Advertisement

74ರ ಹರೆಯದಲ್ಲೂ ನಿತ್ಯ 6 ಗಂಟೆ ಬೀಚ್‌ ಸ್ವಚ್ಛತೆ

01:31 AM May 07, 2021 | Team Udayavani |

ಕುಂದಾಪುರ: ಇವರ ಹೆಸರು ಗೋಪಾಲ ಕೆ. ಬಾಳಿಗಾ. ವಯಸ್ಸು 74. ಕುಂದಾಪುರದ ಬೀಚ್‌ನಲ್ಲಿ ಜನಾಕರ್ಷಣೆಯ ವ್ಯಕ್ತಿ. ಪ್ರತೀದಿನ 4-5 ಕಿ.ಮೀ.ಯಷ್ಟು ಬೀಚ್‌ನಲ್ಲಿ ಓಡಾಡುತ್ತ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಸಂಗ್ರಹಿಸಿ ತೊಳೆದು ಹೆಗಲಲ್ಲಿರುವ ಜೋಳಿಗೆಗೆ ತುಂಬಿಕೊಂಡು ವ್ಯವಸ್ಥಿತವಾಗಿ ವಿಲೇವಾರಿ ಮಾಡುವ ಮೂಲಕ ಎಲ್ಲರಿಗೂ ಅನುಕರಣೀಯರಾಗಿದ್ದಾರೆ.

Advertisement

ಸಣಕಲು ದೇಹ, ಚುರುಕು ನಡೆಯ ಇವರು ಮೂಲತಃ ಉಡುಪಿ ಅಜ್ಜರಕಾಡಿನವರು. ಎಂಜಿಎಂ ಕಾಲೇಜಿನಲ್ಲಿ ಬಿಎಸ್‌ಸಿ ಮಾಡಿ ಮಣಿಪಾಲ ಎಂಐಟಿಯಲ್ಲಿ ಉದ್ಯೋಗಿ ಯಾಗಿದ್ದುಕೊಂಡು ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಸ್ನಾತಕೋತ್ತರ ಕಾನೂನು ಪದವಿ ಅಭ್ಯಸಿಸಿದ್ದಾರೆ. 1969ರಲ್ಲಿ ಸಿಂಡಿಕೇಟ್‌ ಬ್ಯಾಂಕಿ ನಲ್ಲಿ ಅಧಿಕಾರಿಯಾಗಿ ಸೇರಿ ದಿಲ್ಲಿಗೆ ಹೋದವರು 1983ರಲ್ಲಿ ಅಗ್ನಿ ಆಕಸ್ಮಿಕದಲ್ಲಿ ಮಡದಿ ತೀರಿಕೊಂಡಾಗ ಉದ್ಯೋಗ ತೊರೆದರು.

ಇಬ್ಬರು ಗಂಡು ಮಕ್ಕಳ ಜತೆಗೆ ಮುಂಬಯಿಗೆ ಹೋಗಿ ಲಂಡನ್‌ ಮೂಲದ ಖಾಸಗಿ ಕಂಪೆನಿಗೆ ಸೇರಿದರು. 1997ರಲ್ಲಿ ಮಕ್ಕಳು ಅಮೆರಿಕಕ್ಕೆ ತೆರಳುತ್ತಿದ್ದಂತೆಯೇ ಏಕಾಂಗಿಯಾದರು. 2005ರಲ್ಲಿನಿವೃತ್ತಿಯ ಬಳಿಕ ಕೇರಳದ ಶಿವಾನಂದ ಯೋಗವೇದಾಂತ ಸೆಂಟರ್‌ಗೆ ಸ್ವಯಂಸೇವಕರಾಗಿ ಸೇರಿಕೊಂಡರು. ಸದಾ ಚಟುವಟಿಕೆಯಿಂದಿರುವ ಬಾಳಿಗಾ ಅವರು ಕಳೆದ ವರ್ಷ ಲಾಕ್‌ಡೌನ್‌ಸಂದರ್ಭ ಬೇರೇನು ಮಾಡುವುದೆಂದು ತೋಚದೆ ಬೀಚ್‌ ಸ್ವಚ್ಛತೆ ಕೈಂಕರ್ಯ ಆರಂಭಿಸಿದರು.

ಸೋಮೇಶ್ವರಕ್ಕೆ :

