ಬೆಂಗಳೂರು: “ಮುಂದಿನ ಶೈಕ್ಷಣಿಕ ವರ್ಷದಲ್ಲಿ ದೇಶಾದ್ಯಂತ 74 ವೈದ್ಯಕೀಯ ಕಾಲೇಜು ಆರಂಭಿಸಲಾಗುತ್ತದೆ’ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ ಮಾಹಿತಿ ನೀಡಿದರು. ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (ಆರ್‌ಜಿಯುಎಚ್‌ಎಸ್) ಧನ್ವಂತರಿ ಸಭಾಂಗಣದಲ್ಲಿ ಭಾನುವಾರ ನಡೆದ ಕುಲಪತಿ ಮತ್ತು ಅಧಿಕಾರಿಗಳೊಂದಿಗಿನ ಸಂವಾದದಲ್ಲಿ ಮಾತನಾಡಿದರು.
2020-21ಕ್ಕೆ ದೇಶಾದ್ಯಂತ 75 ಹೊಸ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲಾಗುತ್ತಿದೆ. 2022ಕ್ಕೆ ದೇಶಾದ್ಯಂತ 1.5 ಲಕ್ಷ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ. ಈ ಮೂಲಕ ದೇಶದ ನಾಗರಿಕರ ಆರೋಗ್ಯ ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದರು.
ಆಯುಷ್ಮಾನ್ ಭಾರತ್ ಯೋಜನೆಯ ಕುರಿತು 15 ದಿನಗಳ ಅಭಿಯಾನವನ್ನು ಸೆ.23ರಿಂದ ಹಮ್ಮಿಕೊಳ್ಳಲಾಗುವುದು. ಒಂದು ವರ್ಷದಲ್ಲಿ ಯೋಜನೆಗೆ ದೇಶಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. 23ಕ್ಕೆ ಯೋಜನೆಗೆ ವರ್ಷ ಪೂರ್ತಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಅಭಿಯಾನ ನಡೆಸಲಿದ್ದೇವೆ ಎಂದರು.
ಕೋಲಾರ ಜಿಲ್ಲೆಯ ನಾಗರಿಕರು, ವೈದ್ಯರು, ರೈತರು ಮತ್ತು ದಲಿತ ಮುಖಂಡರ ಜತೆ ಚರ್ಚೆ ನಡೆಸಿದ್ದೇನೆ. ಕರ್ನಾಟಕದಲ್ಲಿಯೂ ಯೋಜನೆ ಬಗ್ಗೆ ಜನರು ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ಈ ಮೂಲಕ ಕೇಂದ್ರ ಸರ್ಕಾರದ ಯೋಜನೆ ಸಾಕಷ್ಟು ರೀತಿಯಲ್ಲಿ ಜನರಿಗೆ ಉಪಯೋಗವಾಗುತ್ತಿದೆ ಎಂಬುದು ತಿಳಿಯುತ್ತಿದೆ ಎಂದು ಹೇಳಿದರು.
ಆಯುಷ್ಮಾನ ಭಾರತ್ ಮಾತ್ರವಲ್ಲ, ಕೇಂದ್ರ ಸರ್ಕಾರ ಹಲವು ಐತಿಹಾಸಿಕ ನಿರ್ಣಯಗಳನ್ನು ಕೈಗೊಂಡಿದೆ. ಈ ಪೈಕಿ ಸಂವಿಧಾನದ ಪರಿಚ್ಛೇದ 370 ರದ್ದುಗೊಳಿಸಿರುವ ಬಗ್ಗೆ ಇಡೀ ದೇಶದಲ್ಲಿಯೇ ಮೆಚ್ಚುಗೆ ವ್ಯಕ್ತವಾಗಿದೆ. ಈ ಮೂಲಕ ಕಾಶ್ಮೀರಿಗಳಿಗೆ ಶಿಕ್ಷಣ, ಉದ್ಯೋಗ ಕಲ್ಪಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು. ಸಂಸದ ಪಿ.ಸಿ. ಮೋಹನ್, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ವಿವಿ ಕುಲಪತಿ ಡಾ. ಸಚ್ಚಿದಾನಂದ, ಕುಲಸಚಿವ ಡಾ.ಎನ್. ನಿಂಗೇಗೌಡ ಇದ್ದರು.
ಸುಧಾಮೂರ್ತಿ ಜತೆ ಚರ್ಚೆ: ರಾಜೀವ್‌ಗಾಂಧಿ ವಿವಿಯ ಸಂವಾದ ಕಾರ್ಯ ಕ್ರಮದ ನಂತರ ಕೇಂದ್ರ ಸಚಿವ ಡಾ.ಹರ್ಷವರ್ಧನ ಅವರು ಜಯನಗರದಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿಯವರನ್ನು ಭೇಟಿ ಮಾಡಿ, ಕೇಂದ್ರ ಸರ್ಕಾರದ ಸಾಧನೆಗಳ ಪುಸ್ತಕವನ್ನು ನೀಡಿ, ವಿವಿಧ ವಿಷಯಗಳ ಕುರಿತು ಕೆಲಕಾಲ ಚರ್ಚೆ ನಡೆಸಿದರು.