Advertisement

ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ಶೇ.75 ಪೂರ್ಣ: ಭೈರತಿ

09:59 AM Apr 19, 2022 | Team Udayavani |

ಹುಬ್ಬಳ್ಳಿ: ರಾಜ್ಯದ ಏಳು ಮಹಾನಗರಗಳಲ್ಲಿ ನಡೆಯುತ್ತಿರುವ ಸ್ಮಾರ್ಟ್‌ಸಿಟಿ ಕಾಮಗಾರಿಗಳು ಶೇ.75 ಪೂರ್ಣಗೊಂಡಿದ್ದು, ಆದಷ್ಟು ಬೇಗ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಹೇಳಿದರು.

Advertisement

ಸೋಮವಾರ ಬೆಂಗೇರಿಯಲ್ಲಿ ಸ್ಮಾರ್ಟ್‌ಸಿಟಿ ಅನುದಾನದಲ್ಲಿ 6.41 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಮಾರುಕಟ್ಟೆ ಹಾಗೂ 25 ಲಕ್ಷ ರೂ. ವೆಚ್ಚದ ಸಂಚಾರಿ ಗ್ರಂಥಾಲಯ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿಶೇಷ ಅನುದಾನವನ್ನು ಪಾಲಿಕೆಗಳಿಗೆ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದೇನೆ. ಅವರಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ. ರಾಜ್ಯ ಸರಕಾರ ಅಭಿವೃದ್ಧಿಯನ್ನು ಪ್ರಮುಖವಾಗಿರಿಸಿ ಕೆಲಸ ಮಾಡುತ್ತಿದೆ. ಜನರು ಕೇಳುವ ಮೂಲಸೌಲಭ್ಯ ಕಲ್ಪಿಸುವ ಕಾರ್ಯದಲ್ಲಿ ತೊಡಗಿದೆ. ಮತದಾರರ ಋಣ ತೀರಿಸುವ ಕಾರ್ಯಕ್ಕೆ ಆದ್ಯತೆ ನೀಡಿದ್ದೇವೆ. ಬೆಂಗಳೂರು ಹೊರತುಪಡಿಸಿ ಹುಬ್ಬಳ್ಳಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಸ್ವತ್ಛತೆ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕು. ಎಲ್‌ಇಡಿ ಲೈಟ್ಸ್‌ ಗುತ್ತಿಗೆದಾರ ಸರಿಯಾಗಿ ಕೆಲಸ ಮಾಡದವರನ್ನು ತಿರಸ್ಕರಿಸಿ ಬೇರೆಯವರಿಗೆ ನೀಡಲು ಸೂಚಿಸಿದ್ದೇನೆ ಎಂದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, 100 ನಗರಗಳು ಸ್ಮಾರ್ಟ್‌ ಸಿಟಿ ಯೋಜನೆಗೆ ಆಯ್ಕೆಯಾಗಿವೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ. ಪಿಪಿಪಿ ಮಾದರಿಯಲ್ಲಿ ಈ ಯೋಜನೆ ಸಾಧ್ಯವಾಗಲಿಲ್ಲ. ಹೀಗಾಗಿ ಇರುವ ಅನುದಾನದಲ್ಲಿ ಯೋಜನೆ ನಡೆಯುತ್ತಿದೆ. 98 ಸಾವಿರ ಕೋಟಿಯಲ್ಲಿ 52 ಸಾವಿರ ಕೋಟಿ ರೂ. ಸದ್ಬಳಕೆಯಾಗಿದೆ. 2051ರ ಜನಸಂಖ್ಯೆಗೆ ಅನುಗುಣವಾಗಿ ಈ ಯೋಜನೆ ಸಾಕಾರಗೊಳ್ಳುತ್ತಿದೆ. ವಿಮಾನ, ರೈಲು ಸಾರಿಗೆ ಸದೃಢಗೊಳಿಸಲಾಗುತ್ತಿದೆ. ಒಟ್ಟಾರೆಯಾಗಿ ಮೂಲಸೌಲಭ್ಯ ವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಮಾತನಾಡಿ, ನಿತ್ಯವೂ ಇಲ್ಲಿ ಮಾರುಕಟ್ಟೆಯಾದರೆ ಉತ್ತಮ. ಆದಷ್ಟು ಬೇಗ ಗುತ್ತಿಗೆ ಕರೆದು ನಿರ್ವಹಣೆಗೆ ನೀಡಬೇಕು. ಸ್ಮಾರ್ಟ್‌ ಸಿಟಿ ಯೋಜನೆ ಅ ಧಿಕಾರಿಗಳು ಉತ್ತಮವಾಗಿ ನಿರ್ವಹಿಸಿದ್ದಾರೆ. ಮಹಾನಗರ ಅಭಿವೃದ್ಧಿ ದೃಷ್ಟಿಯಿಂದ ನಗರಾಭಿವೃದ್ಧಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ಮಾಡಲಾಗಿದೆ ಎಂದರು.

Advertisement

ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಕೀಲ್‌ ಅಹ್ಮದ್‌ ಮಾತನಾಡಿ, ಸುಮಾರು ಮೂರು ಎಕರೆ ಜಾಗವನ್ನು ಶನಿವಾರ ಮಾತ್ರ ಬಳಕೆ ಮಾಡಲಾಗುತ್ತಿತ್ತು. ಈ ಭಾಗದಲ್ಲಿ ಇಷ್ಟೊಂದು ದೊಡ್ಡ ಖಾಲಿ ಜಾಗವಿದ್ದರೂ ಸದ್ಬಳಕೆಯಾಗುತ್ತಿರಲಿಲ್ಲ. ಇದೀಗ ಸಿದ್ಧಪಡಿಸಿರುವ ಮಾರಕಟ್ಟೆ ವಿವಿಧೋದ್ದೇಶಗಳಿಗೆ ಬಳಕೆ ಮಾಡಬಹುದಾಗಿದ್ದು, ಮಾದರಿ ಸ್ಥಳವಾಗಲಿದೆ ಎಂದರು.

ಶಾಸಕ ಅರವಿಂದ ಬೆಲ್ಲದ ಮಾತನಾಡಿದರು. ಎಸ್‌.ಐ.ಚಿಕ್ಕನಗೌಡರ, ಜಿಲ್ಲಾ ಧಿಕಾರಿ ನಿತೇಶ ಪಾಟೀಲ, ಪಾಲಿಕೆ ಆಯುಕ್ತ ಡಾ| ಬಿ.ಗೋಪಾಲಕೃಷ್ಣ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಪಾಲಿಕೆ ಸದಸ್ಯರಾದ ವೀರಣ್ಣ ಸವಡಿ, ಸಂತೋಷ ಚವ್ಹಾಣ, ಬೀರಪ್ಪ ಖಂಡೇಕಾರ, ಮಹದೇವಪ್ಪ ನರಗುಂದ ಇನ್ನಿತರರಿದ್ದರು.

ಬೆಂಗೇರಿ ಮಾರುಕಟ್ಟೆ ಸದ್ಬಳಕೆ ಮಾಡಿಕೊಳ್ಳಬೇಕು. ಸ್ವತ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಸಾಂಸ್ಕೃತಿಕ ಕೇಂದ್ರವಾಗಿ ನಿರ್ಮಾಣ ಮಾಡಬೇಕು. ಇಷ್ಟರಲ್ಲೇ ಇಂದಿರಾಗಾಂಧಿ ಉದ್ಯಾನ, ತೋಳನಕೆರೆ, ಉಣಕಲ್ಲ ಗ್ರೀನ್‌ ಕಾರಿಡಾರ್‌ ಯೋಜನೆ ಲೋಕಾರ್ಪಣೆಗೊಳ್ಳಲಿವೆ. ಸಿಆರ್‌ಎಫ್‌ ನಿ ಧಿಯಡಿ ನಿರ್ಮಾಣವಾಗಿರುವ ರಸ್ತೆಗಳನ್ನು ಅಗೆಯುವ ಕೆಲಸ ಸರಿಯಲ್ಲ. ಪಾಲಿಕೆ ಕಟ್ಟುನಿಟ್ಟಾಗಿ ನಿಗಾ ವಹಿಸಬೇಕು. ವಿಳಂಬವಾಗುತ್ತಿರುವ ಕಾಮಗಾರಿಗಳಿಗೆ ವೇಗ ನೀಡಬೇಕು. -ಪ್ರಹ್ಲಾದ ಜೋಶಿ, ಕೇಂದ್ರ ಸಚಿವ

ನಿರಂತರ ಕುಡಿವ ನೀರಿನ ಯೋಜನೆಯನ್ನು ಒಂದು ವಾರದಲ್ಲಿ ಹಸ್ತಾಂತರ ಮಾಡಿಕೊಳ್ಳುವಂತೆ ಎಲ್‌ ಆ್ಯಂಡ್‌ ಟಿ ಕಂಪನಿಗೆ ಸೂಚನೆ ನೀಡಿದ್ದು, ಎಲ್ಲಾ ವಾರ್ಡ್‌ಗಳಿಗೂ ನಿರಂತರ ನೀರು ದೊರೆಯಲಿದೆ. ಸ್ಮಾರ್ಟ್‌ ಸಿಟಿ ಹಾಗೂ ಸಿಆರ್‌ಎಫ್‌ ಯೋಜನೆ ಪೂರ್ಣಗೊಂಡರೆ ಹು-ಧಾ ಮಹಾನಗರವು ಬೆಂಗಳೂರನ್ನು ಮೀರಿಸಲಿದೆ. ಹೊಸ ಲೇಔಟ್‌ಗಳು ಅಮೃತ್‌ ಯೋಜನೆ-2 ವ್ಯಾಪ್ತಿಗೆ ಒಳಪಡಬೇಕು. -ಜಗದೀಶ ಶೆಟ್ಟರ,ಮಾಜಿ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next