Advertisement
ಯುದ್ಧಗ್ರಸ್ಥ ಉಕ್ರೇನ್‌ನಿಂದ ವಿವಿಧ ರೀತಿಯಲ್ಲಿ ಸಂಚರಿಸಿ ನೆರೆಯ ದೇಶಗಳಲ್ಲಿ ಆಶ್ರಯ ಪಡೆದಿರುವ ಭಾರತೀಯರನ್ನು ವಾಪಸ್ ತರುವ ಆಪರೇಷನ್ ಗಂಗಾ ಹೊಣೆ ಹೊತ್ತಿರುವ ಸಚಿವಾಲಯ ಈ ಮಾಹಿತಿ ನೀಡಿದೆ. ಶುಕ್ರವಾರವೇ ಏರ್ ಇಂಡಿಯಾ ಎಕ್ಸ್‌ಪ್ರಸ್, ಏರ್ ಇಂಡಿಯಾ, ಸ್ಪೇಸ್‌ಜೆಟ್, ಇಂಡಿಗೋ, ವಿಸ್ತಾರ ಮತ್ತು ಗೋ ಫಸ್ಟ್ ಕಂಪೆನಿಯ 17 ವಿಶೇಷ ವಿಮಾನಗಳು ಕಾರ್ಯಾಚರಣೆ ನಡೆಸಲಿವೆ ಎಂದು ಸಚಿವಾಲಯ ಹೇಳಿದೆ. ಉಕ್ರೇನ್‌ನ ನೆರೆ ದೇಶಗಳಾದ ರೊಮೇನಿಯಾ, ಹಂಗೇರಿ, ಪೋಲೆಂಡ್‌ಗಳಿಂದ ವಿಶೇಷ ವಿಮಾನಗಳ ಮೂಲಕ ಕರೆತರಲಾಗುತ್ತಿದೆ.
Related Articles
Advertisement
1,000 ಮಂದಿ ಖಾರ್ಕಿವ್ ತೊರೆದ ವಿದ್ಯಾರ್ಥಿಗಳು :
ಬುಧವಾರ ಎರಡು ಬಾರಿ ತುರ್ತು ಎಚ್ಚರಿಕೆ ನೀಡಿದ ಮೇಲೆ ಒಂದು ಸಾವಿರ ಭಾರತೀಯ ವಿದ್ಯಾರ್ಥಿಗಳು ಖಾರ್ಕಿವ್‌ನಿಂದ ಪಿಸೋಚಿನ್ ಪಸ್ಯೂìಯೆಂಟ್‌ಗೆ ತೆರಳಿದ್ದಾರೆ ಎಂದು ವಿದೇಶಾಂಗ ಇಲಾಖೆ ಹೇಳಿದೆ. ಖಾರ್ಕಿವ್ ಸೇರಿದಂತೆ ಯುದ್ಧಪೀಡಿತ ನಗರಗಳಿಂದ ಭಾರತೀಯರನ್ನು ಸ್ಥಳಾಂತರಿಸಲು ಶಕ್ತಿಮೀರಿ ಪ್ರಯತ್ನಿಸಲಾಗುತ್ತಿದೆ. ಹೀಗಾಗಿಯೇ ಬುಧವಾರ ಎರಡು ಬಾರಿ ಎಚ್ಚರಿಕೆ ನೀಡಲಾಯಿತು ಎಂದು ಇಲಾಖೆ ತಿಳಿಸಿದೆ.
ಅರಿವು ಮೂಡಿಸಲು ಯತ್ನ: ಯುದ್ಧಪೀಡಿತ ಪ್ರಾಂತ್ಯಗಳಲ್ಲಿರುವ ಭಾರತೀಯರಿಗೆ ತಮ್ಮ ಸುರಕ್ಷತೆಯ ಬಗ್ಗೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಅರಿವು ಮೂಡಿಸಲು ಭಾರತ ಸರಕಾರ ವಿಭಿನ್ನ ರೀತಿಯಲ್ಲಿ ಮುಂದಾಗಿದೆ.
ಯುದ್ಧ ತಜ್ಞರು, ಸೇನೆಯ ನಿವೃತ್ತ ಜನರಲ್‌ಗಳನ್ನು ಸಂದರ್ಶನ ಮಾಡುವ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಆ ಸಂದರ್ಶನಗಳಲ್ಲಿ ಅವರು ಶೆಲ್ ಹಾಗೂ ಕ್ಷಿಪಣಿ ದಾಳಿಗಳು ಸತತವಾಗಿ ನಡೆಯುತ್ತಿರುವ ಪ್ರಾಂತ್ಯಗಳಲ್ಲಿ ಹೇಗೆ ರಕ್ಷಿಸಿಕೊಳ್ಳಬೇಕು? ಆಹಾರ, ನೀರು ಸೀಮಿತವಾಗಿರುವಾಗ ಅವುಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬಿತ್ಯಾದಿ ಮಾಹಿತಿಗಳನ್ನು ನೀಡಿದ್ದಾರೆ. ಆ ಸಂದರ್ಶನದ ವೀಡಿಯೋಗಳನ್ನು “ಯು ಟ್ಯೂಬ್’ ಸೇರಿದಂತೆ ಹಲವಾರು ಡಿಜಿಟಲ್ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ.
