Advertisement

ಕಟೀಲು: 75 ಜೋಡಿ ವಿವಾಹ, 25 ಸಾವಿರಕ್ಕೂ ಅಧಿಕ ಭಕ್ತರ ಆಗಮನ

02:22 PM Apr 29, 2019 | keerthan |

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ರವಿವಾರ 65 ಜೋಡಿ ಹಾಗೂ ದೇವ ಸ್ಥಾನದ ಪರಿಸರದಲ್ಲಿರುವ ಸಭಾ ವೇದಿಕೆ ಯಲ್ಲಿ 10 ಜೋಡಿಗಳ ಸಹಿತ ಒಟ್ಟು 75 ಜೋಡಿಗಳ ವಿವಾಹ ನಡೆಯಿತು.

Advertisement

ಬೆಳಗ್ಗೆ 6.45ರಿಂದ ಆರಂಭವಾದ ವಿವಾಹ ಮುಹೂರ್ತ 1 ಗಂಟೆಯ ತನಕ ನಡೆಯಿತು. 8,000 ಜನರು ರವಿವಾರ ಅನ್ನಪ್ರಸಾದ ಸ್ವೀಕರಿಸಿದರು. 500 ಮಂದಿ ಬೆಳಗ್ಗಿನ ಗಂಜಿ  ಊಟ ಪ್ರಸಾದ ಸ್ವೀಕರಿಸಿದರು. ದೇವಸ್ಥಾನದಲ್ಲಿ ದಿನದ ಮೂರು ಹೊತ್ತು ಅನ್ನದಾನ ಇದೆ.

ಮದುವೆ ವ್ಯವಸ್ಥೆಗೆ ನಾಲ್ವರು ಪುರೋಹಿತರು, ಎರಡು ಕೌಂಟರ್‌ಗಳು ಹಾಗೂ ನೋಂದಣಿಗೆ ಪ್ರತ್ಯೇಕ ಸಿಬಂದಿಯನ್ನು ನೇಮಕ ಮಾಡಲಾಗಿತ್ತು. ಸೋಮ ವಾರವೂ 7 ಜೋಡಿಗಳ ವಿವಾಹಕ್ಕೆ ನೋಂದಣಿಯಾಗಿದೆ ಎಂದು
ಅರ್ಚಕ ಶ್ರೀಹರಿನಾರಾಯಣ ದಾಸ ಆಸ್ರಣ್ಣ ತಿಳಿಸಿದ್ದಾರೆ.

ಪ್ರತಿವರ್ಷ ಅಕ್ಷಯ ತೃತೀಯಾದಂದು ಕಟೀಲು ಕ್ಷೇತ್ರದಲ್ಲಿ ಅತೀಹೆಚ್ಚು ಸಾಮೂಹಿಕ ವಿವಾಹ ಸಾಮಾನ್ಯ. ಆದರೆ ಈ ಬಾರಿ ಅಕ್ಷಯ ತೃತೀಯಾ ಮಂಗಳವಾರ ಬಂದಿರುವುದರಿಂದ ಅಂದು ಮದುವೆಗಳು ಇರುವುದಿಲ್ಲ. ಅದರ ಹಿಂದು-ಮುಂದಿನ ದಿನಗಳಲ್ಲಿ ಸಾಕಷ್ಟು ಸಂಖ್ಯೆಯ ಮದುವೆಗಳು ನೆರವೇರಲಿವೆ.

ವಾಹನ ದಟ್ಟಣೆ ನಿರ್ವಹಣೆ
ಮದುವೆ ಕಡೆಯವರ ಆಗಮನ ಜತೆಗೆ ರಜಾ ದಿನವಾಗಿದ್ದರಿಂದ ಕಟೀಲು ಪೇಟೆ, ಬಸ್‌ ನಿಲ್ದಾಣ ಹಾಗೂ ರಥಬೀದಿಯಲ್ಲಿ ಜನ-ವಾಹನಗಳ ದಟ್ಟಣೆ ಹೆಚ್ಚಾಗಿ ಕಂಡುಬಂದಿತು. 25,000ಕ್ಕೂ ಅಧಿಕ ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದರು. ವಾಹನಗಳ ಸುಗಮ ಸಂಚಾರಕ್ಕಾಗಿ ಕಿನ್ನಿಗೋಳಿ ಕಡೆಯಿಂದ ಬರುವ ವಾಹನಗಳಿಗೆ ಕಾಲೇಜು ಮೈದಾನ ಹಾಗೂ ಬಜಪೆ ಕಡೆಯಿಂದ ಬರುವ ವಾಹನಗಳಿಗೆ ಪ್ರೌಢಶಾಲೆ-ಹಳೆ ಪ್ರಾಥಮಿಕ ಶಾಲೆಯ ವಠಾರದಲ್ಲಿ ನಿಲುಗಡೆ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಯೂ ನಿರ್ವಹಣೆಗಾಗಿ ಸಿಬಂದಿ ಯನ್ನು ನಿಯೋಜಿಸಲಾಗಿತ್ತು ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸನತ್‌ಕುಮಾರ್‌ ಶೆಟ್ಟಿ ಕೊಡೆತ್ತೂರು ಗುತ್ತು ತಿಳಿಸಿದ್ದಾರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next