Advertisement

700 ಮೀ. ಉದ್ದದ ಸುರಂಗ ನಿರ್ಮಾಣ

09:10 AM Apr 16, 2018 | Team Udayavani |

ಮಹಾನಗರ: ನಗರದ ಏಕೈಕ ರೈಲ್ವೇ ಸುರಂಗ ಮಾರ್ಗ ಇರುವ ಕುಲಶೇಖರದಲ್ಲಿ 700 ಮೀ. ಉದ್ದದ ಇನ್ನೊಂದು ಸುರಂಗ ಕೊರೆಯುವ ಕಾಮಗಾರಿ ಬಿರುಸಿನಿಂದ ನಡೆಯುತ್ತಿದೆ. ರಾ.ಹೆ. 169 ಹಾಗೂ ಜನವಸತಿ ಪ್ರದೇಶಕ್ಕೆ ಸಮೀಪವೇ ಈ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷಾ ಕ್ರಮಗಳನ್ನು ದಕ್ಷಿಣ ರೈಲ್ವೇ ವಿಭಾಗ ಕೈಗೊಂಡಿದೆ. ಕಾಮಗಾರಿ ಮುಂದಿನ 2 ವರ್ಷಗಳ ಒಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

Advertisement

ಮಂಗಳೂರು- ಮುಂಬಯಿ ರೈಲು ಪ್ರಯಾಣಿಕರ ಬಹು ಬೇಡಿಕೆಯಾಗಿರುವ ಕೊಂಕಣ ರೈಲ್ವೇ ಹಳಿ ದ್ವಿಗುಣ ಯೋಜನೆ ಹಾಗೂ ವಿದ್ಯುದೀಕರಣ ಕಾಮಗಾರಿಯ ಅಂಗವಾಗಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಪಾಲಕ್ಕಾಡ್‌ ದಕ್ಷಿಣ ರೈಲ್ವೇ ವಿಭಾಗದ ವತಿಯಿಂದ ಕೇರಳದ ಶೋರ್ನೂರು ಮತ್ತು ಮಂಗಳೂರು ನಡುವಣ 328 ಕಿ.ಮೀ. ರೈಲು ಮಾರ್ಗದ ವಿದ್ಯುದೀಕರಣ ಕಾಮಗಾರಿ ಈಗಾಗಲೇ ಮಂಗಳೂರು ಜಂಕ್ಷನ್‌ ವರೆಗೆ (ಕಂಕನಾಡಿ) ಪೂರ್ಣಗೊಂಡಿದ್ದು, ಸುರತ್ಕಲ್‌ನ ತೋಕೂರುವರೆಗೆ ಮುಂದುವರಿಯಲಿದೆ. ಇದರ ಮಧ್ಯೆ ಕುಲಶೇಖರದಲ್ಲಿ ರೈಲ್ವೇ ಸುರಂಗ ಕಾಮಗಾರಿ ಆರಂಭಗೊಂಡಿದೆ. 

ಹಗಲು ರಾತ್ರಿ ಕೆಲಸ
ಪ್ರಸ್ತುತ ಇಲ್ಲಿರುವ ಸುರಂಗ 1960ರಲ್ಲಿ ನಿರ್ಮಿತವಾದದ್ದು. ಇದಕ್ಕೆ ಹೊಂದಿಕೊಂಡಂತೆ ಹೊಸ ಸುರಂಗ ಮಾರ್ಗ ರಚಿಸಲಾಗುತ್ತಿದೆ. ಒಂದು ತುದಿ ಕುಲಶೇಖರ ರಾ.ಹೆ. ಅಂಚಿನಿಂದ ಆರಂಭಗೊಂಡರೆ ಇನ್ನೊಂದು ತುದಿ ಕನ್ನಗುಡ್ಡೆಯ ಕೊಂಗೂರುಮಠ ವ್ಯಾಪ್ತಿಯಲ್ಲಿದೆ. ರಾತ್ರಿ ಹಾಗೂ ಹಗಲು ಪ್ರತ್ಯೇಕ ಪಾಳಿಗಳಲ್ಲಿ ಕಾರ್ಮಿಕರು ಕೆಲಸ ನಡೆಸುತ್ತಿದ್ದಾರೆ.

