ಧಾರವಾಡ: ಜಿಲ್ಲೆಯಾದ್ಯಂತ ಒಟ್ಟು 71 ಪರಿಹಾರ ಕೇಂದ್ರಗಳನ್ನು ಸ್ಥಾಪಿಸಿ, 7650 ಕುಟುಂಬಗಳಿಗೆ ಸೇರಿದ 27,699 ಜನರನ್ನು ಜಿಲ್ಲಾಡಳಿತ ಸ್ಥಳಾಂತರಿಸಿದೆ.
ಅಣ್ಣಿಗೇರಿ ತಾಲೂಕಿನಲ್ಲಿ ಶಿಶ್ವಿನಹಳ್ಳಿ, ನಾಗರಹಳ್ಳಿ; ಕುಂದಗೋಳ ತಾಲೂಕಿನಲ್ಲಿ ಹರ್ಲಾಪುರ, ಹಂಚಿನಾಳ, ಸಂಶಿ, ಬೆಟದೂರ, ಶಿರೂರ, ಹಿರೇಹರಕುಣಿ, ಭರದ್ವಾಡ, ಚಾಕಲಬ್ಬಿ, ಯರಗುಪ್ಪಿ, ಬಾಗವಾಡ, ಕಡಪಟ್ಟಿ, ಅಲ್ಲಾಪುರ, ಕುಂದಗೋಳ, ಹೊಸಳ್ಳಿ, ದ್ಯಾವನೂರ, ಬಿಳೇಬಾಳನಲ್ಲಿ ಪರಿಹಾರ ಕೇಂದ್ರ ತೆರೆದಿದ್ದು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 16 ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
Advertisement
ಧಾರವಾಡ ತಾಲೂಕಿನಲ್ಲಿ ನಗರ ವ್ಯಾಪ್ತಿಯ ಸಪ್ತಾಪುರದ ಭಾವಿಕಟ್ಟಿ ಪ್ಲಾಟ್, ತಡಸಿನಕೊಪ್ಪದ ಸಮುದಾಯಭವನ, ರಾಜೀವಗಾಂಧಿ ನಗರ, ಹಾರೋಬೆಳವಡಿ, ಕಬ್ಬೆನೂರ ಹಾಗೂ ಕಲ್ಲೇ ಗ್ರಾಮ; ಅಳ್ನಾವರ ತಾಲೂಕಿನಲ್ಲಿ ಉಮಾಭವನ, ಬಿಸಿಎಂ ಹಾಸ್ಟೆಲ್; ಹುಬ್ಬಳ್ಳಿ ನಗರ ತಾಲೂಕಿನಲ್ಲಿ ಗಾಮನಗಟ್ಟಿ; ಹುಬ್ಬಳ್ಳಿ ಗ್ರಾಮೀಣ ತಾಲೂಕಿನಲ್ಲಿ ಕಿರೇಸೂರ, ಹೆಬಸೂರ, ಭಂಡಿವಾಡ, ಶಿರಗುಪ್ಪಿ-2, ಮಂಟೂರ, ಇಂಗಳಹಳ್ಳಿ, ಉಮಚಗಿ; ನವಲಗುಂದ ತಾಲೂಕಿನಲ್ಲಿ ಹನಸಿ, ಶಿರಕೋಳ, ಮೊರಬ, ಶಿರೂರ, ಆಹೆಟ್ಟಿ, ಗುಮ್ಮಗೋಳ, ಬ್ಯಾಲ್ಯಾಳ, ಅಳಗವಾಡಿ, ತಿರ್ಲಾಪುರ, ಜಾವೂರ, ಬಳ್ಳೂರ, ಆರೇಕುರಟ್ಟಿ, ನವಲಗುಂದ, ಕಾಲವಾಡ, ಪಡೇಸೂರ, ಶ್ಯಾನವಾಡ, ಗೊಬ್ಬರಗುಂಪಿ, ಯಮನೂರ, ಕೊಂಗವಾಡ, ಹೆಬ್ಟಾಳದಲ್ಲಿ ಪರಿಹಾರ ಕೇಂದ್ರ ತೆರೆಯಲಾಗಿದೆ.
