ಬೆಂಗಳೂರು: ಇಲ್ಲಿ ನಡೆದ ಪ್ರವಾಸಿ ಆಸ್ಟೇಲಿಯಾ ವಿರುದ್ಧದ 2 ನೆ ಟೆಸ್ಟ್ ಪಂದ್ಯದ2 ನೇ ಇನ್ನಿಂಗ್ಸ್‌ನಲ್ಲಿ ಭಾರತದ ಆಟಗಾರರು ತಿರುಗಿ ಬಿದ್ದು ರೋಚಕ ಗೆಲುವು ಸಾಧಿಸಿ ಮೊದಲ ಟೆಸ್ಟ್ ಸೋಲಿನ ಸೇಡು ತೀರಿಸಿಕೊಂಡಿದ್ದಾರೆ. ಈ ಗೆಲುವಿನಿಂದಾಗಿ 4 ಪಂದ್ಯಗಳ ಸರಣಿ 1-1 ಅಂತರದಿಂದ ಸಮಬಲಗೊಂಡಿದೆ.
4 ದಿನದಾಟದಲ್ಲಿ 2 ನೇ ಇನ್ನಿಂಗ್ಸ್‌ನಲ್ಲಿ ಆಸೀಸ್ ಗೆಲುವಿಗೆ 188 ರನ್ ಗುರಿಯನ್ನು ನೀಡಲಾಗಿತ್ತು. ಪಂದ್ಯವನ್ನೂ ಹೇಗೂ ಗೆಲ್ಲಬಹುದು ಎಂಬ ಭರವಸೆಯಲ್ಲಿ 188 ರನ್‌ಗಳ ಅಲ್ಪ ಗುರಿ ಬೆನ್ನಟ್ಟಿದ ಆಸೀಸ್ ಭಾರತದ ಬೌಲರ್‌ಗಳ ಬಲೆಯಲ್ಲಿ ಸಿಲುಕಿ ಕೇವಲ 112 ರನ್‌ಗಳಿಗೆ ಆಲೌಟಾಗುವ ಮೂಲಕ 75 ರನ್‌ಗಳ ಸೋಲನ್ನನುಭವಿಸಿ ಹತಾಶವಾಗಬೇಕಾಯಿತು.
ಭಾರತದ ಪರ ಬಿಗು ದಾಳಿ ನಡೆಸಿದ ಆಸೀಸ್ ಆಟಗಾರರನ್ನು ಕಾಡಿದ ಆರ್ ಅಶ್ವಿನ್ 6 ವಿಕೆಟ್ ಕಿತ್ತು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. (ಮೊದಲ ಇನ್ನಿಂಗ್ಸ್‌ನಲ್ಲಿ 2 ವಿಕೆಟ್ ). ಇಶಾಂತ್ ಶರ್ಮಾ 1 ವಿಕೆಟ್ (ಮೊದಲ ಇನ್ನಿಂಗ್ಸ್‌ನಲ್ಲೂ 4) ಕಬಳಿಸಿದರೆ. ಉಮೇಶ್ ಯಾದವ್ 2 ವಿಕೆಟ್,ಜಡೇಜಾ 1 ವಿಕೆಟ್ ಪಡೆದು ಗಮನ ಸೆಳೆದರು.
ಆಸೀಸ್ ಪರ ಆರಂಭಿಕ ವಾರ್ನರ್ 17 , ನಾಯಕ ಸ್ಮಿತ್ ಗರಿಷ್ಠ 28 , ಹ್ಯಾಂಡ್ಸ್‌ಕೊಂಬ್ 24 ಮತ್ತು ಮಾರ್ಶ್ 13 ರನ್ ಹೊರತುಪಡಿಸಿದರೆ ಉಳಿದ ಆಟಗಾರರಿಗೆ ಒಂದಂಕಿ ದಾಟಲು ಸಾಧ್ಯವಾಗಲಿಲ್ಲ.
213 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಭಾರತ 4 ನೇ ದಿನದಾಟದಲ್ಲಿ 274 ರನ್ ಗಳಿಗೆ ಆಲೌಟಾಯಿತು. 79 ರನ್ ಗಳಿಸಿದ್ದ ಪೂಜಾರ 92 ರನ್ ಗಳಿಸಿ ಔಟಾಗುವ ಮೂಲಕ ಶತಕ ವಂಚಿತರಾದರು. 40 ರನ್ ಗಳಿಸಿದ್ದ ರೆಹಾನೆ 52 ರನ್‌ಗಳಿಗೆ ಔಟಾದರು. ಪೂಜಾರ ಮತ್ತು ರೆಹಾನೆ ಜೊತೆಯಾಟ ಗೆಲುವಿನಲ್ಲಿ ದೊಡ್ಡ ಕೊಡುಗೆ ಎನಿಸಿದೆ. ವೃದ್ಧಿಮಾನ್ ಸಾಹಾ 20 ರನ್ ಕೊಡುಗೆ ಸಲ್ಲಿಸಿದರು.
ಆಸೀಸ್ ಪರ ಹ್ಯಾಜಲ್‌ವುಡ್ 6 ವಿಕೆಟ್ ಕಿತ್ತು ಗಮನ ಸೆಳೆದರೆ, ಸ್ಟಾರ್ಕ್ ಮತ್ತು ಕಿಫೆ ತಲಾ 2 ವಿಕೆಟ್ ಪಡೆದರು.
ಗೆಲುವಿನಲ್ಲಿ ಮಹತ್ವದ ಕೊಡುಗೆ ಸಲ್ಲಿದ ಕನ್ನಡಿಗ ಕೆ.ಎಲ್ .ರಾಹುಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಮೊದಲ ಇನ್ನಿಂಗ್ಸ್‌ನಲ್ಲಿ 90 ರನ್ ಮತ್ತು 2 ನೇ ಇನ್ನಿಂಗ್ಸ್‌ನಲ್ಲಿ 51 ರನ್ ಗಳಿಸಿದ್ದರು.
ಸಂಕ್ಷಿಪ್ತ ಸ್ಕೋರ್
ಭಾರತ ಮೊದಲ ಇನ್ನಿಂಗ್ಸ್ 189 ಆಲೌಟ್
2 ನೇ ಇನ್ನಿಂಗ್ಸ್ 274 ಆಲೌಟ್
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 276 ಆಲೌಟ್
ದ್ವಿತೀಯ ಇನ್ನಿಂಗ್ಸ್ 112ಕ್ಕೆ ಆಲೌಟ್