ಢಾಕಾ:ಅತ್ಯಂತ ಭೀಕರ ಎಂದೇ ಕುಖ್ಯಾತಿಗಳಿಸಿಕೊಂಡಿರುವ ಸೂಪರ್ ಸೈಕ್ಲೋನ್ ಅಂಫಾನ್ ಚಂಡಮಾರುತ ನೆರೆಯ ಬಾಂಗ್ಲಾದೇಶದಲ್ಲಿ ಭಾರೀ ಹಾನಿ ಸೃಷ್ಟಿಸಿದ್ದರೆ ಮತ್ತೊಂದೆಡೆ ಆಂಫಾನ್ ಚಂಡಮಾರುತಕ್ಕೆ ಪಶ್ಚಿಮಬಂಗಾಳದಲ್ಲಿ 72 ಜನರು ಸಾವನ್ನಪ್ಪಿರುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ತಿಳಿಸಿದ್ದಾರೆ.
72 ಜನರಲ್ಲಿ 15 ಮಂದಿ ಕೋಲ್ಕತಾದವರು ಎಂದು ತಿಳಿಸಿದ್ದಾರೆ. ಆಂಫಾನ್ ಭೀಕರ ಚಂಡಮಾರುತಕ್ಕೆ ಈವರೆಗೆ ಸಾವನ್ನಪ್ಪಿದವರ ಸಂಖ್ಯೆ 72. ನಾನು ಯಾವತ್ತೂ ಇಂತಹ ವಿಪತ್ತನ್ನು ಕಂಡಿರಲಿಲ್ಲವಾಗಿತ್ತು. ಸಾವಿನ ಪ್ರಮಾಣ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡಿ, ಪರಿಸ್ಥಿತಿಯನ್ನು ವೀಕ್ಷಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಬ್ಯಾನರ್ಜಿ ಈ ಸಂದರ್ಭದಲ್ಲಿ ಹೇಳಿದರು.
ಆಂಫಾನ್ ಚಂಡಮಾರುತದ ಹೊಡೆತಕ್ಕೆ ಸಿಲುಕಿ ಸಾವನ್ನಪ್ಪಿದವರ ಕುಟುಂಬಕ್ಕೆ 2ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.
ಬಂಗಾಲದ ದಿಘಾದಲ್ಲಿ ಅಪ್ಪಳಿಸಿದ ಚಂಡಮಾರುತ ಅನಂತರದಲ್ಲಿ, ಇನ್ನಷ್ಟು ವೇಗ ಪಡೆದುಕೊಂಡಿತು. ಸಂಜೆ ವೇಳೆಗೆ 190 ಕಿ.ಮೀ. ವೇಗ ಪಡೆದುಕೊಂಡ ಪರಿಣಾಮ ಭಾರೀ ಗಾಳಿ ಮತ್ತು ಮಳೆಯಿಂದಾಗಿ ಪಶ್ಚಿಮ ಬಂಗಾಲ ಮತ್ತು ಒಡಿಶಾದಲ್ಲಿ ಅಪಾರ ಹಾನಿಯಾಗಿತ್ತು.
ಕೆಲವೆಡೆ ಮನೆಗಳು ಕುಸಿದು ಬಿದ್ದಿದ್ದರೆ, ಇನ್ನು ಕೆಲವೆಡೆ ಮರಗಳು ಬುಡಮೇಲಾಗಿವೆ. ಸಾವಿರಾರು ವಿದ್ಯುತ್ ಕಂಬಗಳು ಮುರಿದುಬಿದ್ದಿವೆ. ಅತ್ತ ಬಾಂಗ್ಲಾದೇಶದ ಕರಾವಳಿಯಲ್ಲೂ ಚಂಡಮಾರುತದ ಅಬ್ಬರದಿಂದಾಗಿ ಭಾರೀ ಹಾನಿಯುಂಟಾಗಿದೆ. ಚಂಡಮಾರುತದ ಪರಿಣಾಮ ಅಸ್ಸಾಂ ಮತ್ತು ಮೇಘಾಲಯಗಳಿಗೂ ವ್ಯಾಪಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದರು.