Advertisement
ಹೌದು, ವೈದ್ಯಕೀಯ ಇತಿಹಾಸದಲ್ಲೇ ಮನುಷ್ಯರ ಮಿದುಳಿನಲ್ಲಿ ದುಂಡು ಹುಳು ಪತ್ತೆಯಾಗಿರುವ; ಅದರಲ್ಲೂ ಜೀವಂತವಾಗಿ ಪತ್ತೆಯಾಗಿರುವ ಮೊದಲ ಪ್ರಕರಣ, ಆಸ್ಟ್ರೇಲಿಯದ ರಾಜಧಾನಿಯಾದ ಕ್ಯಾನ್ಬೆರಾದ ಆಸ್ಪತ್ರೆಯೊಂದರಲ್ಲಿ ನಡೆದಿದೆ. 60 ವರ್ಷದ ಮಹಿಳೆಯೊಬ್ಬರು ಆಗಾಗ ತೀವ್ರ ತಲೆನೋವು ಬರುತ್ತಿದ್ದ ಕಾರಣ, ಆಸ್ಪತ್ರೆಗೆ ದಾಖಲಾಗಿದ್ದರು. ನರತಜ್ಞರಾದ ಹರಿಪ್ರಿಯಾ ಬಂದಿ ಎಂಬ ವೈದ್ಯೆ ಅವರನ್ನು ಪರೀಕ್ಷಿಸಿದ್ದಾರೆ. ಈ ವೇಳೆ ಎಂಆರ್‌ಐ ಸ್ಕ್ಯಾನ್‌ನಲ್ಲಿ ಮೆದುಳಿನಲ್ಲಿ ವೈಪರೀತ್ಯ ವರದಿಯಾಗಿದ್ದು, ತಕ್ಷಣವೇ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಆಗ ವೈದ್ಯರಿಗೆ ಕಂಡದ್ದು ಅಚ್ಚರಿ, ಕಾರಣ ಮಹಿಳೆಯ ಮೆದುಳಿನಲ್ಲಿ ಜೀವಂತವಾಗಿರುವ 8 ಸೆ.ಮೀ. ಉದ್ದದ ದುಂಡುಹುಳು ಹೊರಳಾಡುತ್ತಿದೆ! ವೈದ್ಯರೇ ಇದರಿಂದ ಗಾಬರಿಗೊಂಡಿದ್ದಾರೆ. ಸದ್ಯ ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಆಕೆ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಸಾಮಾನ್ಯವಾಗಿ ಈ ರೀತಿಯ ದುಂಡುಹುಳುಗಳು ಹೆಬ್ಟಾವಿನ ಮೆದುಳಿನಲ್ಲಿ ಗೋಚರಿಸುತ್ತವೆ. ಮಹಿಳೆ ನದಿಯೊಂದರ ಪಕ್ಕ ವಾಸವಿದ್ದು, ಆ ಪ್ರದೇಶದಲ್ಲಿ ಹೆಬ್ಟಾವುಗಳೂ ಇದ್ದವು ಎನ್ನಲಾಗಿದೆ. ಆಕೆ ಹೆಬ್ಟಾವಿನೊಂದಿಗೆ ಒಡನಾಟ ಹೊಂದಿರಲಿಲ್ಲ. ಆದರೆ, ಆ ಪ್ರದೇಶದ ಸುತ್ತಮುತ್ತಲಿನ ಸೊಪ್ಪುಗಳನ್ನು ಅಡುಗೆಗೆ ಬಳಸುತ್ತಿದ್ದರೆಂದು ತಿಳಿದುಬಂದಿದೆ. ಬಹುಶಃ ಹೆಬ್ಟಾವಿನ ಮಲದ ಮೂಲಕ ದುಂಡುಹುಳುವಿನ ಮೊಟ್ಟೆಗಳು ಸೊಪ್ಪು ಸೇರಿ, ಅದು ಮಹಿಳೆಯ ಊಟದಲ್ಲಿ ಬೆರೆತಿರಬಹುದು. ಆ ಮೂಲಕ ಆಕೆಯ ಮೆದುಳು ಸೇರಿಸಬಹುದು ಎಂದು ವೈದ್ಯರು ಅಂದಾಜಿಸಿದ್ದಾರೆ.