ಪಣಜಿ: ‘ಎಪ್ಪತ್ತರ ದಶಕ ಹಿಂದಿ ಸಿನಿಮಾ ಸುವರ್ಣ ಯುಗ’
ಹೀಗಂದವರು: ಹಿಂದಿ ಚಿತ್ರ ನಿರ್ದೇಶಕ ರಾಹುಲ್ ರವೇಲ್
ಸಂದರ್ಭ: ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವದ ಸಂವಾದ.
ವಿಷಯ: 50, 60 ಹಾಗೂ 70 ರ ದಶಕದಲ್ಲಿ ಸಿನಿಮಾ ನಿರ್ಮಾಣ.
‘ನೀವು ಏನೇ ಹೇಳಿ, ಎಪ್ಪತ್ತರ ದಶಕ ಹಿಂದಿ ಸಿನಿಮಾದ ಸುವರ್ಣ ಯುಗ. ಆ ಸಂದರ್ಭದಲ್ಲಿ ಹೊಸ ಆಲೋಚನೆ, ಹೊಸ ಪ್ರಯೋಗಗಳು ಹಾಗೂ ಹೊಸ ಬಗೆಯ ಚಿತ್ರಗಳು ಮೂಡಿ ಬಂದವು. ವಿಶೇಷವಾಗಿ ಸಾಹಸ ಪ್ರಧಾನವಾದ ಧಾರೆ ಆರಂಭವಾಗಿದ್ದೇ ಆ ಹೊತ್ತಿನಲ್ಲಿ.
ಒಂದು ಚಿತ್ರಕ್ಕೆ ಹೊರಗೆಲ್ಲೋ ಹೋಗಿ ಠಿಕಾಣಿ ಹೂಡಿ 30, 40 ದಿನಗಳ ಚಿತ್ರೀಕರಣ ಮಾಡುವುದು ಆ ಸಂದರ್ಭದಲ್ಲಿ ಎಣಿಸಲೂ ಕಷ್ಟ. ಅವೆಲ್ಲವೂ ಸಾಧ್ಯವಾಗಿದ್ದು ಆಗಲೇ. ದೇವ್ ಆನಂದ್ ರ ಜಾನಿ ತೇರಾ ನಾಮ್ ಆ್ಯಕ್ಷನ್ ಪ್ರಧಾನವಾದ ಚಿತ್ರಗಳ ಸಾಧ್ಯತೆಯನ್ನು ಬೆಳೆಸಿತು. ಜತೆಗೆ ಹಿಂದಿ ಚಿತ್ರರಂಗವೂ ವ್ಯವಹಾರ ವಹಿವಾಟಿನಲ್ಲೂ ಬೆಳೆಯತೊಡಗಿತು. ಆ ಹೊತ್ತಿಗೆ ಅಸಾಂಪ್ರದಾಯಿಕ ನಾಯಕ (ಆಗಿನವರೆಗಿನ ನಾಯಕ ನಟನ ಬಗ್ಗೆ ಇದ್ದ ಅಭಿಪ್ರಾಯಕ್ಕಿಂತ ಭಿನ್ನವಾಗಿ) ಎನ್ನುವ ಬಗೆಯ ನಾಯಕ ನಟ ಅಮಿತಾಬ್ ಬಚ್ಚನ್ ಮೂಡಿ ಬಂದರು ಜಂಜೀರ್ ಮೂಲಕ. ರಾಜ್ ಕಪೂರ್ ರ ಬಾಬಿ ಹೀಗೆ ಹತ್ತಾರು ಪ್ರಯೋಗಗಳ ನಡೆದವು. ಈ ಎಲ್ಲ ಚಿತ್ರಗಳು ಚಿತ್ರರಂಗಕ್ಕೆ ಜನಪ್ರಿಯತೆ ತಂದುಕೊಟ್ಟಿತಲ್ಲದೇ, ಮೌಲ್ಯವನ್ನೂ ಹೆಚ್ಚಿಸುತ್ತಾ ಹೋಯಿತು. ಯಶ್ ಚೋಪ್ರಾರಂಥವರು ಹೊಸ ಸಿನಿಮಾಗಳತ್ತ ಮುಖ ಮಾಡಿದರು. ಹಾಗಾಗಿಯೇ ಎಪ್ಪತ್ತರ ದಶಕ ಸುವರ್ಣ ಯುಗ ಎಂದು ಪ್ರತಿಪಾದಿಸಿದರು ರಾಹುಲ್.
