ಮುಂಬಯಿ: ಮುಂದಿನ ತಿಂಗಳು 18ನೇ ವರ್ಷಕ್ಕೆ ಕಾಲಿಡಲಿರುವ ನಾಸಿಕ್‌ನ ಸೈಕ್ಲಿಂಗ್ ಹೀರೋ ಓಂ ಮಹಾಜನ್ ನೂತನ ದಾಖಲೆಯೊಂದಿಗೆ ಸುದ್ದಿಯಾಗಿದ್ದಾರೆ. ಅವರು ಭಾರತದ ಅತೀ ವೇಗದ ಸೈಕಲ್ ಪ್ರಯಾಣದ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ.
ಓಂ ಮಹಾಜನ್ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗಿನ 3,600 ಕಿ.ಮೀ. ದೂರವನ್ನು ಕೇವಲ 8 ದಿನ, 7 ಗಂಟೆ, 38 ನಿಮಿಷಗಳಲ್ಲಿ ಕ್ರಮಿಸಿ ದಾಖಲೆ ಸ್ಥಾಪಿಸಿದರು. ಶನಿವಾರ ಅಪರಾಹ್ನ ಕನ್ಯಾಕುಮಾರಿಯಲ್ಲಿ ತಮ್ಮ ಸೈಕ್ಲಿಂಗ್ ಯಾನವನ್ನು ಕೊನೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತಾಡಿದ ಓಂ ಮಹಾಜನ್, “ಸೈಕ್ಲಿಂಗ್ ಅಂದರೆ ನನಗೆ ಜೀವ. ಲಾಕ್‌ಡೌನ್ ಆರಂಭವಾದ ಬಳಿಕ ರೇಸ್ ಅಕ್ರಾಸ್ ಅಮೆರಿಕ (ಆರ್‌ಎಎಎಮ್-ರ್ಯಾಮ್) ರೇಸ್‌ನಲ್ಲಿ ಪಾಲ್ಗೊಳ್ಳಬೇಕೆಂಬ ಕನಸು ಕಾಣತೊಡಗಿದೆ. ಇದರ ಅರ್ಹತಾ ಸುತ್ತಿನಲ್ಲಿ ಪಾಲ್ಗೊಳ್ಳಲು ಸಿದ್ಧತೆಯನ್ನೂ ಆರಂಭಿಸಿದ್ದೆ. ಆದರೆ ಸ್ಟಾಂಡರ್ಡ್ 600 ಕಿ.ಮೀ. ಕ್ವಾಲಿಫೈಯರ್ ರೈಡ್‌ಗಿಂತ ರೇಸ್ ಅಕ್ರಾಸ್ ಇಂಡಿಯಾದಲ್ಲಿ ಪಾಲ್ಗೊಳ್ಳುವುದು ಒಳ್ಳೆಯದೆಂಬ ನಿರ್ಧಾರಕ್ಕೆ ಬಂದೆ’ ಎಂದುದಾಗಿ ಮಹಾಜನ್ ಪಿಟಿಐ ಜತೆ ಹೇಳಿಕೊಂಡರು.
ಭಾರತದಲ್ಲಿ ವಾರ್ಷಿಕ ತೆರಿಗೆ ವಂಚನೆ ಪ್ರಮಾಣ ಎಷ್ಟು ಇದೆ ಗೊತ್ತಾ?
ಕಳೆದ ವಾರದ ತೀವ್ರ ಚಳಿಯ ಒಂದು ದಿನ ಶ್ರೀನಗರದಿಂದ ಮಹಾಜನ್ ತಮ್ಮ ಸೈಕ್ಲಿಂಗ್ ಪಯಣಕ್ಕೆ ಓಂಕಾರ ಹಾಕಿದರು. ಮಧ್ಯಪ್ರದೇಶಕ್ಕೆ ಬರುವಾಗ ಭಾರೀ ಮಳೆ ಸುರಿಯುತ್ತಿತ್ತು. ದಕ್ಷಿಣ ಭಾರತದತ್ತ ಪಯಣ ಮುಂದುವರಿಸಿದಾಗ ಸುಡುಬಿಸಿಲು ಕಾಡತೊಡಗಿತ್ತು ಎಂದು ಅವರು ತಮ್ಮ ಅನುಭವ ಹೇಳಿಕೊಂಡರು.