ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿರುವ “ವಿವೇಕ’ ಶಾಲೆಗಳ ಕಟ್ಟಡಗಳಿಗೆ ಕೇಸರಿ ಬಣ್ಣ ಬಳಿಯಬೇಕೆಂಬ ವಿವಾದಕ್ಕೆ ಸ್ವತಃ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರೇ ತೆರೆ ಎಳೆದಿದ್ದು, ಇಂತಹದ್ದೇ ಬಣ್ಣ ಬಳಿಯಿರಿ ಅಂತ ಯಾವುದೇ ಸುತ್ತೋಲೆಯಲ್ಲಿ ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಲ್ಲದೇ ಶಾಲಾ ಕಟ್ಟಡಗಳಿಗೆ ಕೇಸರಿ ಬಣ್ಣ ವಿಚಾರದಲ್ಲಿ ಕಾಂಗ್ರೆಸ್‌ನವರು ಚುನಾವಣೆ ಕಾರಣಕ್ಕೆ ಒಂದು ಧರ್ಮದ ಮತಗಳ ಓಲೈಕೆಗೆ ರಾಜಕೀಯ ಬಣ್ಣ ಬಳಿಯುತ್ತಿದ್ದಾರೆ ಎಂದೂ ಸಚಿವರು ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲಾ ಕಟ್ಟಡಗಳಿಗೆ ಕೇಸರಿ ಬಣ್ಣ ಬಳಿಯುವ ವಿಚಾರಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ವಿರೋಧ ವ್ಯಕ್ತವಾಗುತ್ತಿದೆ ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿ “ಯಾವುದೇ ಸುತ್ತೋಲೆಯಲ್ಲಿ ಇದೇ ರೀತಿ ಬಣ್ಣ ಬಳಿಯಿರಿ ಅಂತ ಹೇಳಿಲ್ಲ ‘ಎಂದು ಸ್ಪಷ್ಟಪಡಿಸಿದರು.
ಸ್ಥಳೀಯ ವಾತಾವರಣಕ್ಕೆ ತಕ್ಕಂತೆ ಕೊಠಡಿ ನಿರ್ಮಿಸಿ “ವಿವೇಕ’ ಹೆಸರಿಡಿ ಅಂತ ಹೇಳಿದ್ದೇವೆ. ಆದರೆ ಜ್ಞಾನದ ಸಂಕೇತವಾದ ಸ್ವಾಮಿ ವಿವೇಕಾನಂದರನ್ನು ಬ್ರ್ಯಾಂಡ್ ಮಾಡಲು ಸೂಚಿಸಿದ್ದೇವೆ. ಒಂದು ವೇಳೆ ಶಿಕ್ಷಣ ಕ್ಷೇತ್ರಕ್ಕೂ, ಕೇಸರಿ ಬಣ್ಣಕ್ಕೂ ಹತ್ತಿರವಿದೆ. ಕೇಸರಿ ಬಣ್ಣ ಬಳಿದರೆ ಮಾನಸಿಕ ವಿಕಾಸ ಎಂದು ತಜ್ಞರು ವರದಿ ನೀಡಿದರೆ ನಾವು ಹಿಂದೇಟು ಹಾಕಲ್ಲ. ರಾಜಕೀಯ ಉದ್ದೇಶಕ್ಕಾಗಿ, ಒಂದು ಧರ್ಮದ ಓಟಿಗಾಗಿ ಈ ರೀತಿಯ ವಿರೋಧ ಸರಿಯಲ್ಲ ಎಂದರು.
ತಜ್ಞರ ಸಮಿತಿ ನೇಮಕ: ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗಿ ರಾಜ್ಯ ಪಠ್ಯಕ್ರಮ ಚೌಕಟ್ಟು (ಎಸ್‌ಸಿಎಫ್) ರೂಪಿಸಲೆಂದು ಶೀಘ್ರವೇ ತಜ್ಞರ ಸಮಿತಿ ನೇಮಿಸಲಾಗುವುದು. ತಜ್ಞರ ಸಮಿತಿ ವರದಿ ಆಧರಿಸಿ ಎಸ್‌ಸಿಎಫ್ ಬಿಡುಗಡೆ ಮಾಡಲಾಗುವುದು ಎಂದರು.
ಗೌರವ ಶಿಕ್ಷಕರ ನೇಮಕ: ಈ ಬಾರಿ ಶಾಲೆ ಪ್ರಾರಂಭಿಕ ದಿನದಿಂದ ಅತಿಥಿ ಶಿಕ್ಷಕರು ಕೆಲಸಕ್ಕೆ ಹಾಜರಾಗಿದ್ದು, 10 ತಿಂಗಳ ಗೌರವ ಸಂಭಾವನೆ ನೀಡುತ್ತಿದ್ದೇವೆ. ಪ್ರಾಥಮಿಕ, ಪ್ರೌಢ ಮತ್ತು ಪಿಯು ಸೇರಿ 38,000 ಅತಿಥಿ ಶಿಕ್ಷಕರನ್ನು ನೇಮಿಸಿದ್ದು, ಶಿಕ್ಷಣ ಇಲಾಖೆ ಇತಿಹಾಸದಲ್ಲೇ ಇಷ್ಟೊಂದು ದೊಡ್ಡ ಪ್ರಮಾಣದ ನೇಮಕಗಳಾಗಿಲ್ಲ. ಅಲ್ಲದೆ, ಪ್ರಾಥಮಿಕ ಶಾಲಾ ಶಿಕ್ಷಕರಿಗೆ 2,500 ರೂ. ಹಾಗೂ ಪಿಯು ಶಿಕ್ಷಕರ ಮಾಸಿಕ ಗೌರವ ಸಂಭಾವನೆ ಮೂರು ಸಾವಿರ ರೂ. ಹೆಚ್ಚಳ ಮಾಡಿದ್ದೇವೆ ಎಂದರು.
ಶಾಲಾ ಮಕ್ಕಳಿಗೆ ಬೈಸಿಕಲ್‌ಗಿಂತ ಗುಣಮಟ್ಟದ ಶಿಕ್ಷಣ ಮುಖ್ಯವಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಬೈಸಿಕಲ್ ವಿತರಣೆಗೆ ನಿರ್ಧಾರವಾಗಿಲ್ಲ ಎಂದು ಹೇಳಿದರು.