ರಷ್ಯಾ ಸಂಸ್ಥೆಗಳ ಜತೆ ವಿತ್ತೀಯ ವಹಿವಾಟು ಬೇಡ: ಎಸ್‌ಬಿಐ :
ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳು ರಷ್ಯಾವನ್ನು ಜಗತ್ತಿನ ಬ್ಯಾಂಕಿಂಗ್ ಮತ್ತು ವಿತ್ತೀಯ ಸಂಸ್ಥೆಗಳ ಸರಣಿ, ಸ್ವಿಫ್ಟ್ನಿಂದ ಉಚ್ಚಾಟಿಸಿದ ಬಿಸಿ ಭಾರತಕ್ಕೂ ತಟ್ಟಿದೆ. ಭಾರತೀಯ ಸ್ಟೇಟ್ ಬ್ಯಾಂಕ್ ರಷ್ಯಾ ವತಿಯಿಂದ ನಡೆಯುವ ವಿತ್ತೀಯ ವಹಿವಾಟು ಸ್ಥಗಿತ ಗೊಳಿಸಲು ನಿರ್ಧರಿಸಿದೆ. ಈ ಬಗ್ಗೆ ಬ್ಯಾಂಕ್‌ನ ಆಡಳಿತ ಮಂಡಳಿ, “ಅಮೆರಿಕ, ಐರೋಪ್ಯ ಒಕ್ಕೂಟ ಅಥವಾ ವಿಶ್ವಸಂಸ್ಥೆ ನಿಷೇಧಕ್ಕೆ ಒಳಪಡಿಸಿದ ಸಂಸ್ಥೆ, ಬಂದರು ಮಂಡಳಿ, ಯಾವುದೇ ಸಂಸ್ಥೆಗೆ ಸಂಬಂಧಿಸಿದ ಹಣಕಾಸು ವ್ಯವಹಾರವನ್ನು ಸ್ವೀಕರಿಸು ವಂತಿಲ್ಲ. ಅದನ್ನು ನಡೆಸಿ ಅಪಾಯ ಆಹ್ವಾನಿಸುವುದು ಬೇಡ’ ಎಂದು ಆಂತರಿಕವಾಗಿ ಸುತ್ತೋಲೆ ಹೊರ ಡಿಸಿದೆ. ಅಂಥ ಸಂಸ್ಥೆಗಳಿಗೆ ಪಾವತಿ ಮಾಡಬೇಕಾಗಿದ್ದರೆ ಬದಲಿ ವ್ಯವಸ್ಥೆಗಳ ಮೂಲಕ ನಡೆಸುವಂತೆಯೂ ಸೂಚಿಸಲಾಗಿದೆ.
ಕೇಂದ್ರಕ್ಕೆ ಕಾಂಗ್ರೆಸ್ ಬೆಂಬಲ :
ವಿಶ್ವಸಂಸ್ಥೆಯಲ್ಲಿ ರಷ್ಯಾ ವಿರುದ್ಧ ನಿರ್ಣಯ ಕೈಗೊಳ್ಳುವ ಸಭೆಗಳಿಂದ ಕೇಂದ್ರ ಸರಕಾರ ದೂರ ಉಳಿದಿರುವ ನಿರ್ಧಾರಕ್ಕೆ ಕಾಂಗ್ರೆಸ್ ಸೇರಿ ವಿಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ. ಜತೆಗೆ ವಿದ್ಯಾರ್ಥಿಗಳ ರಕ್ಷಣೆಗೆ ಕೈಗೊಂಡಿರುವ ಕ್ರಮಗಳಿಗೂ ಸಂತೃಪ್ತಿ ವ್ಯಕ್ತಪಡಿಸಿವೆ. ದಿಲ್ಲಿಯಲ್ಲಿ ಗುರುವಾರ ವಿದೇಶಾಂಗ ವಿಚಾರಗಳಿಗಾಗಿನ ಸಂಸತ್‌ನ ಸ್ಥಾಯಿ ಸಮಿತಿ ಮುಂದೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಹಾಜರಾಗಿ ಸರಕಾರ ಕೈಗೊಂಡ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ ಸಹಿತ ವಿವರಣೆ ನೀಡಿದ್ದಾರೆ. ಸಭೆಯಲ್ಲಿ ಕೇಂದ್ರದ ಮಾಜಿ ಸಚಿವ ಶಶಿ ತರೂರ್, ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಶಿವಸೇನೆಯ ಪ್ರಿಯಾಂಕಾ ಚೌಧರಿ ಸೇರಿದಂತೆ ಪ್ರಮುಖರು ಹಾಜರಿದ್ದರು. ಬಳಿಕ ಟ್ವೀಟ್ ಮಾಡಿದ ಸಂಸದ ತರೂರ್, “ಉತ್ತಮ ರೀತಿಯಲ್ಲಿ ಸಭೆ ನಡೆಯಿತು ಮತ್ತು ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ’ ಎಂದು ಬರೆದುಕೊಂಡಿದ್ದಾರೆ. ಜತೆಗೆ ಸಭೆಯಲ್ಲಿ ಸ್ಥಾಯಿ ಸಮಿತಿ ಸದಸ್ಯರು ಎತ್ತಿದ ಪ್ರಶ್ನೆಗಳಿಗೆ ಸೂಕ್ತ ರೀತಿಯಲ್ಲಿ ಕೇಂದ್ರದ ವತಿಯಿಂದ ಉತ್ತರ ದೊರೆತಿದೆ ಎಂದೂ ಹೇಳಿಕೊಂಡಿದ್ದಾರೆ.