ಬೆಂಗಳೂರು: ಮಸಾಲ ದೋಸೆಯಿಂದಾಗಿ ಪ್ರಸಿದ್ಧಿ ಪಡೆದಿರುವ ಬಸವನಗುಡಿ ಗಾಂಧಿಬಜಾರ್‌ನ ವಿದ್ಯಾರ್ಥಿಭವನ ಹೋಟೆಲ್ ಅ.26ರಂದು ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಉಡುಪಿಯ ಸಾಲಿಗ್ರಾಮ ಮೂಲದ ವೆಂಕಟರಮಣ ಉರಾಳ ಮತ್ತು ಪರಮೇಶ್ವರ ಉರಾಳ ಸೇರಿಕೊಂಡು 1944ರಲ್ಲಿ ವಿದ್ಯಾರ್ಥಿ ಭವನ ಆರಂಭಿಸಿದ್ದರು.
ನ್ಯಾಷನಲ್ ಕಾಲೇಜು ಸಹಿತವಾಗಿ ಸುತ್ತಲಿನ ಪ್ರದೇಶದಲ್ಲಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಹೋಟೆಲ್‌ಗೆ ವಿದ್ಯಾರ್ಥಿ ಭವನ ಎಂದು ಹೆಸರಿಡಲಾಗಿತ್ತು. 1970ರಲ್ಲಿ ಉಡುಪಿ ಶಂಕರನಾರಾಯಣ ಮೂಲದ ರಾಮಕೃಷ್ಣ ಅಡಿಗರು ವಿದ್ಯಾರ್ಥಿ ಭವನ ಖರೀದಿಸಿದರು. ಆರಂಭದ ದಿನಗಳಲ್ಲಿ ಇದ್ದ ವ್ಯವಸ್ಥೆಯನ್ನೇ ಇಂದಿಗೂ ಮುಂದುವರಿಸಿಕೊಂಡು ಬಂದಿದ್ದೇವೆ ಎಂದು ಹೋಟೆಲ್ ಮಾಲೀಕರಾದ ರಾಮಕೃಷ್ಣ ಅಡಿಗರ ಪುತ್ರ ಎಸ್.ಅರುಣ್ ಕುಮಾರ್ ಅಡಿಗ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ವಿದ್ಯಾರ್ಥಿ ಭವನ ಮತ್ತು ಗ್ರಾಹಕರ ನಡುವೆ ಅನ್ಯೋನ್ಯ ಸಂಬಂಧವಿದೆ. ಬೆಂಗಳೂರು ನಗರ ಹಾಗೂ ಹೊರ ವಲಯ, ನೆರೆ ರಾಜ್ಯಗಳಿಂದಲೂ ಇಲ್ಲಿಗೆ ಬರುತ್ತಾರೆ. ಹಿರಿಯ ಸಾಹಿತಿಗಳಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್, ಡಿವಿಜಿ, ಗೋಪಾಲಕೃಷ್ಣ ಅಡಿಗ, ನಿಸಾರ್ ಅಹ ಮ್ಮದ್, ಭಾರತ ರತ್ನ ಸಿ.ಎನ್.ಆರ್.ರಾವ್, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ, ಎಸ್. ಎಂ.ಎಂ.ಕೃಷ್ಣ, ಬಿ.ಎಸ್.ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತ್ ಕುಮಾರ್ ಸೇರಿ ಅನೇಕ ಗಣ್ಯರು ಇಲ್ಲಿ ಉಪಾಹಾರ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.
ಹೋಟೆಲ್ 75 ವರ್ಷ ಪೂರೈಸಿರುವ ಸವಿ ನೆನಪಿನಲ್ಲಿ ಅ.26ರ ಸಂಜೆ 5.30ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಅಮೃತ ವರ್ಷ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಎಂ.ಎನ್. ವೆಂಕಟಾಚಲಯ್ಯ, ಭಾರತ ರತ್ನ ಪ್ರೊ.ಸಿ.ಎನ್.ಆರ್.ರಾವ್, ಕವಿ ಪ್ರೊ. ಕೆ.ಎಸ್.ನಿಸಾರ್ ಅಹಮ್ಮದ್, ಉದ್ಯಮಿ ಡಾ.ಪಿ.ಸದಾನಂದ ಮಯ್ಯ, ಅಂಚೆ ಇಲಾಖೆಯ ಕರ್ನಾಟಕ ವೃತ್ತದ ಮಹಾ ಪ್ರಬಂಧಕ ಡಾ.ಚಾರ್ಲ್ಸ್‌ಲೋಬೋ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ. ಇದೇ ವೇಳೆ ವಿದ್ಯಾರ್ಥಿ ಭವನದ ವಿಶೇಷ ಅಂಚೆ ಲಕೋಟೆ ಹಾಗೂ ಕಾಫಿ ಟೇಬಲ್ ಪುಸ್ತಕ ಲೋಕಾರ್ಪಣೆ ನಡೆಯಲಿದೆ. ವಿದ್ಯಾರ್ಥಿ ಭವನ ಬಳಗದ ಹಿರಿಯರಿಗೆ ಗೌರವ ಸನ್ಮಾನ ಆಯೋಜಿಸಿದ್ದೇವೆ ಎಂದರು.