ಬೈಕಂಪಾಡಿಯಿಂದ ಸುರತ್ಕಲ್‌ ಲೈಟ್‌ಹೌಸ್‌ ವರೆಗೆ ನಿರಂತರ 6 ತಿಂಗಳು ಸ್ವಚ್ಛತೆ ನಡೆಸಿದ ಬಾಳಿಗಾ, ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್‌ನವರು ಕೋಡಿ ಬೀಚನ್ನು ಪ್ರತೀ ವಾರ ಸ್ವಚ್ಛಪಡಿಸುತ್ತಿದ್ದ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ  ಗಮನಿಸಿದರು. ತಂಡದ ಸದಸ್ಯರಾಗಿದ್ದ, ಮಧುಚಂದ್ರದ ಬದಲು ಬೀಚ್‌ ಸ್ವತ್ಛ ಮಾಡಿ ಪ್ರಧಾನಿ ಮೋದಿ ಅವರ ಮನ್‌ಕಿ ಬಾತ್‌ನಲ್ಲಿ ಸುದ್ದಿಯಾದ ಅನುದೀಪ್‌ ಅವರನ್ನು ಸಂಪರ್ಕಿಸಿ ಬೈಂದೂರಿನ ಸೋಮೇಶ್ವರ ಕಡಲತಡಿಯಲ್ಲಿ ಸ್ವಲ್ಪ ಸಮಯ ಸ್ವಚ್ಛತಾ ಕಾರ್ಯ ನಡೆಸಿದರು. ಇದಕ್ಕಾಗಿ ಸುರತ್ಕಲ್‌ನಿಂದ ಕುಂದಾಪುರಕ್ಕೆ ಪ್ರತೀ ರವಿವಾರ ಬಂದುಹೋಗುತ್ತಿದ್ದರು.

Advertisement

ಕೋಡಿಯಲ್ಲಿ :

ಈಗ 18 ದಿನಗಳಿಂದ ಕುಂದಾಪುರದ ಕೋಡಿ ಬೀಚ್‌ನ ಸ್ವತ್ಛತೆಯಲ್ಲಿ ನಿರತರಾಗಿದ್ದಾರೆ. ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್‌ನ ಭರತ್‌ ಬಂಗೇರ ಮನೆಯಲ್ಲಿದ್ದುಕೊಂಡು ಬೆಳಗ್ಗೆ, ಸಂಜೆ ಸೇರಿದಂತೆ ದಿನಕ್ಕೆ 6 ತಾಸು ಬೀಚ್‌ ಸ್ವಚ್ಛತೆಯಲ್ಲಿ ಕಳೆಯುತ್ತಿದ್ದಾರೆ.

ಮನಸ್ಸಿಗೆ, ದೇಹಕ್ಕೆ :

ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್ ನವರು 90 ವಾರಗಳಿಂದ ನಡೆಸುತ್ತಿರುವ ಬೀಚ್‌ ಸ್ವಚ್ಛತೆ, ಅದರಲ್ಲಿ ಅಧಿಕಾರ ಭೇದ ಇಲ್ಲದೇ ಪಾಲ್ಗೊಳ್ಳುವ ಮಂದಿ, ತೊಡಗಿಸಿಕೊಂಡ ಯುವಜನ ಇದನ್ನೆಲ್ಲ ಗಮನಿಸಿ ಅವರೊಂದಿಗೆ ಸೇರಿಕೊಳ್ಳುವ ಆಸಕ್ತಿ ಮೂಡಿತು. ವೃದ್ಧಾಪ್ಯದಲ್ಲಿ ಹಾಳು ಹರಟೆಯ ಮೂಲಕ ಸಮಯ ವ್ಯರ್ಥ ಮಾಡಲು ಬಯಸದ ನಾನು ದೇಹ, ಮನಸ್ಸನ್ನು ಕ್ರಿಯಾಶೀಲವಾಗಿಡಲು ಬೀಚ್‌ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡೆ ಎನ್ನುತ್ತಾರೆ ಬಾಳಿಗಾ. ಇವರು ಕೋವಿಡ್‌ ಲಸಿಕೆಗೆಂದು ಎರಡು ಬಾರಿ ಹೋಗಿ ಬಂದಿರುವುದನ್ನು ಬಿಟ್ಟರೆ ಈವರೆಗೆ ಅನಾರೋಗ್ಯ ಎಂದು ಆಸ್ಪತ್ರೆಗೆ ಹೋಗಿಲ್ಲವಂತೆ.

ಗಾಂಧಿ, ಠಾಗೋರ್‌ ಆದರ್ಶ :

ನನ್ನ ಬದುಕೇ ನನ್ನ ಸಂದೇಶ ಎಂದು ಸಾರಿದ ಮಹಾತ್ಮಾ ಗಾಂಧಿ, ಅವರಿವರು ಬರುತ್ತಾರೆ ಎಂದು ಕಾಯದೇ ನೀನೊಬ್ಬನೇ ಹೊರಡು (ಏಕ್‌ತಾ ಚಲೋ) ಎಂದು ಹೇಳಿದ ರವೀಂದ್ರನಾಥ ಠಾಗೋರರೇ ನನಗೆ ಆದರ್ಶ. ಹಾಗಾಗಿ ಸ್ವಚ್ಛತಾ ಕಾರ್ಯ, ಯೋಗ, ಧ್ಯಾನದಲ್ಲಿ ನಾನೊಬ್ಬನೇ ತೊಡಗಿಸಿಕೊಳ್ಳುತ್ತೇನೆ. ನೂರಾರು ಮಂದಿ ಅನುಸರಿಸುತ್ತಾರೆ.ಗೋಪಾಲ ಕೆ. ಬಾಳಿಗಾ, ಉಡುಪಿ

 

ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next