Advertisement

Congress ಹೊಟೇಲ್‌ ವಾಸ್ತವ್ಯಕ್ಕೆ 8 ಉಸ್ತುವಾರಿ: ಅಡ್ಡಮತದಾನದ ಭೀತಿ

01:10 AM Feb 25, 2024 | Team Udayavani |

ಬೆಂಗಳೂರು: ಮಂಗಳವಾರ ನಡೆಯಲಿ ರುವ ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಡ್ಡ
ಮತದಾನದ ಭೀತಿ ಎದುರಿಸುತ್ತಿರುವ ಕಾಂಗ್ರೆಸ್‌ ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಎಂದಿನ ದಾರಿ ಹಿಡಿದಿದೆ. ಸೋಮವಾರ ರಾತ್ರಿ ಎಲ್ಲರಿಗೂ ಬೆಂಗಳೂರಿನಲ್ಲಿ ಹೊಟೇಲ್‌ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ವ್ಯವಸ್ಥೆಗಳನ್ನು ನಿಭಾಯಿಸಲು ಸಚಿವರಾದ ಕೃಷ್ಣ ಬೈರೇಗೌಡ, ಬೈರತಿ ಸುರೇಶ್‌ ನೇತೃತ್ವದಲ್ಲಿ 8 ಮಂದಿಯ ತಂಡ ನೇಮಿಸಲಾಗಿದೆ.

Advertisement

ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್‌ ಈ ಸಂಬಂಧ ಪಕ್ಷದ ಶಾಸಕರಿಗೆ ಪತ್ರ ಬರೆದಿದ್ದು, ಸೋಮವಾರ ಮಧ್ಯಾಹ್ನ 12ಕ್ಕೆ ಎಲ್ಲ ಶಾಸಕರು ಹೆಬ್ಟಾಳದ ಮಾನ್ಯತಾ ಟೆಕ್‌ಪಾರ್ಕ್‌ ಆವರಣದಲ್ಲಿರುವ ಹಿಲ್ಟನ್‌ ಹೊಟೇಲ್‌ಗೆ ಆಗಮಿಸಬೇಕು. ಅಂದು ಅಪರಾಹ್ನ 3.30ಕ್ಕೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಹೀಗಾಗಿ ಎಲ್ಲ ಶಾಸಕರು ಒಂದು ದಿನದ ವಾಸ್ತವ್ಯಕ್ಕಾಗಿ ಸಿದ್ಧತೆ ಮಾಡಿಕೊಂಡು ಬರಬೇಕೆಂದು ಕೋರಿದ್ದಾರೆ.

ಮಂಗಳವಾರ ಅಲ್ಲಿಂದಲೇ ವಿಧಾನಸೌಧಕ್ಕೆ ಬಸ್‌ನಲ್ಲಿ ತೆರಳಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಸಂಬಂಧ ಶಾಸಕರ ಆಗಮನ ಹಾಗೂ ವಾಸ್ತವ್ಯದ ಸಮನ್ವಯ ಕಾಯ್ದುಕೊಳ್ಳಲು ಸಚಿವರಾದ ಕೃಷ್ಣ ಬೈರೇಗೌಡ, ಬೈರತಿ ಸುರೇಶ್‌, ಎಐಸಿಸಿ ಕಾರ್ಯದರ್ಶಿ ಅಭಿಷೇಕ್‌ ದತ್‌, ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಎನ್‌.ಎ. ಹ್ಯಾರೀಸ್‌, ಸರಕಾರಿ ಮುಖ್ಯ ಸಚೇತಕ ಪಿ.ಎಂ. ಅಶೋಕ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಕೆ. ಗೋವಿಂದರಾಜ್‌ ಹಾಗೂ ನಸೀರ್‌ ಅಹ್ಮದ್‌ರನ್ನು ನಿಯೋಜಿಸಲಾಗಿದೆ.

