Advertisement

ದ.ಕ ಜಿಲ್ಲೆ : 73 ಪಾಸಿಟಿವ್‌; ನಾಲ್ವರ ಸಾವು : ಆ್ಯಂಟಿಜೆನ್‌ ಟೆಸ್ಟ್‌  ಆರಂಭ

03:00 AM Jul 16, 2020 | Hari Prasad |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ 73 ಮಂದಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ.

Advertisement

ಮಧುಮೇಹ, ರಕ್ತದೊತ್ತಡದಿಂದ ಬಳಲುತ್ತಿದ್ದ ಸುಳ್ಯದ 60 ವಯಸ್ಸಿನ ಮಹಿಳೆ ಸಹಿತ ಜಿಲ್ಲೆಯ ನಾಲ್ವರು ಮೃತಪಟ್ಟಿದ್ದಾರೆ. ಒಟ್ಟು 104 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಜಿಲ್ಲೆಯಲ್ಲಿ ಕಳೆದ ವಾರದಿಂದೀಚೆಗೆ ಪ್ರತೀ ದಿನ 100ರ ಗಡಿ ದಾಟುತ್ತಿದ್ದ ಕೋವಿಡ್ 19 ಸೋಂಕಿತರ ಸಂಖ್ಯೆ ಕಳೆದ 2 ದಿನಗಳಿಂದ ಇಳಿಕೆ ಕಾಣುತ್ತಿದೆ.

ಮಂಗಳವಾರ 91 ಮಂದಿಗೆ ಕೋವಿಡ್ 19 ದೃಢಪಟ್ಟಿದ್ದರೆ, ಬುಧವಾರ 73ಕ್ಕೆ ಇಳಿಕೆಯಾಗಿದೆ.

ಬುಧವಾರ ವರದಿಯಾಗಿರುವ 73 ಪ್ರಕರಣಗಳ ಪೈಕಿ 11 ಮಂದಿ ಪ್ರಾಥಮಿಕ ಸಂಪರ್ಕ, 23 ಮಂದಿ ಇನ್‌ಫ್ಲೂಯೆನ್ಝಾ ಲೈಕ್‌ ಇಲ್‌ನೆಸ್‌ (ಐಎಲ್‌ಐ), ಮೂವರು ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ (ಸಾರಿ) ಪ್ರಕರಣಗಳಾಗಿವೆ. 32 ಮಂದಿ ಸೋಂಕಿತರ ಸಂಪರ್ಕವನ್ನು ಪತ್ತೆಹಚ್ಚಲಾಗುತ್ತಿದೆ.

Advertisement

ವಿದೇಶದಿಂದ ಬಂದ ಮೂವರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದ್ದು, ಒಬ್ಬರಿಗೆ ಅಂತರ್‌ ಜಿಲ್ಲಾ ಪ್ರಯಾಣದಿಂದ ಸೋಂಕು ಬಂದಿದೆ.

ಜಿಲ್ಲೆಯಲ್ಲಿ ಇಲ್ಲಿವರೆಗೆ 2,525 ಮಂದಿಗೆ ಸೋಂಕು ದೃಢಪಟ್ಟಿದ್ದು 1,089 ಮಂದಿ ಗುಣಮುಖರಾಗಿದ್ದಾರೆ. 1,379 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಡಿಎಚ್‌ಒ ಗುಣಮುಖ
ಜು. 2ರಂದು ಕೋವಿಡ್‌-19 ಸೋಂಕು ದೃಢವಾಗಿದ್ದ ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ವೆನ್ಲಾಕ್‌ನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

ಕೋವಿಡ್‌ ಆಸ್ಪತ್ರೆ: ಇಬ್ಬರು ಸಿಬಂದಿಗೆ ಪಾಸಿಟಿವ್‌
ಬೆಳ್ತಂಗಡಿ: ತಾಲೂಕಿನಲ್ಲಿ ಬುಧವಾರ ನಾಲ್ಕು ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ದಾಖಲಾಗಿವೆ. ಬೆಳ್ತಂಗಡಿ ಸರಕಾರಿ ಕೋವಿಡ್‌ ಆಸ್ಪತ್ರೆಯಲ್ಲಿ ಶುಶ್ರೂಷಕಿಯರಾಗಿರುವ ಧರ್ಮಸ್ಥಳ ಮತ್ತು ಕಡಬದ ಮಹಿಳೆಯರು, ತೆಂಕಕಾರಂದೂರಿನ ಯುವತಿ, ಪಣಿಜಾಲು ನಿವಾಸಿ ಮಂಗಳೂರಿನ ಉದ್ಯೋಗಿಗೆ ಸೋಂಕು ದೃಢಪಟ್ಟಿದೆ.

