ಶ್ರೀರಂಗಪಟ್ಟಣ: ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗದೆ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ದಿನೇದಿನೆ ಕುಸಿಯುತ್ತಿದ್ದು ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಸಾಧ್ಯತೆ ಇದೆ. ಬರದ ನಡುವೆಯೇ ಕೆಆರ್‌ಎಸ್ ಜಲಾಶಯದ ನೀರು ಬಿಸಿಲಿನ ಝಳಕ್ಕೆ ಕಡಿಮೆಯಾಗುತ್ತಿದ್ದು ಪ್ರಸ್ತುತ ನೀರಿನ ಮಟ್ಟ 79 ಅಡಿಗೆ ಕುಸಿದಿದ್ದು, ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಗಳಿವೆ.
ಮುಂಗಾರು ಆರಂಭವಾದರೂ ಮೈಸೂರು ಭಾಗದ ಜೀವನಾಡಿ ಕೆಆರ್‌ಎಸ್‌ಗೆ ಇನ್ನು ಜೀವಕಳೆ ಬಂದಿಲ್ಲ. ಕೊಡಗು ಜಿಲ್ಲೆಯಲ್ಲಿ ಈಗಾಗಲೇ ಮಳೆ ಆರಂಭವಾಗಬೇಕಿತ್ತಾದರೂ, ಜಲಾಶಯದ ಒಳ ಹರಿವು ಹೆಚ್ಚಿಸುವ ಮಟ್ಟದ ಮಳೆ ಬೀಳುವ ಯಾವುದೇ ಲಕ್ಷಣಗಳು ಕಂಡು ಬರುತ್ತಿಲ್ಲ. ಆದ್ದರಿಂದ ಕೆಆರ್‌ಎಸ್ ಒಡಲು ಬರಿದಾಗುತ್ತಿದೆ.
ಹೀಗೆ ಮಳೆ ಹಿನ್ನಡೆಯಾದರೆ ನೀರಿನ ಕೊರತೆ ಮತ್ತಷ್ಟು ಎದುರಾಗುವ ಆತಂಕ ಹೆಚ್ಚಾಗಬಹುದು. ಜಲಾಶಯದಲ್ಲಿ ಈಗಿರುವ ಸದ್ಯ ಜಲಾಶಯದಲ್ಲಿ ಈಗಿರುವ ನೀರು ಕುಡಿಯಲಿಕ್ಕೆ ಮಾತ್ರ ಸಾಕಾಗಬಹುದು. ಮುಂದಿನ ದಿನಗಳಲ್ಲಿ ಕಾವೇರಿ ಕೊಳ್ಳದಲ್ಲಿ ಜನರಿಗೆ ಕುಡಿಯುವ ನೀರಿಗೂ ಬರ ಎದುರಾಗಬಹುದು ಎನ್ನತ್ತಾರೆ ನೀರಾವರಿ ತಜ್ಞರು.
ಕ್ಷೀಣಿಸಿದ ಅಂತರ್ಜಲ ಮಟ್ಟ: ಮುಂಗಾರು ಮಳೆಯ ವಾತಾವರಣ ಕಡಿಮೆಯಾಗಿ ಮಾರ್ಚ್ ಮತ್ತು ಏಪ್ರಿಲ್ನಲ್ಲಿ ಮಳೆಯಾಗದೆ ಪ್ರಸ್ತುತ ಮೇ ಎರಡನೇ ವಾರದಲ್ಲಿ ಸಣ್ಣ ಮಳೆ ಬಂದಿತ್ತು. ಆದರೆ ಬಿಸಿಲಿನ ತಾಪಕ್ಕೆ ಅದು ಪ್ರಯೋಜನವಾಗದೆ ಕುಡಿಯುವ ನೀರಿಗೆ ಬರ ಬರುವುದು ಖಚಿತವಾದಂತಿದೆ. ಇನ್ನು ಜಲಾಶಯದಿಂದ ಯಾವುದೇ ನಾಲೆಗಳಿಗೆ ನೀರು ಹರಿಸುವುದು ನಿಲ್ಲಿಸಿದ ಬಳಿಕ ಕೊಳೆವೆ ಬಾವಿಗಳಲ್ಲೂ ನೀರು ಬತ್ತಿ ಹೋಗುತ್ತಿದೆ. ಇದಕ್ಕೆ ಅಂತರ್ಜಲ ಮಟ್ಟ ಕ್ಷೀಣಿಸಿರುವುದೇ ಕಾರಣ. ಮಳೆ ಬರದಿದ್ದರೆ ಮಂಡ್ಯ, ಮೈಸೂರು, ಬೆಂಗಳೂರು, ರಾಮನಗರ ಜಿಲ್ಲೆಗಳಿಗೆ ಕುಡಿವ ನೀರಿಗೂ ಹಾಹಾಕಾರ ಹೆಚ್ಚುವ ಸಾಧ್ಯತೆ ಇದೆ.
● ಗಂಜಾಂ ಮಂಜು