔಟಾಗುತ್ತಾರೆ. ಈ ರೈಡ್ ನಲ್ಲಿ ನಬಿ ಬಕ್ಷ್ ನೊಂದಿಗೆ ಆರು ಮಂದಿ ಡಿಫೆಂಡರ್ ಲಾಬಿ ಪ್ರವೇಶಿಸಿದ್ದರು. ಬುಲ್ಸ್ ನ ಚಂದ್ರನ್ ರಂಜಿತ್ ರೈಡರ್ ಟಚ್ ಗೂ ಮೊದಲೇ ಲಾಬಿ ಪ್ರವೇಶಿಸಿದ್ದರಿಂದ ಸೆಲ್ಫ್ ಔಟಾದರು. ಹೀಗಾಗಿ ಬೆಂಗಾಲ್ ಗೆ ಬೋನಸ್ ಮತ್ತು ಏಳು ಅಂಕ ನೀಡಲಾಯಿತು.
ಒಂದೇ ರೈಡ್ ನಲ್ಲಿ ಮುನ್ನಡೆ ಸಾಧಿಸಿದ ಬೆಂಗಾಲ್ ವಾರಿಯರ್ಸ್ ತಂಡ ಕೊನೆಗೆ 40-39ರ ಅಂತರದಿಂದ ಗೆಲುವು ಸಾಧಿಸಿತು.