Advertisement

ಜಿಲ್ಲಾಡಳಿತ ನಿಮ್ಮೊಂದಿಗೆ ಇದೆ: ನೆರೆ ಸಂತ್ರಸ್ತರಿಗೆ ಉಡುಪಿ ಡಿಸಿಗಳ ಭರವಸೆ

12:39 AM Aug 16, 2019 | Sriram |

ಉಡುಪಿ: ಜಿಲ್ಲೆಗೆ ಮಳೆಹಾನಿ ಪರಿಹಾರ ವಿತರಿಸಲು 5 ಕೋ.ರೂ. ಅನುದಾನ ಬಿಡುಗಡೆಯಾಗಿದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದರು.

Advertisement

ಗುರುವಾರ ಬೀಡಿನಗುಡ್ಡೆ ಬಯಲು ರಂಗ ಮಂದಿರದಲ್ಲಿ ಧ್ವಜಾರೋಹಣ ಗೈದು ಸ್ವಾತಂತ್ರ್ಯ ಸಂದೇಶ ನೀಡಿದರು. ಪ್ರಾಕೃತಿಕ ವಿಕೋಪದಿಂದ ಮೃತಪಟ್ಟವರ ಕುಟುಂಬದ ಸದಸ್ಯರಿಗೆ 4 ಲ.ರೂ. ಪರಿಹಾರ ಜತೆಗೆ ಹೆಚ್ಚುವರಿಯಾಗಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 1.ಲ.ರೂ. ನೀಡಲಾಗುತ್ತದೆ ಎಂದರು.

57 ಲ.ರೂ. ಪಾವತಿ
ಮಳೆಯಿಂದಾಗಿ ಜಿಲ್ಲೆಯಲ್ಲಿ ಮೂರು ಜನರು ಮೃತಪಟ್ಟಿದ್ದಾರೆ. ಮೃತರ ಕುಟುಂಬ ಸದಸ್ಯರಿಗೆ ತಲಾ 5 ಲ.ರೂ.ಗಳಂತೆ 15ಲ.ರೂ., ಜಾನುವಾರು ಜೀವ ಹಾನಿ 81,000 ರೂ., ಮನೆ ಹಾನಿ ಮೊತ್ತ 39.39 ಲ.ರೂ., ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿ 1.80 ಲ.ರೂ., ಸೇರಿದಂತೆ ಒಟ್ಟು ಇಲ್ಲಿಯವರೆಗೆ 57 ಲ.ರೂ ಪರಿಹಾರ ಧನ ಸಂತ್ರಸ್ತರಿಗೆ ಪಾವತಿಸಲಾಗಿದೆ ಎಂದರು.

ಕೆರೆಕುಂಟೆಗಳ ಪುನಶ್ಚೇತನ
ಮುಂದಿನ ದಿನದಲ್ಲಿ ನೀರಿನ ಸಮಸ್ಯೆ ಮರುಕಳಿಸದಂತೆ ಎಚ್ಚರವಹಿಸಲಾಗಿದೆ. ಈ ನಿಟ್ಟಿನಲ್ಲಿ ಸ್ಥಳೀಯಾಡಳಿತ ಮಳೆ ನೀರು ಸಂಗ್ರಹಣೆ, ಕೆರೆಕುಂಟೆಗಳ ಪುನಶ್ಚೇತನಕ್ಕೆ ಮುಂದಾಗಿದೆ ಎಂದರು.

ಚಳವಳಿಯಲ್ಲಿ ಮಹಿಳೆಯ ಪಾತ್ರ
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಲಿಂಗಭೇದವಿಲ್ಲದೆ ಭಾಗವಹಿಸಿದ್ದಾರೆ. ಕರಾವಳಿಭಾಗದ ಕಮಲಾದೇವಿ ಚಟ್ಟೋಪಾಧ್ಯಾಯ, ಕುಂದಾಪುರದ ಉಮಾಬಾಯಿ, ಕೃಷ್ಣಾಬಾಯಿ ಪಂಜೇಕರ್‌, ಯಶೋಧರ ದಾಸಪ್ಪ, ತಾಯಮ್ಮ ವೀರಣ್ಣ ಗೌಡ, ಮಹದೇವಿ ತಾಯಿ ದೊಡ್ಡಮನೆ, ಬಳ್ಳಾರಿ ಸಿದ್ದಮ್ಮ, ಗೌರಮ್ಮ ವೆಂಕಟರಾಮಯ್ಯ, ಲೀಲಾವತಿ ಮಾಗಡಿ ಸೇರಿದಂತೆ ಇತರೆ ಮಹಿಳೆಯರು ಭಾಗವಹಿಸಿದ್ದಾರೆ ಎಂದು ಸ್ಮರಿಸಿದರು.

Advertisement

ಡಾ| ಶಿವರಾಮ ಕಾರಂತ ಅಂತಹ ಸಾಹಿತಿಗಳು ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆ ಸ್ಮರಣೀಯ. ಡಾ| ಟಿ.ಎಂ.ಎ. ಪೈ ಅವರು ಸಾರ್ವಜನಿಕರಿಗಾಗಿ ಸ್ಥಾಪಿಸಿದ ಕಾಲೇಜಿಗೆ ಮಹಾತ್ಮಾ ಗಾಂಧೀ ಅವರ ಹೆಸರು, ಮಣಿಪಾಲದ ಮೆಡಿಕಲ್‌ ಕಾಲೇಜಿಗೆ ಕಸ್ತೂರ್ಬಾ ಹೆಸರನ್ನು ನೀಡಿರುವುದು ಪ್ರಶಂಸನೀಯ ಎಂದು ಹರ್ಷ ವ್ಯಕ್ತಪಡಿಸಿದರು.
ಶಾಸಕ ಕೆ. ರಘುಪತಿ ಭಟ್‌, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ತಾ.ಪಂ. ಅಧ್ಯಕ್ಷೆ ನೀತಾ ಗುರುರಾಜ್‌, ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಜಿ.ಪಂ. ಸಿಇಒ ಸಿಂಧೂ ರೂಪೇಶ್‌, ಎಸ್‌ಪಿ ನಿಶಾ ಜೇಮ್ಸ್‌, ಎಎಸ್‌ಪಿ ಕುಮಾರ್‌ಚಂದ್ರ, ಪೌರಾಯುಕ್ತ ಆನಂದ ಕಲ್ಲೋಳಿಕರ್‌ ಉಪಸ್ಥಿತರಿದ್ದರು. ಕುದಿ ವಸಂತ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಸ್ಥಳೀಯತೆಗೆ ಮಹತ್ವ
ಜಿಲ್ಲಾಧಿಕಾರಿ ಅವರು ಉಡುಪಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರು, ಜಿಲ್ಲೆಯಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದ ವಿವರ ಹಾಗೂ ಜಿಲ್ಲೆಯ ವಿಶೇಷತೆಯನ್ನು ಸ್ವಾತಂತ್ರ್ಯ ಸಂದೇಶದಲ್ಲಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next