ತಾವೇ ಗಂಜಿ ಕೇಂದ್ರ ಸ್ಥಾಪಿಸಿಕೊಂಡ ದಾಸನಕೊಪ್ಪ ಗ್ರಾಮಸ್ಥರು:
ಕಳೆದೊಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ತಾಲೂಕಿನ ದಾಸನಕೊಪ್ಪ ಗ್ರಾಮದ 10ಕ್ಕೂ ಹೆಚ್ಚು ಕುಟುಂಬಗಳು ಅಕ್ಷರಶಃ ಬೀದಿಗೆ ಬಿದ್ದಿವೆ. ಮನೆಗಳನ್ನು ಕಳೆದುಕೊಂಡ ಗ್ರಾಮಸ್ಥರು ತಾತ್ಕಾಲಿಕವಾಗಿ ತಾವೇ ಸಂತ್ರಸ್ತರ ಪರಿಹಾರ ಕೇಂದ್ರ ಸ್ಥಾಪಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಗ್ರಾಮದ ಫಕ್ಕೀರಪ್ಪ ಓಲೇಕಾರ, ಫಕ್ಕೀರಪ್ಪ ಅಂಗಡಿ, ಷಣ್ಮುಖ ಅಂಗಡಿ, ಗಂಗಪ್ಪ ಪೂಜಾರ, ಮಡಿವಾಳಪ್ಪ ಪೂಜಾರ, ಉಳವಪ್ಪ ಧಾರವಾಡ, ಬಸಮ್ಮ ಧಾರವಾಡ, ಇಮಾಂಬಿ, ಮಂಜುನಾಥ ಗೋಡಿ ಹಾಗೂ ಇತರರ ಮನೆಗಳು ಕುಸಿದು ಬಿದ್ದಿದ್ದು, ಗ್ರಾಮದ ಅಂಗನವಾಡಿಯಲ್ಲಿ ಆಶ್ರಯ ಪಡೆದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ತಹಸೀಲ್ದಾರ್ ಪ್ರಕಾಶ ಕುದರಿ, ದಾಸನಕೊಪ್ಪ ಗ್ರಾಮದಲ್ಲಿ ಆ.9ರಿಂದ ಸಂತ್ರಸ್ತರ ಪರಿಹಾರ ಕೇಂದ್ರ ತೆರೆಯಲಾಗುವುದು. ಈ ಬಗ್ಗೆ ಕಂದಾಯ ನಿರೀಕ್ಷಕ ಹಾಗೂ ಗ್ರಾಮ ಲೆಕ್ಕಾಧಿಕಾರಿಗೆ ನಿರ್ದೇಶನ ನೀಡಿದ್ದೇನೆ ಎಂದಿದ್ದಾರೆ.
ಮೃತರ ಸಂಖ್ಯೆ ಮೂರಕ್ಕೆ: ಕುಂದಗೋಳ ತಾಲೂಕಿನ ಭರದ್ವಾಡ ಗ್ರಾಮದ ಕಾಶಯ್ಯ ಹೊಸಳ್ಳಿಮಠ (57)ಹಳ್ಳ ದಾಟುತ್ತಿದ್ದಾಗ ಕೊಚ್ಚಿ ಹೋಗಿ ಮೃತಪಟ್ಟ ಬೆನ್ನಲ್ಲೇ ಹುಬ್ಬಳ್ಳಿ ಗಾಮನಗಟ್ಟಿ ಗ್ರಾಮದಲ್ಲಿ ಮನೆ ಕುಸಿದು ಚೆನ್ನಮ್ಮ ರಾಮಪ್ಪ ವಾಲೀಕರ (65), ಧಾರವಾಡ ತಾಲೂಕಿನ ಮುರಕಟ್ಟಿ ಗ್ರಾಮದ ಬಳಿ ಬೇಡ್ತಿ ಹಳ್ಳದಲ್ಲಿ ಸಿಲುಕಿ ವಾಹನ ಚಾಲಕ ಹಳಿಯಾಳದ ಲಕ್ಷ್ಮೀಕೇರಿ ಗಲ್ಲಿಯ ಮಹ್ಮದಜಮೀಲ ಮುಕ್ತುಮಸಾಬ ನದಾಫ (36 )ಮೃತಪಟ್ಟಿದ್ದಾನೆ. ಜಿಲ್ಲೆಯಲ್ಲಿ ಈಗ ಸಾವಿನ ಸಂಖ್ಯೆ ಮೂರಕ್ಕೆ ಏರಿದೆ. ಬೇಕರಿ ವ್ಯಾಪಾರ ಮಾಡಕೊಂಡಿದ್ದ ಮಹ್ಮದಜಮೀಲ ಹಳಿಯಾಳದಿಂದ ತನ್ನ ಟಾಟಾ ಏಸ್ ವಾಹನ ತೆಗೆದುಕೊಂಡು ಬುಧವಾರ ರಾತ್ರಿ ಧಾರವಾಡದತ್ತ ಹೊರಟಾಗ ಧಾರವಾಡ ತಾಲೂಕಿನ ಮುರಕಟ್ಟಿ ಕ್ರಾಸ್ ಬಳಿ ಬೇಡ್ತಿ ಹಳ್ಳದಲ್ಲಿ ವಾಹನ ಸಮೇತ ಕೊಚ್ಚಿ ಹೋಗಿ ಮೃತಪಟ್ಟಿದ್ದಾನೆ.