ಮಣ್ಣು ಬೀಳದಂತೆ ಮುಂಜಾಗರೂಕತೆ
ಕುಲಶೇಖರ ಹೆದ್ದಾರಿ ಪಕ್ಕದಲ್ಲಿ ಸುರಂಗ ಕೊರೆಯುವ ಕೆಲಸ ಈಗಾಗಲೇ ಆರಂಭಗೊಂಡಿದ್ದು, ಸುಮಾರು 100 ಮೀ. ಸಾಗಿದೆ. ಬಹಳಷ್ಟು ಸವಾಲಿನ ಕೆಲಸ ಇದಾಗಿರುವುದರಿಂದ ಮುಂಜಾಗರೂಕತೆ ವಹಿಸಲಾಗಿದೆ. ಸಾಮಾನ್ಯವಾಗಿ ಸುರಂಗ ಕೊರೆಯುತ್ತ ಪ್ರತಿ ಅರ್ಧ ಮೀ.ಗೊಂದರಂತೆ ಉಕ್ಕಿನ ಅರ್ಧ ವೃತ್ತಾಕಾರದ ರಾಡ್‌ ಅಳವಡಿಸುತ್ತಾರೆ. ಆದರೆ ಕೊಂಗೂರುಮಠ ಸಮೀಪ, ಸುರಂಗದ ಇನ್ನೊಂದು ಪಾರ್ಶ್ವದಲ್ಲಿ ಎತ್ತರದ ಗುಡ್ಡ ಇದ್ದು, ಅಲ್ಲಿಂದ ಕಳೆದ ಸಲದ ಮಳೆಗೆ ಮಣ್ಣು ಜರಿದು ಬಿದ್ದಿತ್ತು. ಹೀಗಾಗಿ ಸಾಕಷ್ಟು ಎಚ್ಚರಿಕೆ ವಹಿಸಲಾಗುತ್ತಿದೆ. ಸ್ಟೀಲ್‌ ಸಪೋರ್ಟ್‌ ಅಥವಾ ರಿಬ್‌ ಸಪೋರ್ಟ್‌ ನಿರ್ಮಿಸುವ ಕೆಲಸ ನಡೆಯುತ್ತಿದೆ. ಇಲ್ಲಿ ಸುರಂಗ ಕೊರೆತ ಇನ್ನಷ್ಟೇ ಆರಂಭವಾಗಬೇಕು.

ಬದಿಯಲ್ಲಿ  ಸುರಂಗ; ಮೇಲ್ಗಡೆ ರಸ್ತೆ…!
ಈಗ ರೈಲುಗಳು ಸಂಚರಿಸುವ ಸುರಂಗಕ್ಕೆ ಸಮಾನಾಂತರವಾಗಿ ಇನ್ನೊಂದು ಸುರಂಗ ನಿರ್ಮಾಣ ಸವಾಲಿನ ಕೆಲಸ. ಜತೆಗೆ ಸುರಂಗದ ಮೇಲ್ಭಾಗದಲ್ಲಿ ರಸ್ತೆ, ಹತ್ತಿರದಲ್ಲಿ ಜನವಸತಿಯೂ ಇದೆ. ಹೀಗಾಗಿ ಬಹಳಷ್ಟು ಎಚ್ಚರಿಕೆಯಿಂದ ಈ ಕಾಮಗಾರಿ ನಡೆಸಬೇಕಿದೆ. 

Advertisement

70 ಕೋಟಿ ರೂ. ವೆಚ್ಚ
ಈ ಹೊಸ ಸುರಂಗ ಮಾರ್ಗವನ್ನು ಸುಮಾರು 70 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಸುರಂಗ ಕೊರೆಯುವಲ್ಲಿ ಇರುವುದು ಜೇಡಿ ಮಣ್ಣು. ಬೃಹತ್‌ ಬಂಡೆಗಳೂ ಇವೆ. ಅವುಗಳನ್ನು ಮದ್ದು ಉಪಯೋಗಿಸಿ ಒಡೆದು ಮುಂದುವರಿಯಬೇಕಾಗಿದೆ. ಕಳೆದ ಮಳೆಗಾಲದಲ್ಲಿ ಕೊಂಗೂರುಮಠ ಪ್ರದೇಶದ ಹೊರಭಾಗದಲ್ಲಿ ಗುಡ್ಡ ಕುಸಿದಿತ್ತು. ಈಗ ಇಂತಹ ಅನಾಹುತ ಆಗದಂತೆ ಕ್ರಮ ವಹಿಸಲಾಗಿದೆ. ಆದರೂ ಮಳೆಗಾಲದಲ್ಲಿ ಎಂಥ ಪರಿಸ್ಥಿತಿ ಎದುರಾಗಬಹುದು ಎಂಬ ಆತಂಕ ತಪ್ಪಿದ್ದಲ್ಲ.

ಸುರಕ್ಷೆ ಪಾಲಿಸಿ ಕಾಮಗಾರಿ
ಈಗಾಗಲೇ ಕುಲಶೇಖರ ಭಾಗದಲ್ಲಿ ರೈಲ್ವೇ ಸುರಂಗ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಬಹಳಷ್ಟು ಸುರಕ್ಷಾ ವಿಧಾನಗಳನ್ನು ಅಳವಡಿಸಿ ಕೊಳ್ಳಲಾಗಿದೆ. ಮುಂದಿನ 2 ವರ್ಷದೊಳಗೆ ಇದು ಕೊನೆಗೊಳ್ಳುವುದು ನಿರೀಕ್ಷಿತ.
– ಚಾಕೋ ಜಾರ್ಜ್‌, ಉಪ ಮುಖ್ಯ ಅಭಿಯಂತರ, ದಕ್ಷಿಣ ರೈಲ್ವೇ

— ದಿನೇಶ್‌ ಇರಾ
– ಚಿತ್ರ : ಸತೀಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next