ಚಿಕ್ಕಬಳ್ಳಾಪುರ: ಜಿಲ್ಲಾ ನ್ಯಾಯಾಲಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘದ ಸಹಯೋಗದೊಂದಿಗೆ ನಗರದ ನ್ಯಾಯಾಲಯದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ವಿಚಾರಣೆಗೆ ಕೈಗೆತಿಕೊಳ್ಳಲಾಗಿದ್ದ 3,336 ಪ್ರಕರಣಗಳ ಪೈಕಿ ಒಟ್ಟು 740 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ವಿಲೇವಾರಿ ಮಾಡಿ ಒಟ್ಟು 4.42 ಕೋಟಿ ರೂ. ಇತ್ಯರ್ಥಪಡಿಸಲಾಗಿದೆ.
ವ್ಯಾಜ್ಯ ಪೂರ್ವ ಪ್ರಕರಣ: ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಕೆ.ಅಮರನಾರಾಯಣ ಅಧ್ಯ ಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ಗೆ ವ್ಯಾಜ್ಯ ಪೂರ್ವ ಪ್ರಕರಣಗಳ ಪೈಕಿ ಒಟ್ಟು 447 ಬ್ಯಾಂಕ್ ಸಾಲ ವಸೂಲಾತಿ ಹಾಗೂ ಇತರೆ ಸಿವಿಲ್ ಪ್ರಕರಣ 30 ಸೇರಿ ಒಟ್ಟು 447 ಪ್ರಕರಣಗಳನ್ನು ಕೈಗೆತ್ತಿಕೊಂಡು ಆ ಪೈಕಿ 56 ವಿಲೇವಾರಿ ಮಾಡಿ ಒಟ್ಟು 1,48,36,751 ರೂ. ಇತ್ಯರ್ಥಪಡಿಸಿದರು.
684 ಬಾಕಿ ಪ್ರಕರಣ ವಿಲೇವಾರಿ: ನ್ಯಾಯಾಲಯದಲ್ಲಿ ಬಾಕಿ ಇದ್ದ ಒಟ್ಟು ಪ್ರಕರಣಗಳ ಪೈಕಿ ಬ್ಯಾಂಕ್ ವಸೂಲಾತಿ 124, ದೌರ್ಜನ್ಯ ಪರಿಹಾರ ವಿತರಣೆ 478, ವಿದ್ಯುತ್ ಬಿಲ್ ಬಾಕಿ 20, ಕಾರ್ಮಿಕ ವಿವಾದ 65, ಇತರೆ ಸಿವಿಲ್ 795 ಸೇರಿ ಒಟ್ಟು 2,859 ಪ್ರಕರಣಗಳನ್ನು ರಾಜಿ ಸಂಧಾನಕ್ಕೆ ಕೈಗೆತ್ತಿಕೊಂಡು ಆ ಪೈಕಿ 684 ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಕಕ್ಷಿದಾರರಿಗೆ ಒಪ್ಪುವ ರೀತಿಯಲ್ಲಿ ಪ್ರಕರಣ ವಿಲೇವಾರಿ ಮಾಡಿ ಒಟ್ಟು 2,94,60,076 ರೂ. ಇತ್ಯರ್ಥ ಪಡಿಸಲಾಯಿತು.
ಈ ಸಂದರ್ಭದಲ್ಲಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಸಿಜೆಎಂ ಕೆ.ಎನ್.ರೂಪಾ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಹೆಚ್.ದೇವರಾಜ್, ವಕೀಲರಸಂಘದ ಜಿಲ್ಲಾಧ್ಯಕ್ಷ ಕೆ.ಎಚ್.ತಮ್ಮೇಗೌಡ ಸೇರಿದಂತೆ ನ್ಯಾಯಾಲಯದ ಹಿರಿಯ, ಕಿರಿಯ ನ್ಯಾಯಾಧೀಶರು, ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ಕಕ್ಷಿದಾರರು ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.