ತಿರುವನಂತಪುರಂ: ಜಗತ್ತಿನ ಅತ್ಯಂತ ಶ್ರೀ ಮಂತ, ಬಹುಕೋಟಿ ಮೌಲ್ಯದ ವಜ್ರ- ಚಿನ್ನಾಭರಣಗಳನ್ನು ಹೊಂದಿದ ಕೇರಳದ ಪ್ರಸಿದ್ಧ ಅನಂತ ಪದ್ಮನಾಭ ದೇಗುಲದಿಂದ 8 ಅತಿ ಬೆಲೆ ಬಾಳುವ ವಜ್ರಗಳು ಕಳವಾಗಿವೆ.
ದೇಗುಲದ ಗುಪ್ತ ನೆಲಮಾಳಿಗೆಗಳಿಂದ ಸುಮಾರು 189 ಕೋಟಿ ರೂ. ಮೌಲ್ಯದ ಚಿನ್ನಾ ಭರಣಗಳು ನಾಪತ್ತೆಯಾಗಿರುವ ಬಗ್ಗೆ ವಿಶೇಷ ಲೆಕ್ಕಪತ್ರ ಶೋಧನಾಧಿಕಾರಿ ವಿನೋದ್ ರಾಯ್ ಅವರು ವರದಿಯಲ್ಲಿ ಉಲ್ಲೇಖೀಸಿದ 10 ತಿಂಗಳ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ.
ಇತ್ತೀಚೆಗೆ ರಾಯ್ ಅವರ ಸಮಿತಿ ಪರಾಮರ್ಶೆ ನಡೆಸಿದ ವೇಳೆ ಈ ವಜ್ರ ಹಾಗೂ ಚಿನ್ನಾಭರಣಗಳು ನಿಗೂಢವಾಗಿ ನಾಪತ್ತೆಯಾಗಿ ರು ವುದು ಗೊತ್ತಾಗಿದೆ. ಜತೆಗೆ, ಚಿನ್ನಾಭರಣ ಕಳವು ಬಗ್ಗೆ ಅಮಿಕಸ್ ಕ್ಯೂರಿ ಗೋಪಾಲ್ ಸುಬ್ರಮಣಿಯನ್ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ. ಕಳವಾದ ವಜ್ರಾಭರಣ ಗಳು ನಿತ್ಯ ಪೂಜೆಯ ವೇಳೆ ಪದ್ಮನಾಭನ ಮೂರ್ತಿಯಲ್ಲಿ ಇರುವಂತಹವುಗಳು ಎಂದು ಹೇಳಲಾಗಿದೆ. ಇದೀಗ ಪ್ರಕರಣ ಬಗ್ಗೆ ಕೇರಳ ಕ್ರೈಂಬ್ರ್ಯಾಂಚ್ ಪೊಲೀಸರು ಕೇಸು ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.
ಇತ್ತೀಚೆಗೆ ನಿವೃತ್ತರಾಗಿದ್ದ ದೇಗುಲದ ಕಾರ್ಯಕಾರಿ ಅಧಿಕಾರಿ ಕೆ.ಎನ್. ಸತೀಶ್ ದೇಗುಲದ ಗರ್ಭಗುಡಿ ಸನಿಹ ನೆಲ ಮಾಳಿಗೆಯಲ್ಲಿ ಇಟ್ಟಿದ್ದ ವಜ್ರಗಳು ನಾಪತ್ತೆ ಯಾಗಿವೆ ಎಂದು ಮೇನಲ್ಲಿ ನೀಡಲಾಗಿದ್ದ ತಮ್ಮ ವರದಿಯಲ್ಲಿ ಹೇಳಿದ್ದರು. ವಜ್ರದ ಅಧಿಕೃತ ಬೆಲೆ 21 ಲಕ್ಷಗಳೆಂದು ಹೇಳಲಾಗಿದ್ದು, ಅವುಗಳು ಪ್ರಾಚೀನವಾದುವುಗಳಾಗಿದ್ದರಿಂದ ಬೆಲೆಕಟ್ಟಲಾಗದ್ದು ಎಂದು ಹೇಳಲಾಗಿದೆ.