ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ 5ನೇ ಮೇಳದ ಪ್ರಧಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರ ವರ್ಗಾವಣೆ ವಿರೋಧಿಸಿ 23 ಮಂದಿ ಕಲಾವಿದರು ರಾಜೀನಾಮೆ ನೀಡಿದ್ದ ಪ್ರಕರಣ ಇನ್ನೊಂದು ಮಜಲು ಮುಟ್ಟಿದೆ.
ಇದೀಗ ರಾಜೀನಾಮೆ ನೀಡಿದವರಲ್ಲಿ 9 ಮಂದಿ ಮೇಳಕ್ಕೆ ವಾಪಸಾಗಿದ್ದಾರೆ. 8 ಮಂದಿಯ ರಾಜೀನಾಮೆ ಅಂಗೀಕರಿಸಲಾಗಿದ್ದು, ಅವರಿಗೆ ಸೇರ್ಪಡೆಗಿದ್ದ ಬಾಗಿಲು ಬಂದ್ ಆಗಿದೆ. ಇದೇ ಸಂದರ್ಭ 6 ಮಂದಿ ಕಲಾವಿದರು ಅತಂತ್ರ ಸ್ಥಿತಿ ತಲುಪಿದ್ದಾರೆ.
ರಾಜೀನಾಮೆ ಪ್ರಕರಣಕ್ಕೆ ಕಾರಣವಾಗಿದ್ದಾರೆ ಎನ್ನಲಾದ 8 ಮಂದಿ ಕಲಾವಿದರನ್ನು ಹೊರತು ಪಡಿಸಿ ಉಳಿದ ಕಲಾವಿದರಿಗೆ ಮೇಳದ ಕಡೆಯಿಂದ ಕರೆ ಹೋಗಿದ್ದು, ನಿಲುವು ಸ್ಪಷ್ಟಪಡಿಸಲು ಶನಿವಾರ ತಿಳಿಸಲಾಗಿತ್ತು. ಅದರಂತೆ 9 ಮಂದಿ ಕಲಾವಿದರು ವಾಪಸ್ಸಾಗುವ ಇಚ್ಛೆ ವ್ಯಕ್ತಪಡಿಸಿದ್ದರು. ಇನ್ನು 6 ಕಲಾವಿದರು ಸರಿಯಾದ ನಿಲುವು ತಿಳಿಸದಿರುವುದರಿಂದ ಅವರ ಸ್ಥಿತಿ ಅತಂತ್ರವಾಗಿದೆ.
ತಿರುಗಾಟಕ್ಕೆ ಮೇಳ ಸಿದ್ಧ
ಕಲಾವಿದರ ರಾಜೀನಾಮೆ ವಿವಾದದ ಮಧ್ಯೆ ತಿರುಗಾಟಕ್ಕೆ ಮೇಳ ಪೂರ್ಣವಾಗಿ ಸಿದ್ಧವಾಗಿದೆ. ಕಟೀಲು ಮೇಳದಲ್ಲಿ ಉಚಿತ ಸೇವೆ ಸಲ್ಲಿಸಲು 25ಕ್ಕೂ ಹೆಚ್ಚು ಹವ್ಯಾಸಿ ಕಲಾವಿದರು ಮುಂದೆ ಬಂದಿದ್ದಾರೆ. ಜತೆಗೆ ಹೊಸ 6 ಸಮರ್ಥ ಕಲಾವಿದರು ಮೇಳಕ್ಕೆ ಸೇರ್ಪಡೆಯಾಗಿದ್ದಾರೆ. ಇದರೊಂದಿಗೆ ಮೇಳದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ 15ಕ್ಕೂ ಮಿಕ್ಕಿ ಕಲಾವಿದರಿಗೆ ಭಡ್ತಿ ನೀಡಲು ಉದ್ದೇಶಿಸಲಾಗಿದೆ. ಹೊಸದಾಗಿ 25ಕ್ಕೂ ಹೆಚ್ಚು ಕಲಾವಿದರು ಮೇಳಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ಮೇಳದ ಸಂಚಾಲಕರ ಅಪ್ತ ವಲಯ ತಿಳಿಸಿದೆ.
ವಾಪಸ್ ಸೇರಿಸಿಕೊಳ್ಳಲು ಕೆಲವರ ದುಂಬಾಲು!
ರಾಜೀನಾಮೆ ನೀಡಿದ ಕಲಾವಿದರನ್ನು ಹೊರಗಿಟ್ಟೇ ಮೇಳ ಹೊರಡಲು ಸಿದ್ಧತೆ ನಡೆಸುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಕೆಲವರು ಸಂಚಾಲಕರ ಆಪ್ತ ವಲಯಕ್ಕೆ ಕರೆಮಾಡಿ ಮೇಳಕ್ಕೆ ವಾಪಸ್ ಸೇರಿಸಿಕೊಳ್ಳಲು ದುಂಬಾಲು ಬಿದ್ದಿದ್ದಾರೆ. ಇನ್ನು ಆರೂ ಮೇಳದ ಕಲಾವಿದರಲ್ಲಿ ಹೆಚ್ಚಿನವರು ಯಾವುದೇ ಮೇಳವಾದರೂ ಸೇವೆಗೆ ಸಿದ್ಧರಾಗಿದ್ದಾರೆ ಎಂದು ಕಟೀಲು ಮೇಳದ ಮೂಲಗಳು ತಿಳಿಸಿವೆ.
ವಾಪಸ್ ಬರಲು ಸಿದ್ಧ
ಏತನ್ಮಧ್ಯೆ ರಾಜೀನಾಮೆ ನೀಡಿದ ಕಲಾವಿದರು ಉದಯವಾಣಿಗೆ ಪ್ರತಿಕ್ರಿಯಿಸಿದ್ದು, ರಾಜೀನಾಮೆ ವಾಪಸ್ ಪಡೆದುಕೊಂಡಿದ್ದು, ಮೇಳಕ್ಕೆ ಬರಲು ಸಿದ್ಧವಾಗಿದ್ದೇವೆ ಎಂದು ತಿಳಿಸಿದ್ದಾರೆ.