ದಾವಣಗೆರೆ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯ 140 ಸ್ಥಳಗಳಲ್ಲಿ ಸುಮಾರು ಏಳರಿಂದ ಏಳೂವರೆ ಸಾವಿರ ಜನರು ಕೆಲಸ ಮಾಡುತ್ತಿದ್ದಾರೆಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್ ಅಶ್ವತಿ ತಿಳಿಸಿದ್ದಾರೆ.
ದಾವಣಗೆರೆ ಮಳಲ್ಕೆರೆ ಗ್ರಾಮದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮತ್ತು ಮಾಹಿತಿ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 2 ಲಕ್ಷ ಜಾಬ್ ಕಾರ್ಡ್ ವಿತರಿಸಲಾಗಿದ್ದು, 1.5 ಲಕ್ಷ ಜನರು ಇದನ್ನು ಬಳಕೆ ಮಾಡುತ್ತಿದ್ದಾರೆ.
ಪ್ರಸ್ತುತ ದಿನಕ್ಕೆ 224 ರೂ. ಕೂಲಿ ನೀಡಲಾಗುತ್ತಿದೆ. ಏಪ್ರಿಲ್ ಮಾಹೆಯಿಂದ 236 ರೂ.ಗೆ ಹೆಚ್ಚಿಸಲಾಗುವುದು ಎಂದರು. ಬೇಡಿಕೆಗೆ ಅನುಸಾರ ಜಾಬ್ ಕಾರ್ಡ್ ನೀಡಲಾಗುತ್ತಿದೆ. ಮುಂದೆ ಯೋಜನೆಯಡಿ ಇಟ್ಟಿಗೆ ಕೆಲಸ ಆರಂಭಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ 52 ಕೋಟಿ ರೂ. ನರೇಗಾ ಅಡಿ ಖರ್ಚು ಮಾಡಲಾಗಿದೆ.
ಮಳಲ್ಕೆರೆಯಲ್ಲಿ ಸೋಮವಾರ 337 ಜನರು ಕೆರೆ ಹೂಳೆತ್ತುವ ಕೆಲಸ ನಿರ್ವಹಿಸಿದ್ದಾರೆ. ದಾವಣಗೆರೆ ತಾಲ್ಲೂಕಿನ ಕೈದಾಳೆಯ ಗೋಕಟ್ಟೆ, ಮಾಯಕೊಂಡ, ನರಗನಹಳ್ಳಿ ಮತ್ತು ಯರಗನಾಯಕ್ತನಹಳ್ಳಿಯ ಕೆರೆ ಹೂಳೆತ್ತುವ ಕೆಲಸ ವೀಕ್ಷಿಸಿ, ಇಲ್ಲಿಗೆ ಭೇಟಿ ನೀಡಿರುವುದಾಗಿ ತಿಳಿಸಿದರು. ತಾ ಪಂ ಸದಸ್ಯ ಮುರುಗೇಂದ್ರಪ್ಪ ಮಾತನಾಡಿ, ಮಳಲಕೆರೆ ಕೆರೆ 206 ಎಕರೆ ಪ್ರದೇಶದಲ್ಲಿದ್ದು, ಇದರಲ್ಲಿ 156 ಎಕರೆಯಲ್ಲಿ ಹೂಳೆತ್ತುವ ಕೆಲಸ ನಡೆಯುತ್ತಿದೆ.
ಆರಂಭದಲ್ಲಿ 48 ಜನ ಸ್ವ ಇಚ್ಛೆಯಿಂದ ಕೆಲಸ ಆರಂಭಿಸಿದ್ದಾರೆ ಎಂದರು. ದಾವಣಗೆರೆ ತಾಪಂ ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಆನಂದ್, ಕಾರ್ಯ ನಿರ್ವಾಹಕ ಅಧಿಕಾರಿ ಎಲ್.ಎಸ್. ಪ್ರಭುದೇವ್, ಜಿಪಂ ಸದಸ್ಯ ಓಬಳಪ್ಪ, ಪಿಡಿಒ ಎನ್.ಬಿ. ನಿಂಗಾಚಾರ್, ತಾಪಂ ಸದಸ್ಯೆ ಸಾಕಮ್ಮ, ಇಂಜಿನಿಯರ್ ಪವನ್ ಹಾಜರಿದ್ದರು.