ಕಲಬುರಗಿ: ಜಿಲ್ಲಾ ಲೀಡ್ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ತಯಾರಿಸಿದ ಜಿಲ್ಲೆಯ 2019-20ನೇ ಸಾಲಿನ 7,797 ಕೋಟಿ ರೂ.ಗಳ ವಾರ್ಷಿಕ ಸಾಲ ಯೋಜನೆಯನ್ನು ಗುರುವಾರ ಬಿಡುಗಡೆಗೊಳಿಸಲಾಯಿತು. ಪ್ರಸಕ್ತ ಸಾಲ ಯೋಜನೆಯಲ್ಲಿ 6,430 ಕೋಟಿ ರೂ. ಆದ್ಯತಾ ವಲಯ ಮತ್ತು 1,367 ಕೋಟಿ ರೂ.ಗಳನ್ನು ಆದ್ಯತಾ ರಹಿತ ವಲಯಕ್ಕೆ ಕಾಯ್ದಿರಿಸಲಾಗಿದೆ.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ| ಪಿ.ರಾಜಾ ಸಾಲ ಯೋಜನೆ ಬಿಡುಗಡೆಗೊಳಿಸಿ, ಕಳೆದ 2018-19ನೇ ಸಾಲಿನಲ್ಲಿ 6,858 ಕೋಟಿ ರೂ.ಗಳ ಸಾಲ ವಿತರಣಾ ಯೋಜನೆಯಲ್ಲಿ ಕೇವಲ ಶೇ.34ರಷ್ಟು ಸಾಧನೆ ತೋರಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ವರ್ಷ ಕಡಿಮೆ ಮತ್ತು ಅತಿ ಕಡಿಮೆ ಪ್ರಗತಿ ತೋರಿದ ಬ್ಯಾಂಕ್‌ಗಳು ಹೆಚ್ಚಿನ ಗಮನ ಹರಿಸಿ ಪ್ರಸಕ್ತ ವರ್ಷ ಹೆಚ್ಚಿನ ಸಾಲ ವಿತರಿಸಲು ಕ್ರಮಕೈಗೊಳ್ಳಬೇಕೆಂದು ಹೇಳಿದರು. ಜಿಲ್ಲೆಯಲ್ಲಿ ಆರು ತಾಲೂಕುಗಳನ್ನು ಮುಂಗಾರು ಬರ ಪೀಡಿತ ಹಾಗೂ ಏಳು ತಾಲೂಕುಗಳನ್ನು ಹಿಂಗಾರು ಬರ ಪೀಡಿತ ಎಂದು ಘೋಷಿಸಲಾಗಿದೆ.
ಸಾಲ ಮನ್ನಾ ಯೋಜನೆಗೆ ಸೇಡಂ ತಾಲೂಕನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಇದು ಸರಿಯಾಗಿ ಅನುಷ್ಠಾನ ಆಗಿದೆ. ಆದರೆ, ಸಾಲ ವಿತರಣೆ ಗುರಿಯಲ್ಲಿ ಕಡಿಮೆ ಸಾಧನೆ ತೋರಿದ್ದು ಬೇಸರದ ಸಂಗತಿ. ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶ ಮತ್ತು ಬ್ಯಾಂಕ್‌ಗಳ ಬೇಡಿಕೆ ಇರುವ ಪ್ರದೇಶದಲ್ಲಿ ಹೊಸ ಬ್ಯಾಂಕ್‌ಗಳನ್ನು ಸ್ಥಾಪಿಸಬೇಕೆಂದು ಸಲಹೆ ನೀಡಿದರು.
ಭಾರತೀಯ ಸ್ಟೇಟ್ ಬ್ಯಾಂಕ್‌ನ ಅಸ್ಟಿಸೆಂಟ್ ಜನರಲ್ ಮ್ಯಾನೇಜರ್ (ಎಜಿಎಂ) ಪ್ರಕಾಶ ಮಾತನಾಡಿ, ಬರಗಾಲ ಮತ್ತು ದಾಲ್ ಮಿಲ್‌ಗಳು ಸಮಸ್ಯೆಯ ಸುಳಿಯಲ್ಲಿ ಸಿಲುಕಿರುವುದು ಸಾಲ ವಿತರಣೆಯಲ್ಲಿ ಕಳಪೆ ಸಾಧನೆಗೆ ಕಾರಣವಾಗಿರಬಹುದು. ಆದರೆ, ಪ್ರಸಕ್ತ ವರ್ಷ ಬ್ಯಾಂಕ್ ಅಧಿಕಾರಿಗಳು ಇದನ್ನೇ ನೆಪವಾಗಿ ಇಟ್ಟುಕೊಳ್ಳದೆ. ಉತ್ತಮ ಸಾಧನೆ ತೋರಲು ಶ್ರಮ ವಹಿಸಬೇಕೆಂದರು.
50 ಸಾವಿರ ರೂ. ಮೇಲ್ಪಟ್ಟ ಸಾಲ ಮನ್ನಾ ಮರು ಪಾವತಿಸಿದ ರೈತರನ್ನು ಗುರುತಿಸಿ ಅವರನ್ನು ಸಂಪರ್ಕಿಸಬೇಕು. ಇಂತಹ ರೈತರ ಖಾತೆಗಳನ್ನು ನವೀಕರಿಸಿ ಮತ್ತೆ ಹೆಚ್ಚಿನ ಸಾಲ ನೀಡಬೇಕು. ದಾಲ್ ಮಿಲ್‌ಗಳ ಪುನಶ್ಚೇತನಕ್ಕೂ ಬ್ಯಾಂಕ್‌ಗಳು ಸಹಕಾರ ನೀಡಲು ಮುಂದಾಗಬೇಕೆಂದು ಹೇಳಿದರು.
ಬೆಂಗಳೂರಿನ ಆರ್‌ಬಿಐ ಎಜಿಎಂ ಶ್ರೀನಿವಾಸ, ಕೃಷ್ಣ ಪ್ರಗತಿ ಗ್ರಾಮೀಣ ಬ್ಯಾಂಕ್ ಎಜಿಎಂ ಎಸ್.ಕೆ ಮಹುಲಿ, ಸಿಂಡಿಕೇಟ್ ಬ್ಯಾಂಕ್ ಎಜಿಎಂ ಮಂಜುನಾಥ, ಲೀಡ್ ಬ್ಯಾಂಕ್ ಮುಖ್ಯ ಮ್ಯಾನೇಜರ್ ಸಿ.ಎಚ್. ಹವಲ್ದಾರ್ ಹಾಗೂ ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳು ಹಾಜರಿದ್ದರು.