ಕಾಪು: ಕಾಪು ತಾಲೂಕಿನಲ್ಲಿ ಈವರೆಗೆ ಕೋವಿಡ್ ಲಸಿಕೆ ಪ್ರಥಮ ಡೋಸ್ 98,631, ಎರಡನೇ ಡೋಸ್ 90,016, ಬೂಸ್ಟರ್ ಡೋಸ್ 950, 18 ವರ್ಷ ಮೇಲ್ಪಟ್ಟ 6778 ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ವಿತರಿಸಲಾಗಿದೆ. ಕೋವಿಡ್ ನಿಂದ ಮೃತ ಪಟ್ಟಿರುವ 22 ಮಂದಿಗೆ ರಾಜ್ಯ ಸರಕಾರದಿಂದ ತಲಾ 1 ಲಕ್ಷ ರೂ, ಕೇಂದ್ರದಿಂದ 34 ಮಂದಿ ತಲಾ 50 ಸಾವಿರ ರೂಪಾಯಿ ಪರಿಹಾರ ವಿತರಿಸಲಾಗಿದೆ. ಕೋವಿಡ್ ಸಾಂಕ್ರಾಮಿಕತೆಯಿಂದ ಹೊರಬಂದು ನಾವು ಸಧೃಡರಾಗೋಣ, ಸಬಲವಾದ ದೇಶವನ್ನು ಕಟ್ಟಲು ನಾವೆಲ್ಲರೂ ಶ್ರಮ ವಹಿಸುವ ಅಗತ್ಯತೆಯಿದೆ ಎಂದು ಕಾಪು ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ ಹೇಳಿದರು.
ಕಾಪು ತಾಲೂಕು ಆಡಳಿತ ಹಾಗೂ ಪುರಸಭೆಯ ನೇತೃತ್ವದಲ್ಲಿ ರಾಷ್ಟ್ರೀಯ ಹಾಗೂ ನಾಡಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಬಂಗ್ಲೆ ಮೈದಾನದಲ್ಲಿ ಬುಧವಾರ ಜರಗಿದ ೭೩ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಕಾಪು ತಾಲೂಕಿನಲ್ಲಿ ಪ್ರಕೃತಿ ವಿಕೋಪದಿಂದಾಗಿ 92 ಮಂದಿ ರೈತರು ಬೆಳೆ ಹಾನಿ ಅನುಭವಿಸಿದ್ದು ಅವರಿಗೆ ಸರಕಾರದಿಂದ ಸೂಕ್ತ ಪರಿಹಾರಧನ ವಿತರಿಸಲಾಗಿದೆ. 130 ಮನೆಗಳಿಗೆ ಹಾನಿಯುಂಟಾಗಿದ್ದು 33,92,268 ಪರಿಹಾರ ವಿತರಿಸಲಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಕೋವಿಡ್ ಬಗ್ಗೆ ನಾವು ಜಾಗೃತರಾಗಿ, ಇತರರಲ್ಲೂ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಬೇಕಿದೆ. ಕಾಪು ತಾಲೂಕಿಗೆ ಮಂಜೂರಾಗಿರುವ 10ಕೋಟಿ ರೂ. ವೆಚ್ಚದ ಮಿನಿ ವಿಧಾನಸೌಧ ನಿರ್ಮಾಣ ಕಾಮಗಾರಿ ಮತ್ತು ಪುರಸಭೆ ಸೇರಿದಂತೆ ಸುತ್ತಲಿನ ಗ್ರಾಮಗಳಿಗೆ 24 ಗಂಟೆ ನೀರು ಪೂರೈಸುವ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ. ಪುರಸಭೆ ವ್ಯಾಪ್ತಿಯಲ್ಲಿ ನಗರೋತ್ಥಾನ ಯೋಜನೆಯಲ್ಲಿ 10 ಕೋಟಿ ರೂ., ಮೆಸ್ಕಾಂ ಕಛೇರಿ, ತಾಲೂಕು ಪಂಚಾಯತ್ ಕಟ್ಟಡ ಕ್ಕೆ ಅನುದಾನ ಬಿಡುಗಡೆಗೆ ಮತ್ತು ರಸ್ತೆ ರಿಪೇರಿಗೆ 50 ಕೋಟಿ ರೂಪಾಯಿ ಅನುದಾನ ಬಿಡುಗಡೆ ಕೋರಿ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಕಾಪು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸುಧಾಮ ಶೆಟ್ಟಿ, ತಾ. ಪಂ. ಕಾರ್ಯ ನಿರ್ವಹಣಾಧಿಕಾರಿ ಶಿವ ಪ್ರಕಾಶ್ ಎಸ್., ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಂದ್ರಪ್ಪ, ಕಾಪು ಪೊಲೀಸ್ ವೃತ್ತ ನಿರೀಕ್ಷಕ ಪ್ರಕಾಶ್, ಕಾಪು ಪೊಲೀಸ್ ಠಾಣಾಧಿಕಾರಿ ರಾಘವೇಂದ್ರ ಸಿ., ಪುರಸಭಾ ಸದಸ್ಯರಾದ ಅನಿಲ್ ಕುಮಾರ್, ರತ್ನಾಕರ ಶೆಟ್ಟಿ, ಶೈಲೇಶ್ ಅಮೀನ್, ನಿತಿನ್ ಕುಮಾರ್, ನಾಗೇಶ್, ಉಮೇಶ್ ಕರ್ಕೇರ, ಸರಿತಾ ಪೂಜಾರಿ, ಹರಿಣಾಕ್ಷಿ ದೇವಾಡಿಗ, ರಾಧಿಕಾ ಸುವರ್ಣ, ಸತೀಶ್ಚಂದ್ರ ಮೂಳೂರು, ಮಹಮ್ಮದ್ ಆಸೀಪ್ ಮೊದಲಾದವರು ಉಪಸ್ಥಿತರಿದ್ದರು.
ಕಾಪು ಪೊಲೀಸ್ ಠಾಣಾ ಕ್ರೈಂ ಎಸ್ಸೈ ತಿಮ್ಮೇಶ್ ಅವರ ನೇತೃತ್ವದಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು.
ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಅನಿಲ್ ಕುಮಾರ್ ಸ್ವಾಗತಿಸಿದರು. ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವುಡ ವಂದಿಸಿದರು. ಉಪನ್ಯಾಸಕ ರಾಕೇಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.