ಕ್ವಾರಂಟೈನ್‌ ನಿಯಮ ಉಲ್ಲಂಘನೆ ದೂರು
ಬೆಳ್ತಂಗಡಿ: ಕ್ವಾರಂಟೈನ್‌ ನಿಯಮ ಉಲ್ಲಂಘಿಸಿದ ನೆರಿಯದ ವ್ಯಕ್ತಿಯ ವಿರುದ್ಧ ದೂರು ದಾಖಲಾಗಿದೆ. ದುಬಾೖಯಿಂದ ಜು. 8ರಂದು ಆಗಮಿಸಿದ್ದ ಆಂಟೋನಿ ಅವರು ಬೆಳ್ತಂಗಡಿಯ ವಸತಿಗೃಹದಲ್ಲಿ ಕ್ವಾರಂಟೈನ್‌ ಆಗಿದ್ದು, ನಿಯಮ ಉಲ್ಲಂಘಿಸಿ ಸುತ್ತಾಡಿರುವ ಕುರಿತು ಮಾಹಿತಿ ಲಭ್ಯವಾಗಿತ್ತು. ಬೆಳ್ತಂಗಡಿ ಎಸ್‌ಐ ನಂದಕುಮಾರ್‌ ಎಂ.ಎಂ. ಅವರು ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರಗಿಸಿದ್ದಾರೆ.

ಆ್ಯಂಟಿಜೆನ್‌ ಟೆಸ್ಟ್‌ ಆರಂಭ
ಕೋವಿಡ್‌ ಟೆಸ್ಟ್‌ ಫಲಿತಾಂಶವನ್ನು ಶೀಘ್ರ ಪಡೆಯಬಹುದಾದ ಆ್ಯಂಟಿಜೆನ್‌ ಟೆಸ್ಟ್‌ ದ.ಕ. ಜಿಲ್ಲೆಯಲ್ಲಿ ಬುಧವಾರ ಆರಂಭಗೊಂಡಿದೆ. ಇದಕ್ಕಾಗಿ ಜಿಲ್ಲೆಗೆ 3,500 ಆ್ಯಂಟಿಜೆನ್‌ ಕೋವಿಡ್‌ ಟೆಸ್ಟ್‌ ಕಿಟ್‌ಗಳು ಬಂದಿವೆ. ಕೋವಿಡ್ 19 ಲ್ಯಾಬ್‌ಗಳಲ್ಲಿ ನಡೆಸಲಾಗುವ ಟೆಸ್ಟ್‌ನಲ್ಲಿ ವರದಿ ಸಿಗಲು ಕನಿಷ್ಠ ಎರಡು ದಿನ ಬೇಕಾಗುತ್ತದೆ.

ಆದರೆ ಆ್ಯಂಟಿಜೆನ್‌ ಟೆಸ್ಟ್‌ನಲ್ಲಿ 15-20 ನಿಮಿಷಗಳಲ್ಲಿ ವರದಿ ಕೈ ಸೇರಲಿದೆ. ಆದರೆ ಎಲ್ಲರಿಗೂ ಈ ಟೆಸ್ಟ್‌ ಮಾಡುವುದಿಲ್ಲ. ವಿದೇಶದಿಂದ ಬಂದು ಹೊಟೇಲ್‌ ಕ್ವಾರಂಟೈನ್‌ನಲ್ಲಿ ಇರುವವರು, ಹಲವು ರೋಗಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುವವರಿಗೆ ಈ ಟೆಸ್ಟ್‌ ಮಾಡಲಾಗುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ (ಪ್ರಭಾರ) ಡಾ| ರತ್ನಾಕರ್‌ ‘ಉದಯವಾಣಿ’ಗೆ ತಿಳಿಸಿದ್ದಾರೆ.

ಬಂಟ್ವಾಳ ತಾ|: ಮೂವರ ಬಲಿ
ವಿವಿಧ ಕಾಯಿಲೆಗಳಿಂದ ಬಳಲಿ ಮಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಂಟ್ವಾಳ ತಾಲೂಕಿನ ಮೂವರು ಮೃತಪಟ್ಟಿದ್ದು, ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭ ಅವರ ಗಂಟಲ ದ್ರವ ಪರೀಕ್ಷಿಸಿದಾಗ ಅವರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ.

ವಿಟ್ಲ ಒಕ್ಕೆತ್ತೂರಿನ 73 ವರ್ಷದ ವೃದ್ಧ, ಪಾಣೆಮಂಗಳೂರು ಜೈನರಪೇಟೆಯ 70 ವರ್ಷದ ಪುರುಷ ಹಾಗೂ ನರಿಂಗಾನದ 68 ವರ್ಷದ ಮಹಿಳೆ ಮೃತಪಟ್ಟವರು. ಜೈನರಪೇಟೆಯ ವ್ಯಕ್ತಿ ಕಿಡ್ನಿ ಮತ್ತು ಇತರ ಕಾಯಿಲೆಗಳಿಂದ ಬಳಲುತ್ತಿದ್ದು, ಕೆಲವು ದಿನಗಳ ಹಿಂದೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು.

ಒಕ್ಕೆತ್ತೂರಿನ ಪುರುಷ ನ್ಯುಮೋನಿಯಾದಿಂದ, ನರಿಂಗಾನದ ಮಹಿಳೆ ಡಯಾಬಿಟಿಸ್‌ ಸಹಿತ ಇತರ ಕಾಯಿಲೆಗಳಿಂದ ಬಳಲುತ್ತಿದ್ದರು. ಈ ಮೂವರಿಗೂ ಕೋವಿಡ್ 19 ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next