ಬೀದರ್: ಇನೋವಾ ಕಾರಿನಲ್ಲಿಟ್ಟಿದ್ದ ಮಾಲೀಕನ 71 ಲಕ್ಷ ರೂ. ನಗದು ಹಣದ ಜತೆಗೆ ಕಾರನ್ನು ಕಳುವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಚಾಲಕನನ್ನು ಜಿಲ್ಲಾ ಪೊಲೀಸರ ತಂಡ ವಶಕ್ಕೆ ಪಡೆದಿದೆ. ಮಾತ್ರವಲ್ಲದೆ ಆತನಿಂದ 53 ಲಕ್ಷ ರೂ. ಮೌಲ್ಯದ ನಗದು ಹಣ ಮತ್ತು ಕಾರು ಜಪ್ತಿ ಮಾಡಿಕೊಂಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ತುರುವನೂರ ಗ್ರಾಮದ ಮಾರುತಿ ರವಿ ಸೂಧಾ ಎಂಬಾತನೇ ಕಳ್ಳತನ ಮಾಡಿ ಈಗ ಪೊಲೀಸರ ಅತಿಥಿಯಾಗಿರುವ ಕಾರು ಚಾಲಕ. ಬಳ್ಳಾರಿ ನಗರದ ಬಸವೇಶ್ವರ ಕಾಲೋನಿಯ ವ್ಯಾಪಾರಿ ಆಗಿರುವ ರಾಜೇಶ ಸಿದ್ದಪ್ಪಾ ಬೆಳ್ಳಕ್ಕಿ ಎಂಬುವರೇ ಕಳೆದ 2018ರ ಜೂನ್ 10ರಂದು ಕಾರು ಹಾಗೂ ಹಣ ಕಳೆದುಕೊಂಡಿದ್ದರು. ಎರಡು ವರ್ಷಗಳ ನಂತರ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜೇಶ ಬೆಳ್ಳಕ್ಕಿ ತಮ್ಮ ಇನೋವಾ ಕಾರಿನಲ್ಲಿ ಬಳ್ಳಾರಿಯಿಂದ ಬೀದರ್ ಗೆ ಬಂದು ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಬೀಜ ಮಾರಾಟ ಮಾಡಿದ ಹಣವನ್ನು ಸಂಗ್ರಹಿಸಿಕೊಂಡು, ನಂತರ ಮನ್ನಾಎಖ್ಖೇಳ್ಳಿ ಗ್ರಾಮದ ಡಿಸಿಸಿ ಬ್ಯಾಂಕ್ ಎದುರಗಡೆ ಕಾರ ನಿಲ್ಲಿಸಿ ಸಮೀಪದಲ್ಲಿದ್ದ ರೈತ ಸಂಪರ್ಕಕ್ಕೆ ಕೇಂದ್ರಕ್ಕೆ ಹಣ ಸಂಗ್ರಹಿಸಲು ಹೋಗಿದ್ದರು. ಈ ವೇಳೆ ಬೀಜ ಮಾರಾಟ ಮಾಡಿ ಸಂಗ್ರಹಿಸಿ ಬ್ಯಾಗ್‌ನಲ್ಲಿ 71 ಲಕ್ಷ ರೂ. ಇಟ್ಟಿದ್ದರು. ಆದರೆ, ಮರಳಿ ಬರುವಾಗ ಕಾರು ಚಾಲಕ ಮಾರುತಿ ಸೂಧಾ, ಕಾರಿನೊಂದಿಗೆ 71 ಲಕ್ಷ ರೂ. ನಗದು ಹಣ ಕಳುವು ಮಾಡಿಕೊಂಡು ಹೋಗಿದ್ದ. ಈ ಕುರಿತು ಮನ್ನಾಎಖ್ಖೆಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ನಡೆದು ಎರಡು ವರ್ಷಗಳಾದರೂ ಆರೋಪಿ ಪತ್ತೆಯಾಗದ ಹಿನ್ನಲೆಯಲ್ಲಿ ಎಸ್‌ಪಿ ಡಿ.ಎಲ್ ನಾಗೇಶ, ಹೆಚ್ಚುವರಿ ಎಸ್‌ಪಿ ಡಾ. ಗೋಪಾಲ ಮಾರ್ಗದರ್ಶನದಲ್ಲಿ ಸಿಪಿಐ ಶರಣಬಸವೇಶ್ವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಸದರಿ ತಂಡ ಕಳೆದ 2 ತಿಂಗಳು ಕಾಲ ಪ್ರಯತ್ನಪಟ್ಟು ಆರೋಪಿತ ಮಾರುತಿಯನ್ನು ಸೆ. 29ರಂದು ಬಂಧಿಸಿದ್ದಾರೆ.
ತೆಲಂಗಾಣಾದ ಬೆಳ್ಳೂರ್ ಗ್ರಾಮದಲ್ಲಿ ವಾಸವಾಗಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಚಾಲಕ ಮಾರುತಿಯನ್ನು ದಸ್ತಗಿರಿ ಮಾಡಿ, ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಆರೋಪಿ ಕಳುವು ಮಾಡಿಕೊಂಡು ಹೋಗಿದ್ದ 71 ಲಕ್ಷ ರೂ. ನಗದು ಹಣದಲ್ಲಿ ಖರೀದಿಸಿದ್ದ ಬಲೋನೋ ಕಾರು ಹಾಗೂ 47 ಲಕ್ಷ ರೂ. ನಗದು ಸೇರಿ 53 ಲಕ್ಷ ರೂ. ಮೌಲ್ಯದ ಹಣ ಮತ್ತು ಕಾರು ಜಪ್ತಿ ಮಾಡಿಕೊಂಡಿದ್ದಾರೆ.
ಪಿಎಸ್‌ಐಗಳಾದ ಮಹಾಂತೇಶ ಲಂಬಿ, ಮಡಿವಾಳಪ್ಪ, ಸಿಬ್ಬಂದಿಗಳಾದ ಈರಪನ್ನಾ, ಮಹ್ಮದ್ ಅಕ್ರಮ, ವಿಕ್ರಮ್, ಮಾರುತಿ ರೆಡ್ಡಿ, ಹನುಮೇಶ, ವಿಜಯಕುಮಾರ ಬರ್ಮಾ, ಶಿವಶರಣ, ರಾಜಕುಮಾರ, ವಿಜಯಕುಮಾರ ಮತ್ತು ಬಾಲಾಜಿ ವಿಶೇಷ ತಂಡದಲ್ಲಿದ್ದು, ತಂಡದ ಕರ್ತವ್ಯನ್ನು ಎಸ್‌ಪಿ ಡಿ.ಎಲ್ ನಾಗೇಶ ಶ್ಲಾಘಿಸಿದ್ದಾರೆ.