ಇದನ್ನೂ ಓದಿ:ಇಫಿ 2021 ಸ್ಪೆಷಲ್: ಹೊಸ ಬಗೆಯ ಚಿತ್ರೋತ್ಸವ: ಚಪ್ಪಾಳೆ ತಟ್ಟಬೇಕೋ, ಬೇಡವೋ?
ಆರೋಗ್ಯಕರ ಸ್ಪರ್ಧೆ
ಆಗ ಚಿತ್ರರಂಗದಲ್ಲಿ ಇದ್ದದ್ದು ಆರೋಗ್ಯಕರ ಸ್ಪರ್ಧೆ. ಅದರಲ್ಲೂ ನಾಯಕ ನಟರ ಮಧ್ಯೆ ಯಾವುದೆ ದ್ವೇಷವಿರಲಿಲ್ಲ. ಪ್ರತಿ ನಟನೂ ಒಬ್ಬರಿಗಿಂತ ಮತ್ತೊಬ್ಬರು ತಮ್ಮ ಶಕ್ತಿ ಸಾಮರ್ಥ್ಯದಿಂದಲೇ ಬೆಳೆಯುತ್ತಿದ್ದರು. ಅದು ಆರೋಗ್ಯಕರ ಸ್ಪರ್ಧೆಗೆ ಕಾರಣವಾಗಿತ್ತು. ರಾಜ್‌ಕಪೂರ್, ದೇವ್ ಆನಂದ್ ಹಾಗೂ ದಿಲೀಪ್ ಕುಮಾರ್ ಅಂಥವರು ಒಟ್ಟಿಗೇ ಹೋಟೆಲ್‌ನಲ್ಲಿ ಕುಳಿತು ಪರಸ್ಪರ ಮಾತನಾಡುತ್ತಿದ್ದರು ಎನ್ನುವುದೇ ಇಂದಿನ ಹೊತ್ತಿನಲ್ಲಿ ಅಚ್ಚರಿ ಎಂದರು ರಾಹುಲ್ ರವೇಲ್.
ಚಿತ್ರರಸಿಕರ ಬೆಂಬಲ ಹೊಸ ಪ್ರಯೋಗಗಳಿಗೆ ಇದ್ದದ್ದು ಸುಳ್ಳಲ್ಲ. ‘ಏಕ್ ದುಜೆ ಕೇ ಲಿಯೆ’ ಎನ್ನುವ ಸಿನಿಮಾದಲ್ಲಿ ನಾಯಕನಿಗೆ ತಮಿಳು ಬಿಟ್ಟರೆ ಹಿಂದಿ ಬರುವುದಿಲ್ಲ, ನಾಯಕಿಗೆ ಹಿಂದಿ ಬಿಟ್ಟರೆ ತಮಿಳು ಬರೋದಿಲ್ಲ. ಆ ಸಂಯೋಜನೆಯೇ ಹೊಸತೆನಿಸಿತು. ಜನರು ಸ್ವೀಕರಿಸಿದರು. ನನ್ನ ಗುರು ರಾಜ್ ಕಪೂರ್ ಪ್ರತಿಪಾದಿಸಿದಂತೆ, ಒಂದು ಅತ್ಯಂತ ಒಳ್ಳೆಯ ಚಿತ್ರಕಥೆ ಮಾತ್ರ ಚಿತ್ರವನ್ನು ಯಶಸ್ಸಿಗೆ ತುದಿಗೆ ಕೊಂಡೊಯ್ಯಬಲ್ಲದು ನನ್ನ ನಂಬಿಕೆ. ಅದು ಇಂದಿಗೂ ಪ್ರಸ್ತುತ ಎಂದು ವಿಶ್ಲೇಷಿಸಿದರು ರಾಹುಲ್. ಕೊರೊನಾ ಹಿನ್ನೆಲೆಯಲ್ಲಿ ಸಂವಾದಗಳು ವರ್ಚುಯಲ್ ರೂಪದಲ್ಲಿ ನಡೆಯುತ್ತಿವೆ.