ಎಚ್.ಡಿ.ಕೋಟೆ: ಪಟ್ಟಣದಲ್ಲಿ 8 ಕೋಟಿ ರೂ. ವೆಚ್ಚದ 30 ಹಾಸಿಗೆ ಸಾಮರ್ಥ್ಯದ ಸುಸಜ್ಜಿತ ತಾಯಿ-ಮಗು ಆಸ್ಪತ್ರೆ ಗುರುವಾರ ಲೋಕಾರ್ಪಣೆಗೊಳ್ಳಲಿದೆ. ಬಹುದಿನ ಬೇಡಿಕೆ ಇದೀಗ ಈಡೇರುವ ಮೂಲಕ ತಾಲೂಕಿನ ಜನತೆಗೆ ಸಂಭ್ರಮ ತಂದಿದೆ. ಹೆರಿಗೆ ಮತ್ತಿತರ ಚಿಕಿತ್ಸೆಗೆ ಮೈಸೂರು ಮತ್ತಿತರ ಸ್ಥಳಗಳಿಗೆ ಹೋಗುವುದು ತಪ್ಪಲಿದೆ.
ಅಂದು ಶಾಸಕರಾಗಿದ್ದ ದಿ.ಚಿಕ್ಕಮಾದು ದೂರದೃಷ್ಟಿಯ ಪರಿಶ್ರಮದ ಫಲ ಇಂದು ಕ್ಷೇತ್ರದ ಜನತೆಗೆ ದೊರೆಯುವಂತಾಗಿದೆ. ಕಳೆದ ವರ್ಷ ಮಾರ್ಚ್‌ನಲ್ಲಿ ಲೋಕಾರ್ಪಣೆಗೊಳ್ಳಬೇಕಾದ ತಾಲೂಕು ಕೇಂದ್ರ ಸ್ಥಾನದ ನೂತನ ತಾಯಿ-ಮಗು ಆಸ್ಪತ್ರೆ ಕಟ್ಟಡ ಸುಮಾರು ಒಂದು ವರ್ಷ ತಡವಾಗಿಯಾದರೂ ಸುಸಜ್ಜಿತ ಹಾಗೂ ಅತ್ಯಾಧುನಿಕವಾಗಿ ನಿರ್ಮಾಣವಾಗಿದೆ.
ತಾಲೂಕು ಕೇಂದ್ರದಲ್ಲಿಕಳೆದ 2 ವರ್ಷಗಳ ಹಿಂದಿನಿಂದ ಪ್ರಗತಿಯಲ್ಲಿದ್ದ ತಾಯಿ-ಮಗು ಆಸ್ಪತ್ರೆ ಕಟ್ಟಡ ಕಾಮಗಾರಿ ಕಳೆದ ವರ್ಷ ಮಾರ್ಚ್‌ನಲ್ಲಿ ಪೂರ್ಣಗೊಂಡು ಸಾರ್ವಜನಿಕ ಸೇವೆಗೆ ಲಭ್ಯವಾಗಬೇಕಿತ್ತು. ವಿವಿಧ ಕಾರಣಗಳಿಂದ ಒಂದು ವರ್ಷ ವಿಳಂಬವಾಗಿತ್ತು. ಇದೀಗ ಲೋಕಾರ್ಪಣೆಗೊಳ್ಳಲು ಮದುವಣಗಿತ್ತಿಯಂತೆ ಸಿಂಗರಿಸಿಕೊಂಡಿದೆ.
ಚಿಕ್ಕಮಾದು ಕೊಡುಗೆ: ಕಳೆದ 2 ವರ್ಷಗಳ ಹಿಂದೆ ತಾಲೂಕಿನ ಶಾಸಕರಾಗಿದ್ದ ದಿ. ಚಿಕ್ಕಮಾದು ಅವರ ಜೀವಿತಾವಧಿಯಲ್ಲಿ ಪಟ್ಟಣದಲ್ಲಿ 2 ಕೋಟಿ ರೂ.ವೆಚ್ಚದ ನೂತನ ಪುರಸಭೆ ಕಟ್ಟಡ ಮತ್ತು ಸಾರ್ವಜನಿಕ ಆಸ್ಪತ್ರೆ ಹಿಂಬದಿಯಲ್ಲಿ ಆಸ್ಪತ್ರೆಗೆ ಸೇರಿದ ಖಾಲಿ ನಿವೇಶನದಲ್ಲಿ 8 ಕೋಟಿ ರೂ. ವೆಚ್ಚದಲ್ಲಿ 30 ಹಾಸಿಗೆ ಸಾಮರ್ಥ್ಯದ ಸುಸಜ್ಜಿತ, ಅತ್ಯಾಧುನಿಕ ತಾಯಿ-ಮಗು ಆಸ್ಪತ್ರೆ ನಿರ್ಮಾನಕ್ಕೆ ಅಂದಿನ ಸರ್ಕಾರ ಅನುಮೋದನೆ ನೀಡಿತ್ತು.
ಈ ಎರಡೂ ಕಟ್ಟಡಗಳು ಇದೀಗ ಉದ್ಘಾಟನೆಯಾಗುತ್ತಿದೆ. ಹಿಂದುಳಿದ ತಾಲೂಕಿನ ಜನತೆಯ ಸೇವೆಗೆ ದಕ್ಕುವಂತೆ ಮಾಡಿರುವ ಕೀರ್ತಿ ಚಿಕ್ಕಮಾದು ಅವರಿಗೆ ಸಲ್ಲುತ್ತದೆ. ಪಟ್ಟಣದ ಪುರಸಭೆಯ ನೂತನ ಕಟ್ಟಡ ಕೂಡ ಇದೇ ಸಂದರ್ಭದಲ್ಲಿ ಉದ್ಘಾಟನೆಗೊಳ್ಳಲು ಸಜ್ಜಾಗಿದೆ.
ಪಟ್ಟಣದ ಸಂತೆ ಮೈದಾನದಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಕಂದಾಯ ಸಚಿವ ಆರ್.ಅಶೋಕ್, ಆರೋಗ್ಯ ಸಚಿವ ಬಿ.ಶ್ರೀರಾಮುಲು, ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು, ಜಿಪಂ ಅಧ್ಯಕ್ಷ ಪರಿಮಳಾ ಶ್ಯಾಂ ಸೇರಿದಂತೆ ಸ್ಥಳೀಯ ಜನಪ್ರತಿನಿಧಿ ಗಳು ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ, ವಿವಿಧ ನೂತನ ಕಾಮಗಾರಿಗಳಿಗೆ ಭೂಮಿಪೂಜೆ ಕೂಡ ನೆರೆವೇರಲಿದೆ.