ಹೊಸಪೇಟೆ: ಮಹಿಳೆಯನ್ನು ಮಾನಭಂಗ ಮಾಡಲು ಯತ್ನಿಸಿದ ಆರೋಪಿಗೆ ನಗರದ ಪ್ರಧಾನ ಸಿ.ಜೆ.(ಕಿ.ವಿ) ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಕಿಶನ್ ಬಿ.ಮಾಡಲಗಿ ಅವರು 8 ತಿಂಗಳ ಕಾರಾಗೃಹ ಶಿಕ್ಷೆ ಹಾಗೂ 7 ಸಾವಿರ ರೂ ದಂಡ ವಿಧಿಸಿ ಮಂಗಳವಾರ ತೀರ್ಪು ಪ್ರಕಟಿಸಿದ್ದಾರೆ.
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ನಿಡಗುಂದಿ ಗ್ರಾಮದ ಮೌಲಾಸಾಬ್ ಬಣಕಾರ ಜೈಲು ಶಿಕ್ಷೆಗೆ ಗುರಿಯಾದ ಆರೋಪಿ.
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ನಿಡಗುಂದಿ ಗ್ರಾಮದ ಮೌಲಾಸಾಬ್ ಬಣಕಾರ 2015ರಲ್ಲಿ ತಾಲೂಕಿನ ಹಂಪಿಯ ಪ್ರಕಾಶ ನಗರ ನಿವಾಸಿ ಪುಷ್ಪಾ ಮನೆಯಲ್ಲಿ ಒಬ್ಬರೆ ಇರುವಾಗ ಏಕಾಏಕಿ ಅಕ್ರಮ ಪ್ರವೇಶ ಮಾಡಿ ಮಾನಭಂಗ ಮಾಡಲು ಪ್ರಯತ್ನಿಸಿ ಪರಾರಿಯಾಗಿದ್ದನು.
ಈ ಘಟನೆ ಕುರಿತು ಹಂಪಿ ಪ್ರವಾಸಿ ಪೋಲಿಸ್ ಠಾಣೆ ಆರಕ್ಷಕ ನಿರೀಕ್ಷಕ ಸಾಯಿನಾಥ ಅವರು ಆರೋಪಿ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ಪ್ರಕರಣದ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಅಭಿಯೋಜನಾ ಪರವಾಗಿ ಸಾಕ್ಷಿದಾರರ ವಿಚಾರಣೆಯನ್ನು ಕೈಗೆತ್ತಿಕೊಂಡ ಹೊಸಪೇಟೆಯ ಪ್ರಧಾನ ಸಿ.ಜೆ.(ಕಿ.ವಿ) ಮತ್ತು ಜೆ.ಎಂ. ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ಕಿಶನ್ ಬಿ. ಮಾಡಲಗಿ ಅವರು ವಿಚಾರಣೆ ನಡೆಸಿ ಆರೋಪಿಗೆ 8 ತಿಂಗಳು ಕಾರಾಗೃಹ ಶಿಕ್ಷೆ ಮತ್ತು 7ಸಾವಿರ ರೂ ದಂಡ ಕಟ್ಟತಕ್ಕದ್ದು, ಆರೋಪಿ ದಂಡ ಕಟ್ಟಲು ವಿಫಲವಾದರೆ 15 ದಿನಗಳ ಸಾದಾ ಶಿಕ್ಷೆಯನ್ನು ಅನುಭವಿಸತಕ್ಕದ್ದು ಎಂದು ತೀರ್ಪಿನಲ್ಲಿ ಆದೇಶ ಮಾಡಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಗೀತಾ ಎಸ್. ಮಿರಜಕರ ಅವರು ವಾದ ಮಂಡಿಸಿದ್ದರು.