ವ್ಯವಸ್ಥೆಗಳೇನಾಗಿದೆ?
ಡಿಸಿಎಂ ಶಿವಕುಮಾರ್‌ರಿಂದ ಕಾಂಗ್ರೆಸ್‌ನ ಎಲ್ಲ ಶಾಸಕರಿಗೆ ಪತ್ರ
ಸೋಮವಾರ ಮಧ್ಯಾಹ್ನ 12ಕ್ಕೆ ಹಿಲ್ಟನ್‌ ಹೊಟೇಲ್‌ಗೆ ತೆರಳಲು ಮನವಿ
ಅಪರಾಹ್ನ 3.30ಕ್ಕೆ ಹೊಟೇಲ್‌ನಲ್ಲಿ ಕೈ ಶಾಸಕಾಂಗ ಪಕ್ಷದ ಸಭೆ
ಅಭ್ಯರ್ಥಿಗಳಾದ ಚಂದ್ರಶೇಖರ್‌, ಅಜಯ್‌ ಮಾಕೆನ್‌, ನಾಸೀರ್‌ ಹುಸೇನ್‌ ಭಾಗಿ.
ಮಂಗಳವಾರ ಹೊಟೇಲ್‌ನಿಂದ ವಿಧಾನ ಸೌಧಕ್ಕೆ ತೆರಳಿ ಶಾಸಕರಿಂದ ಮತದಾನ

ಕುಪೇಂದ್ರ ರೆಡ್ಡಿ ಸವಾಲು
ರಾಜ್ಯಸಭೆಯ 4 ಸ್ಥಾನಗಳಿಗೆ ಐವರು ಅಭ್ಯರ್ಥಿಗಳು ಕಣದಲ್ಲಿರುವುದರಿಂದ ಕಾಂಗ್ರೆಸ್‌ ಪಕ್ಷದಿಂದ ಯಾವೊಂದು ಮತವೂ ಅಡ್ಡ ಮತ ದಾನ ಆಗಕೂಡದೆಂದು ನಿರ್ಧರಿಸಲಾಗಿದೆ. ಅದರಲ್ಲೂ ಎಐಸಿಸಿ ಅಭ್ಯರ್ಥಿಯಾಗಿರುವ ಅಜಯ್‌ ಮಾಕೆನ್‌ ಗೆಲುವು ಪ್ರತಿಷ್ಠೆಯಾಗಿದೆ. ಹೀಗಾಗಿ ತನ್ನ ಶಾಸಕರನ್ನು ಕಾಯ್ದುಕೊಳ್ಳಲು ಕಾಂಗ್ರೆಸ್‌ ಹೊಟೇಲ್‌ ವಾಸ್ತವ್ಯ ಮಾಡಿದೆ. ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಸದೆ ಇರುತ್ತಿದ್ದರೆ ಕಾಂಗ್ರೆಸ್‌ನ ಮೂವರು ಹಾಗೂ ಬಿಜೆಪಿಯ ನಾರಾಯಣ ಸಾ. ಭಾಂಡಗೆ ಅವಿರೋಧವಾಗಿ ಆಯ್ಕೆಯಾಗುತ್ತಿದ್ದರು.
ಕುಪೇಂದ್ರ ರೆಡ್ಡಿ ಉಮೇದುವಾರಿಕೆ ಕುತೂಹಲ ಕೆರಳಿಸಿದೆ. ಅವರು ತನ್ನ ಗೆಲುವಿಗೆ ಅಗತ್ಯವಿರುವ 9 ಮತಗಳನ್ನು ಹೇಗೆ ಪಡೆಯುತ್ತಾರೆಂಬುದು ಯಕ್ಷ ಪ್ರಶ್ನೆಯಾಗಿದೆ. ಅವರು ಗೆಲ್ಲಬೇಕಾದರೆ ಕಾಂಗ್ರೆಸ್‌ ಮತಬುಟ್ಟಿಗೆ ಕೈ ಹಾಕಲೇಬೇಕು. ಹೀಗಾಗಿ ಕಾಂಗ್ರೆಸ್‌ಗೆ ಅಡ್ಡ ಮತದಾನದ ಭೀತಿ ಕಾಡುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next