Advertisement

ಜಿಲ್ಲಾಡಳಿತ ನಿಮ್ಮೊಂದಿಗೆ ಇದೆ: ನೆರೆ ಸಂತ್ರಸ್ತರಿಗೆ ಮಂಗಳೂರು ಡಿಸಿಗಳ ಭರವಸೆ

12:34 AM Aug 16, 2019 | Sriram |

ಮಂಗಳೂರು: “ದಕ್ಷಿಣ ಕನ್ನಡ ಜಿಲ್ಲೆ ಭಾರೀ ಪ್ರವಾಹವನ್ನು ಎದುರಿಸಿದೆ. ತಮ್ಮೆಲ್ಲವನ್ನೂ ಕಳೆದುಕೊಂಡು ಸಂಕಷ್ಟ ಪರಿಸ್ಥಿತಿಯಲ್ಲಿಯೂ ಸಂಯಮದಿಂದ ಸಹಕರಿಸಿರುವ ನಿಮ್ಮ ಜತೆ ಇಡೀ ಜಿಲ್ಲಾಡಳಿತವೇ ಇದೆ ಎಂಬ ಭರವಸೆಯನ್ನು ಜಿಲ್ಲೆಯ ನೆರೆ ಸಂತ್ರಸ್ತರಿಗೆ ನಾನು ನೀಡುತ್ತಿದ್ದೇನೆ’ ಎಂದು ದ.ಕ. ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಹೇಳಿದರು.

Advertisement

ನಗರದ ನೆಹರೂ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ 73ನೇ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

“ಕಳೆದ ಒಂದು ವಾರದಲ್ಲಿ ರಾಜ್ಯದಲ್ಲಿ ನೂರು ವರ್ಷಗಳಲ್ಲಿ ಕಂಡರಿಯದ ಪ್ರವಾಹ ಉಂಟಾಗಿದೆ. ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿಯಾಗಿ ಜನಸಾಮಾನ್ಯರ ಬದುಕು ಬೀದಿ ಪಾಲಾಗಿ ಸಂಕಷ್ಟದಲ್ಲಿದ್ದಾರೆ. ಅವರ ಪುನರ್ವಸತಿಗೆ ಸಂಬಂಧಿಸಿದಂತೆ ಜಿಲ್ಲೆಯ ಸಾರ್ವಜನಿಕರು ಸಹಾಯ ಹಸ್ತದ ನೆರವು ನೀಡಿ ಸರಕಾರದೊಂದಿಗೆ ಸಹಕರಿಸಬೇಕು’ ಎಂದು ಮನವಿ ಮಾಡಿದರು.

48.29 ಕೋಟಿ ರೂ. ಬಿಡುಗಡೆ
ಪ್ರವಾಹ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ಸರಕಾರದಿಂದ ಜಿಲ್ಲೆಗೆ ಈ ಸಾಲಿನಲ್ಲಿ ಒಟ್ಟು 48.29 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಇದರಡಿ 918 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.

ಆಕರ್ಷಕ ಪಥ ಸಂಚಲನ,
ಎನ್‌ಡಿಆರ್‌ಎಫ್‌ ಭಾಗಿ
ಪೊಲೀಸ್‌, ಎನ್‌ಸಿಸಿ, ಸ್ಕೌಟ್ಸ್‌ ಮತ್ತು ಗೈಡ್ಸ್‌, ಭಾರತ ಸೇವಾದಲ, ಕಾಲೇಜು ತಂಡಗಳು ಹಾಗೂ ಪೊಲೀಸ್‌ ವಾದ್ಯ ತಂಡಗಳು ಸೇರಿದಂತೆ ಒಟ್ಟು 20 ತಂಡಗಳಿಂದ ಆಕರ್ಷಕ ಪಥಸಂಚಲನ ಜರಗಿತು. ಪ್ರಾಕೃತಿಕ ವಿಕೋಪದ ರಕ್ಷಣಾ ಕಾರ್ಯಾಚರಣೆಗೆ ಆಗಮಿಸಿದ್ದ ಎನ್‌ಡಿಆರ್‌ಎಫ್‌ ತಂಡ ಮತ್ತು ಮೊದಲ ಬಾರಿ ಕರಾವಳಿ ಕಾವಲು ಪೊಲೀಸ್‌ ಪಡೆ ಜಿಲ್ಲಾ ಮಟ್ಟದ ಸ್ವಾತಂತ್ರ್ಯೋತ್ಸವದ ಪಥ ಸಂಚಲನದಲ್ಲಿ ಪಾಲ್ಗೊಂಡಿದೆ. ಪಥಸಂಚಲನದಲ್ಲಿ ಎನ್‌ಸಿಸಿ ಏರ್‌ವಿಂಗ್‌ ಸೀನಿಯರ್‌ ಪ್ರಥಮ ಹಾಗೂ ಎನ್‌ಸಿಸಿ ನೇವಲ್‌ ವಿಂಗ್‌ ದ್ವಿತೀಯ ಬಹುಮಾನ ಪಡೆದುಕೊಂಡಿತು.

