ಮಂಗಳೂರು: ಷೇರು ಟ್ರೇಡಿಂಗ್‌ನಲ್ಲಿ ಹಣ ತೊಡಗಿಸಿ ವ್ಯಕ್ತಿಯೊಬ್ಬರು 74,18,952 ರೂ. ಕಳೆದುಕೊಂಡಿರುವ ಬಗ್ಗೆ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರು ಮಾ. 15ರಂದು ಇನ್‌ಸ್ಟಾಗ್ರಾಂನಲ್ಲಿ ಷೇರು ಟ್ರೇಡಿಂಗ್ ಜಾಹೀರಾತು ನೋಡಿದ್ದಾರೆ. ಜಾಹೀರಾತಿನ ಮೇಲೆ ಕ್ಲೀಕ್ ಮಾಡಿ ನೋಡಿ, ಷೇರು ಟ್ರೇಡಿಂಗ್ ಬಗ್ಗೆ ಮೇಸೆಜ್ ಮಾಡಿದಾಗ ವಾಟ್ಸಾéಪ್‌ಗೆ ಅಪರಿಚಿತ ವ್ಯಕ್ತಿಯ ಮೊಬೈಲ್‌ನಿಂದ ಲಿಂಕ್ ಬಂದಿದೆ.
ಆ ಲಿಂಕ್ ಅನ್ನು ತೆರೆದು ನೋಡಿದಾಗ ಅದರಲ್ಲಿ ಗ್ರೂಪ್ ಕಂಡು ಬಂದಿದ್ದು, ಅವರನ್ನು ಆ ಗ್ರೂಪ್‌ಗೆ ಸೇರಿಸಿಕೊಂಡಿದ್ದಾರೆ. ಬಳಿಕ ಆನ್‌ಲೈನ್ ಮೂಲಕ ತರಬೇತಿಯನ್ನೂ ನೀಡಿದ್ದಾರೆ.
ಹೆಚ್ಚಿನ ಹಣ ತೊಡಗಿಸಿದ್ದಲ್ಲಿ ಹೆಚ್ಚು ಲಾಭಗಳಿಸಬಹುದು ಎಂದು ಹೇಳಿ ಷೇರು ಟ್ರೇಡಿಂಗ್ ಬಗ್ಗೆ ಪ್ರೇರೇಪಿಸಿದ್ದಾರೆ. ಮೊದಲಿಗೆ 10,000 ರೂ. ತೊಡಗಿಸಲು ತಿಳಿಸಿ ಬ್ಯಾಂಕ್ ಖಾತೆಯ ವಿವರವನ್ನು ಕಳುಹಿಸಿದ್ದಾರೆ. ಅದರಂತೆ ದೂರುದಾರರು ಆ ವ್ಯಕ್ತಿಯ ಬ್ಯಾಂಕ್ ಖಾತೆಗೆ 10,000 ರೂ. ಹಣವನ್ನು ಪಾವತಿಸಿದ್ದಾರೆ. ಅನಂತರ ಮಾ.15ರಿಂದ ಜು. 4ರ ವರೆಗೆ ದೂರುದಾರರು ಹಂತ ಹಂತವಾಗಿ ಅಪರಿಚಿತ ವ್ಯಕ್ತಿಯು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ 73,68,952 ರೂ. ಹಾಗೂ ಉಳಿದ 50,000 ರೂ. ಹಣವನ್ನು ಕಂಪೆನಿಯವರಿಗೆ ಪೋನ್ ಪೇ ಮೂಲಕ ಪಾವತಿಸಿದ್ದಾರೆ.
ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಲು ಪ್ರಯತ್ನಿಸಿದಾಗ ಸಾದ್ಯವಾಗದೇ ಇದ್ದುದರಿಂದ ಅನುಮಾನ ಬಂದು ತನ್ನ ಸ್ನೇಹಿತರಲ್ಲಿ ವಿಚಾರಿಸಿ ಮೋಸ ಹೋಗಿರುವ ವಿಚಾರ ಗಮನಕ್ಕೆ ಬಂದು ಪ್ರಕರಣ ದಾಖಲಿಸಿದ್ದಾರೆ.