ಕೊಪ್ಪಳ: ಬಡ ಕುಟುಂಬಗಳು ಮೂರೂ ಹೊತ್ತು ನೆಮ್ಮದಿಯಿಂದ ಊಟ ಮಾಡಲಿ ಎಂಬ ಉದ್ದೇಶದಿಂದ ಸರ್ಕಾರ ಪ್ರತಿ ಕುಟುಂಬಕ್ಕೆ ಪಡಿತರ ಭಾಗ್ಯ ಕರುಣಿಸುತ್ತಿದೆ. ಆದರೆ ಇದನ್ನೆ ಬಂಡವಾಳ ಮಾಡಿಕೊಂಡ ದಲ್ಲಾಳಿಗಳು ಎಗ್ಗಿಲ್ಲದೇ ಅಕ್ರಮವಾಗಿ ಅಕ್ಕಿ ಮಾರಾಟ ಮಾಡುತ್ತಿದ್ದು, 10 ತಿಂಗಳಲ್ಲಿ 726 ಕ್ವಿಂಟಲ್ ಅಕ್ರಮ ಪಡಿತರ ಪತ್ತೆ ಮಾಡಲಾಗಿದೆ.
ಹೌದು. ಯಾರೂ ಹಸಿವೆಯಿಂದ ಬಳಲಬಾರದು ಎಂಬ ಉದ್ದೇಶದಿಂದ ಸರ್ಕಾರ ಪಡಿತರ ಅಕ್ಕಿಯನ್ನು ಅಂತ್ಯೋದಯ, ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬಕ್ಕೆ ವಿವಿಧ ಮಾನದಂಡಗಳಲ್ಲಿ ಪೂರೈಸುತ್ತಿದೆ. ಆದರೆ ಇತ್ತೀಚೆಗೆ ಇದನ್ನೇ ಬಂಡವಾಳನ್ನಾಗಿ ಮಾಡಿಕೊಂಡ ಪ್ರಕರಣ ಬೆಳಕಿಗೆ ಬರುತ್ತಿವೆ.
ಬಡವರಿಗೆ ಪೂರೈಕೆ ಮಾಡುವ ಅಕ್ಕಿಯನ್ನು ಹಣದ ಆಸೆ ತೋರಿಸಿ ದಲ್ಲಾಳಿಗಳು ಕುಟುಂಬವು ಮನೆ ಮನೆಗೆ ಸುತ್ತಾಡಿ ಸಂಗ್ರಹಿಸಿ ಅನ್ಯ ಜಿಲ್ಲೆ ಸೇರಿದಂತೆ ಅನ್ಯ ರಾಜ್ಯಗಳಿಗೆ ರವಾನೆ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿವೆ. ಇನ್ನೂ ಬಡ ಕುಟುಂಬವು ಹಣದ ಆಸೆಗೆ ಅಕ್ಕಿ ಮಾರುತ್ತಿರುವುದು ವಿಪರ್ಯಾಸದಸಂಗತಿ. ಜನರಿಂದ ಅಕ್ಕಿ ಪಡೆದ ದಲ್ಲಾಳಿಗಳು ಅದೇ ಅಕ್ಕಿಯನ್ನ ಫಾಲಿಶ್ ಮಾಡಿ ಮಾರುಕಟ್ಟೆಯಲ್ಲಿ ಹೆಚ್ಚಿನ ದರಕ್ಕೂ ಮಾರಾಟ ಮಾಡುತ್ತಿರುವ ದಂಧೆ ಸದ್ದಿಲ್ಲದೇ ನಡೆದಿದೆ. ಈ ಬಗ್ಗೆ ಆಹಾರ ಇಲಾಖೆ ಮಾತ್ರ ನಿಗಾ ಇಡದೇ ಇರುವುದು ವಿಪರ್ಯಾಸದ ಸಂಗತಿ. ಕೊಪ್ಪಳ, ಕುಷ್ಟಗಿ ಹಾಗೂ ಯಲಬುರ್ಗಾ ತಾಲೂಕಿನಲ್ಲಿ ಅಕ್ರಮ ಪಡಿತರ ಸಾಗಾಟ ಸ್ವಲ್ಪ ಮಟ್ಟಿಗೆ ಇದ್ದರೂ ಗಂಗಾವತಿ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ.