Advertisement

ಜಿಲ್ಲಾ ಮಟ್ಟದಲ್ಲಿ ಎಸೆಸೆಲ್ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಪುತ್ತೂರು ಸರಕಾರಿ ಪ.ಪೂ. ಕಾಲೇಜಿನ ಶ್ರೀಲಕ್ಷ್ಮಿ ಎನ್‌., ಸುಳ್ಯ ಎಣ್ಮೂರು ಸರಕಾರಿ ಪ್ರೌಢಶಾಲೆಯ ಮಹಮ್ಮದ್‌ ಮಜೀದ್‌, ಗುರುವಾಯನಕೆರೆ ಸರಕಾರಿ ಪ್ರೌಢ ಶಾಲೆಯ ತೇಜಸ್ವಿ ಕೆ. ಅವರಿಗೆ ಲ್ಯಾಪ್‌ಟಾಪ್‌ ನೀಡಲಾಯಿತು. ತಾ| ಮಟ್ಟದಲ್ಲೂ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಿಸಲಾಯಿತು.

ಸಂಸದ ನಳಿನ್‌ ಕುಮಾರ್‌, ಶಾಸಕರಾದ ಯು.ಟಿ. ಖಾದರ್‌, ವೇದವ್ಯಾಸ ಕಾಮತ್‌, ಐವನ್‌ ಡಿ’ಸೋಜಾ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ, ಕಮಿಷನರ್‌ ಡಾ| ಹರ್ಷ, ಎಸ್‌ಪಿ ಲಕ್ಷ್ಮೀಪ್ರಸಾದ್‌, ಡಿಸಿಪಿ ಲಕ್ಷ್ಮೀಗಣೇಶ್‌, ಮನಪಾ ಆಯುಕ್ತ ಮಹಮ್ಮದ್‌ ನಜೀರ್‌, ತಹಶೀಲ್ದಾರ್‌ ಗುರುಪ್ರಸಾದ್‌ ಉಪಸ್ಥಿತರಿದ್ದರು.

ಮಳೆಗೆ ಮಣಿಯದ ಉತ್ಸಾಹ
ಧಾರಾಕಾರವಾಗಿ ಮಳೆಯ ನಡುವೆ ಸ್ವಾತಂತ್ರ್ಯೋತ್ಸವ ನಡೆಯಿತು. ಕೊಡೆಯ ಆಸರೆ
ಯಲ್ಲೇ ಧ್ವಜಾರೋಹಣ ನೆರವೇರಿಸಿದ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌ ಬಳಿಕ
ಧ್ವಜಸ್ತಂಭದ ಬಳಿ ನಿಂತು ಸಂದೇಶ ನೀಡಿದರು. ವಿಂಗ್‌ ಕಮಾಂಡರ್‌ ತೊಯ್ದುಕೊಂಡೇ ಗೌರವ ಸಲ್ಲಿಸಿದರು. ವಿವಿಧ ತಂಡಗಳು ಮಳೆಯ ನಡುವೆಯೇ ಪಥಸಂಚಲನ ನಡೆಸಿದವು. ಮಳೆ ವಿಪರೀತವಾದ್ದರಿಂದ ಗೌರವ ರಕ್ಷೆ ಮೊಟಕುಗೊಳಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next