ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರ ಸಶಸ್ತ್ರ ಪಡೆಯ 14 ಲಕ್ಷ ಯೋಧರಿಗೆ ವೇತನ ಏರಿಕೆ ಮಾಡಿ ಅಧಿಸೂಚನೆಯನ್ನು ಹೊರಡಿಸಿದೆ. ಏಳನೇ ವೇತನ ಆಯೋಗವು ಜಾರಿಗೆ ಬಂದ 2016ರ ಜನವರಿ 1ರಿಂದಲೇ ಈ ವೇತನ ಏರಿಕೆಯು ಸಶಸ್ತ್ರ ಪಡೆ ಸಿಬಂದಿಗಳಿಗೆ ಸಿಗಲಿದೆ.
ಇದರೊಂದಿಗೆ ಮೋದಿ ಸರಕಾರ ಸಶಸ್ತ್ರ ಪಡೆಗಳ ಪ್ರಮುಖ ಬೇಡಿಕೆಯೊಂದನ್ನು ಪರಿಗಣಿಸಿದೆ. ಆ ಪ್ರಕಾರ ಅದು ಸೇನಾ ಸಿಬಂದಿಗಳಿಗೆ ಈ ಮೊದಲು ನೀಡುತ್ತಿದ್ದ ಅಶಕ್ತತೆ ಆಧಾರಿತ ಪಿಂಚಣಿಯನ್ನು ಮುಂದುವರಿಸಲು ನಿರ್ಧರಿಸಿದೆ ಮತ್ತು ಏಳನೇ ವೇತನ ಆಯೋಗವು ಶಿಫಾರಸು ಮಾಡಿದ್ದ ಹೊಸ ಯೋಜನೆಯನ್ನು ಕೈಗೊಳ್ಳದಿರಲು ನಿರ್ಧರಿಸಿದೆ.
ಅಶಕ್ತತೆಯ ಪಿಂಚಣಿಯನ್ನು ಶೇಕಡಾವಾರು ನೆಲೆಯಲ್ಲಿ ನೀಡುವ ಈ ಹಿಂದಿನ ಕ್ರಮಕ್ಕೆ ಮರಳುವಂತೆ ಸಶಸ್ತ್ರ ಪಡೆಗಳು ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದವು. ಏಳನೇ ಕೇಂದ್ರ ವೇತನ ಆಯೋಗವು ಶಿಫಾರಸು ಮಾಡಿದ್ದ ಸ್ತರ ಆಧಾರಿತ ವ್ಯವಸ್ಥೆಯನ್ನು ನಿಲ್ಲಿಸುವಂತೆ ಆಗ್ರಹಿಸಿದ್ದವು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದಿದ್ದ ಕೇಂದ್ರ ಸಚಿವ ಸಂಪುಟದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಕೇಂದ್ರ ಸರಕಾರ ಸಶಸ್ತ್ರ ಪಡೆಗಳ ವೇತನ ಸಂರಚನೆಗೆ ಸಂಬಂಧಿಸಿದ ಮೂರು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ತಾತ್ವಿಕವಾಗಿ ಒಪ್ಪಿದೆ. ಇದರಲ್ಲಿ ಬ್ರಿಗೇಡಿಯರ್ ಮಟ್ಟದಿಂದ ಮುಂದಿನ ಹಂತಕ್ಕೆ ಭಡ್ತಿ ಪಡೆಯುವ ಯೋಧರಿಗೆ ವೇತನ ರಕ್ಷಣೆ ನೀಡುವುದು ಕೂಡ ಸೇರಿದೆ.
ಈಗಿನ ವ್ಯವಸ್ಥೆಯಲ್ಲಿ ಕೆಲವೊಂದು ದೋಷಗಳು ಇವೆ. ಮೇಲ್ದರ್ಜೆಗೆ ಭಡ್ತಿ ಪಡೆಯುವ ಯೋಧರು ತಮ್ಮ ಮಿಲಿಟರಿ ಸೇವಾ ವೇತನವನ್ನು ಕಳೆದುಕೊಳ್ಳುವುದು ಕೂಡ ಇದರಲ್ಲಿ ಪ್ರಮುಖವಾಗಿದೆ.