ಹಲವು ರೈಸ್ ಮಿಲ್ ಗಳಲ್ಲಿ ಇಂತಹ ದಂಧೆ ನಡೆಯುತ್ತಿದೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಈ ಹಿಂದೆ ರೈಸ್ ಮಿಲ್‌ನಲ್ಲೇ ಪಡಿತರವು ದೊರೆತಿರುವ ಉದಾಹರಣೆಗಳಿವೆ. ಅಚ್ಚರಿಯಂದರೆ ಗಂಗಾವತಿ ಭಾಗದಲ್ಲಿ ಬೆರಳೆಣಿಕೆ ಕೇಸ್ ದಾಖಲಾಗಿರುವುದು ಬೇಸರದ ಸಂಗತಿ. ಇನ್ನೂ ಆಹಾರ ಇಲಾಖೆಯು ಮಾತ್ರ ತಿಂಗಳಿಗೆ ಅಲ್ಲೊಂದು ಇಲ್ಲೊಂದು ದಾಳಿ ನಡೆಸುತ್ತಿದೆ ಎನ್ನುವ ಆಪಾದನೆ ಮಾತ್ರ ತಪ್ಪಿಲ್ಲ. ಕಳೆದ ಜನವರಿಯಿಂದ ಇಲ್ಲಿವರೆಗೂ ಆಹಾರ ಇಲಾಖೆ ಅ ಧಿಕಾರಿ ವರ್ಗ ಹಾಗೂ ಪೊಲೀಸ್, ತಹಶೀಲ್ದಾರ್ ನೇತೃತ್ವದಲ್ಲಿ ಬೆರಳೆಣಿಕೆಯ ದಾಳಿ ನಡೆದಿವೆ.
ದಾಳಿ ವೇಳೆ 726 ಕ್ವಿಂಟಲ್ ಅಕ್ರಮ ಪಡಿತರ ದೊರೆತಿದೆ. ಇದರಲ್ಲಿ ಕೊಪ್ಪಳ ತಾಲೂಕಿನಲ್ಲಿ 228.50 ಕ್ವಿಂಟಲ್ ಆಗಿದ್ದರೆ, ಕುಷ್ಟಗಿ ತಾಲೂಕಿನಲ್ಲಿ 240 ಕ್ವಿಂಟಲ್ ಅಕ್ರಮ ಪಡಿತರ ವಶಕ್ಕೆ ಪಡೆದಿದೆ. ಇತ್ತೀಚೆಗೆ ಕೊಪ್ಪಳ ತಾಲೂಕಿನ ಹೊಸ ಗೊಂಡಬಾಳ ಬಳಿ 150 ಕ್ವಿಂಟಲ್ ಪಡಿತರ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದೆ. ಇನ್ನೂ ಗಂಗಾವತಿ ತಾಲೂಕಿನಲ್ಲಿ 1260 ಲೀಟರ್ ಸೀಮೆ ಎಣ್ಣೆಯನ್ನು ವಶಕ್ಕೆ ಪಡೆಯಲಾಗಿದೆ.
ನ್ಯಾಯಬೆಲೆ ಅಂಗಡಿ ಮುಂದೆ ಠಿಕಾಣಿ: ವಿಚಿತ್ರವೆಂದರೆ ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರವನ್ನು ಪೂರೈಕೆ ಮಾಡುವ ವೇಳೆ ಏಜೆಂಟರು, ಮಧ್ಯವರ್ತಿಗಳು ಹಾಗೂ ದಲ್ಲಾಳಿಗಳು ಗೊಬ್ಬರದ ಚೀಲವನ್ನು ಪಕ್ಕದಲ್ಲೇ ಇಟ್ಟು ಅಕ್ಕಿಯನ್ನು ಖರೀದಿ ಮಾಡುತ್ತಿರುವುದು ಜಿಲ್ಲೆಯಲ್ಲಿ ಗುಟ್ಟಾಗಿ ಉಳಿದಿಲ್ಲ. ಪ್ರತಿ ಕೆ.ಜಿಗೆ 10 ರೂ. ನಂತೆ ಖರೀದಿ ಮಾಡಲಾಗುತ್ತಿದೆ. ಬಡ ಕುಟುಂಬ ದುಡ್ಡಿನ ಆಸೆಗೆ ಪಡಿತರವನ್ನು ಮಾರಿಕೊಳ್ಳುತ್ತಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿ.
ಆಹಾರ ಇಲಾಖೆಯ ಇನ್ನಾದರೂ ಈ ಬಗ್ಗೆ ಗಮನಿಸಬೇಕು. ಜಿಲ್ಲೆಯಲ್ಲಿ ನಡೆಯುವ ಅಕ್ರಮ ಪಡಿತರ ಸಾಗಾಟದ ಬಗ್ಗೆ ನಿಗಾ ಇಡಬೇಕಿದೆ. ಇಲ್ಲದಿದ್ದರೆ ಬಡವರಿಗೆ ತಲುಪಬೇಕಾದ ಪಡಿತರವು ಅನ್ಯರ ಪಾಲಾಗುವುದರಲ್ಲಿ ಎರಡು ಮಾತಿಲ್ಲ.
-ದತ್ತು ಕಮ್ಮಾರ