Advertisement

“ಪುಟಾಣಿ ಹೃದಯಗಳ ಕಲ್ಪನೆಗಳಿಗೆ ಬಣ್ಣ’

06:00 AM Apr 11, 2018 | |

ಉಡುಪಿ: ಅವರೆಲ್ಲರೂ ಪುಟ್ಟ ಪುಟ್ಟ ಮಕ್ಕಳು. ವಿಧ ವಿಧ ಕಲ್ಪನೆ, ಆಸೆ, ಕನಸು ಗಳು. ಅವೆಲ್ಲವುಗಳಿಗೂ ಬಣ್ಣ ಹಚ್ಚಿ ಚಿತ್ರ ರೂಪ ಕೊಟ್ಟಿದ್ದಾರೆ. ಚಿತ್ರಗಳ ಮೂಲಕವೇ ವೀಕ್ಷಕರ ಮನದೊಳಗೆ ಪ್ರವೇಶಿಸುತ್ತಾರೆ. ಪುಟಾಣಿಗಳ ಚಿತ್ರಗಳು ದೊಡ್ಡವರಿಗೂ ಆಪ್ತವಾಗುತ್ತವೆ. ಇಂತಹ ಸುಮಾರು 74 ಚಿತ್ರಗಳ ಅನಾವರಣ ಕಾರ್ಯಕ್ರಮ “ಚೈಲ್ಡ್‌ ಹಾರ್ಟ್‌’ ಎ. 10ರಂದು ಮಣಿಪಾಲದ ತ್ರಿವರ್ಣ ಕಲಾ ಗ್ಯಾಲರಿಯಲ್ಲಿ ಜರಗಿತು.

Advertisement

ಚಿತ್ರಗಳನ್ನು ಪೇಸ್ಟಲ್‌ನಲ್ಲಿ ಮೂಡಿಸಲಾಗಿದೆ. ತನ್ನ ಅಪ್ಪನ ಜತೆ ವಾಕಿಂಗ್‌ ಹೋಗುವಾಗ ದೂರದಲ್ಲಿ ಸಣ್ಣ ಆಕಾರದಲ್ಲಿ ಕಂಡ ಬಹುಮಹಡಿ ಕಟ್ಟಡವನ್ನು  ಚಿತ್ರಿಸಿರುವ 4ನೇ ತರಗತಿಯ ವೃಷಭ್‌ ಶೆಟ್ಟಿ “ಅದು ಬಿಲ್ಡಿಂಗ್‌ ದೊಡ್ಡದು. ಆದರೆ ನನಗೆ ತುಂಬಾ ಚಿಕ್ಕದಾಗಿ ಕಂಡಿತು. ಅದಕ್ಕಾಗಿ ನನಗಿಂತ ಸ್ವಲ್ಪ ಎತ್ತರವಿರುವಷ್ಟು ಮಾತ್ರ ಎತ್ತರಕ್ಕೆ ಚಿತ್ರಿಸಿದ್ದೇನೆ’ ಎಂದ!. ಭೂಮಿಕಾ ತನ್ನ ಮನೆಯಲ್ಲಿ ಆಚರಿಸಿದ ದೀಪಾವಳಿಯನ್ನು ಚಿತ್ರಕ್ಕೆ ವಸ್ತುವನ್ನಾಗಿರಿಸಿಕೊಂಡಿದ್ದಳು.

ಮೂರು ಕನಸುಗಳ ಪುಟಾಣಿ
ಶರಧಿ ಸುಧಾಕರ್‌ ಭಂಡಾರಿ ರಚಿಸಿರುವ ಚಿತ್ರ ಹೆಣ್ಮಗಳೊಬ್ಬಳು ಪೈಲಟ್‌, ಪೊಲೀಸ್‌ ಅಧಿಕಾರಿ, ಉತ್ತಮ ಬಾಣಿಸಿಗ (ಚೆಫ್) ಈ ಮೂರು  ಕನಸುಗಳನ್ನು  ಚಿತ್ರದಲ್ಲಿ ಒಟ್ಟೊಟ್ಟಿಗೆ ತೋರಿಸಿಕೊಟ್ಟಿದ್ದಾಳೆ. ತನ್ನ ಮನೆ ಪರಿಸರವನ್ನು ನೈಸರ್ಗಿಕ ರೀತಿಯಲ್ಲಿ ಚಿತ್ರಿಸಿರುವ ರಿತ್ವಿಕ್‌ ಚಿತ್ರ ಕೂಡ ಗಮನಸೆಳೆಯುತ್ತದೆ. ಕ್ರಿಸ್ಮಸ್‌ ನೈಟ್‌, ದೇವಸ್ಥಾನಗಳು ಕೂಡ ಮಕ್ಕಳ ಕೈಯಲ್ಲಿ ಸುಂದರ ರೂಪ ಪಡೆದುಕೊಂಡಿವೆ. “ಫ‌ುಟ್‌ಬಾಲ್‌ ಪಂದ್ಯಾಟ’, “ಶಾಲೆ’, “ತಂದೆಯ ಜತೆಗೆ ನನ್ನ ಕನಸು’ ಮೊದಲಾದ ಶೀರ್ಷಿಕೆಗಳಲ್ಲಿಯೂ ಚಿತ್ರಗಳು ಮೂಡಿಬಂದಿವೆ. 

ಪುಟಾಣಿಗಳಿಂದಲೇ ಮೂಡಿ ಬಂದಿರುವ ಚಿತ್ರಗಳ ಅನಾವರಣನ್ನು 6 ವರ್ಷದ ನಟಿ ಶ್ಲಾಘಾ ನೆರವೇರಿಸಿದಳು. ಎನ್‌ಐಟಿಕೆ ಆಂಗ್ಲಮಾಧ್ಯಮ ಶಾಲೆಯ ಪ್ರಾಂಶುಪಾಲೆ ಸುರೇಖಾ ಎಂ.ಎಚ್‌., ರೋಟರಿ ಕ್ಲಬ್‌ ಉಡುಪಿ ರಾಯಲ್‌ನ ಅಧ್ಯಕ್ಷ ರತ್ನಾಕರ ಇಂದ್ರಾಳಿ, ಸ್ಕೂಲ್‌ ಆಫ್ ಕಮ್ಯುನಿಕೇಷನ್‌ನ ಸಹ ಪ್ರಾಧ್ಯಾಪಕಿ ಕವಿತಾ ನಾಗಸಂಪಿಗೆ ಉಪಸ್ಥಿತರಿದ್ದರು. 

ತ್ರಿವರ್ಣ ಕಲಾ ಕೇಂದ್ರದ ಹರೀಶ್‌ ಸಾಗಾ ಸ್ವಾಗತಿಸಿದರು. ಲಾವಣ್ಯಾ ಜಿ. ಪ್ರಭು ನಿರ್ವಹಿಸಿದರು. ಶರಣ್ಯಾ ವಂದಿಸಿದರು. ಪ್ರದರ್ಶನ ಎ. 12ರ ವರೆಗೆ ಬೆಳಗ್ಗೆ 10ರಿಂದ ಸಂಜೆ 7ರ ವರೆಗೆ ಇರುತ್ತದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next